ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್ ಚಾಲಕರ ವಿರುದ್ಧ ಪ್ರಕರಣ

ಕೂಲಿಂಗ್ ಪೇಪರ್ ಮತ್ತು ಜಾಹೀರಾತು ಪೇಪರ್
Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಬಹುತೇಕ ಎಲ್ಲ ಬಿಎಂಟಿಸಿ ಬಸ್‌ಗಳ ಕೂಲಿಂಗ್ ಪೇಪರ್ ಮತ್ತು ಜಾಹೀರಾತು ಪೇಪರ್‌ಗಳನ್ನು ತೆಗೆಸಲಾಗಿದ್ದು, ನಿಯಮ ಪಾಲಿಸದ ಕೆಲವು ಖಾಸಗಿ ಬಸ್‌ಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

`ಕೂಲಿಂಗ್ ಪೇಪರ್ ಮತ್ತು ಜಾಹೀರಾತು ಪೇಪರ್‌ಗಳನ್ನು ತೆಗೆಸಲು ಬಿಎಂಟಿಸಿ ಅಧಿಕಾರಿಗಳು ಮಂಗಳವಾರದವರೆಗೆ (ಡಿ.25) ಗಡುವು ಕೇಳಿದ್ದರು. ಹೀಗಾಗಿ ಗಡುವು ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಬಹುತೇಕ ಎಲ್ಲ ಬಿಎಂಟಿಸಿ ಬಸ್‌ಗಳಲ್ಲಿ ಕೂಲಿಂಗ್ ಪೇಪರ್ ಮತ್ತು ಜಾಹೀರಾತು ಪೇಪರ್‌ಗಳನ್ನು ತೆಗೆಸಲಾಗಿದೆ. ವಾಹನಗಳ ಗಾಜುಗಳಿಗೆ ಅಳವಡಿಸಲಾಗಿದ್ದ ಕೂಲಿಂಗ್ ಪೇಪರ್ ತೆಗೆಸದವರ ವಿರುದ್ಧ ಇಲ್ಲಿಯವರೆಗೆ ಒಟ್ಟು 71 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು, 71 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ' ಎಂದು ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು.

`ವಾಹನಗಳ ಕೂಲಿಂಗ್ ಪೇಪರ್ ಅನ್ನು ಕಡ್ಡಾಯವಾಗಿ ತೆಗೆಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲೂ ಕೂಲಿಂಗ್ ಪೇಪರ್ ತೆಗೆಸುವ ಕಾರ್ಯವನ್ನು ಮೇ ತಿಂಗಳಿಂದ ಆರಂಭಿಸಲಾಗಿತ್ತು. ಆ ನಂತರ ಕೂಲಿಂಗ್ ಪೇಪರ್ ತೆಗೆಸಲು ಹಲವು ಬಾರಿ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಕೆಲವು ಖಾಸಗಿ ಬಸ್‌ಗಳಲ್ಲಿ ಕೂಲಿಂಗ್ ಪೇಪರ್ ಮತ್ತು ಜಾಹೀರಾತು ಪೇಪರ್ ತೆಗೆಸಲಾಗಿಲ್ಲ. ಇಂತಹ ಬಸ್‌ಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಲಾಗುತ್ತಿದೆ' ಎಂದು ಅವರು ತಿಳಿಸಿದರು.

ಮೋಟಾರು ವಾಹನ ಕಾಯ್ದೆಯ 100ನೇ ನಿಯಮದ ಪ್ರಕಾರ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜು ಶೇ 70ರಷ್ಟು ಪಾರದರ್ಶಕವಾಗಿರಬೇಕು. ಹಾಗೆಯೇ ವಾಹನದ ಎರಡೂ ಬದಿಯ ಗಾಜುಗಳು ಶೇ 50ರಷ್ಟು ಪಾರದರ್ಶಕವಾಗಿರಬೇಕು. ಗಾಜಿನ ಮೇಲೆ ಯಾವುದೇ ಬಗೆಯ ಕೂಲಿಂಗ್ ಪೇಪರ್ ಅಂಟಿಸುವಂತಿಲ್ಲ ಎಂದು ನಿಯಮವಿದೆ.

ಸ್ಪಷ್ಟ ನಿರ್ದೇಶನವಿಲ್ಲ
`ವಾಹನಗಳ ಗಾಜುಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ ತೆಗೆಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಬಣ್ಣದ ಗಾಜನ್ನು ಹೊಂದಿರುವ ವಾಹನಗಳಲ್ಲಿ ಗಾಜನ್ನೇ ಬದಲಿಸಬೇಕಾಗುತ್ತದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾದ ನಿರ್ದೇಶನ ನೀಡಿಲ್ಲ. ಈ ಬಗ್ಗೆ ಸರ್ಕಾರ ವಿವೇಚನೆ ನಡೆಸಿ, ಬಣ್ಣದ ಗಾಜನ್ನೂ ಬದಲಿಸುವ ಬಗ್ಗೆ ನಿಯಮ ರೂಪಿಸಬೇಕಾಗಿದೆ'

ಡಾ.ಎಂ.ಎ.ಸಲೀಂ,ಹೆಚ್ಚುವರಿ ಪೊಲೀಸ್ ಆಯುಕ್ತ,ನಗರ ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT