ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ

Last Updated 1 ಜೂನ್ 2013, 13:01 IST
ಅಕ್ಷರ ಗಾತ್ರ

ಚನ್ನಪಟ್ಟಣ:  `ತಾಲ್ಲೂಕಿನಲ್ಲಿ ಸುಮಾರು ರೂ.35 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಖಾಸಗಿ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಇನ್ನೆರಡು ವರ್ಷದೊಳಗೆ ತಲೆ ಎತ್ತಲಿದೆ' ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.

ಶುಕ್ರವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, `ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇಲ್ಲಿನ ನಗರಸಭೆ ಜಂಟಿಯಾಗಿ ಈ ಕಟ್ಟಡವನ್ನು ನಿರ್ಮಿಸುತ್ತಿವೆ. ಈ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

`ಕಳೆದ ವರ್ಷವೇ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಆದರೆ ಕೆಲವು ತಾಂತ್ರಿಕ ಆಡಚಣೆಗಳಿಂದ ಕಾಮಗಾರಿಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಈಗ ಹಲವು ವಿರೋಧದ ನಡುವೆಯೂ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಟ್ಟಡ ನಿರ್ಮಿಸಲು ಯಾರೂ ಅಡಚಣೆ ಮಾಡದೆ ಸಹಕರಿಸಬೇಕು' ಎಂದು ಮನವಿ ಮಾಡಿದರು.

ಎಲ್ಲರೂ ಗೈರು:  ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿತ್ತಾದರೂ ನಗರಸಭಾ ಸದಸ್ಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಿ ಸರಳವಾಗಿ ಆಚರಿಸಲಾಯಿತು.

ಶಂಕುಸ್ಥಾಪನೆ ನೆರವೇರಿಸಬೇಕಿದ್ದ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ, ಉಪಸ್ಥಿತರಿರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಪೌರಾಡಳಿತ ಸಚಿವ ಖಮರುಲ್ಲಾ ಇಸ್ಲಾಮ್, ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುದ್ದುರಾಜ್ ಯಾದವ್, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ಎಂ.ವಿ.ರಾಜಶೇಖರನ್, ಪುಟ್ಟಣ್ಣ, ಇ.ಕೃಷ್ಣಪ್ಪ, ಸೈಯದ್ ಆಘಾ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ನಗರಸಭಾ ಪೌರಾಯುಕ್ತ ಪದ್ಮನಾಭ, ನಗರಸಭಾ ಸದಸ್ಯರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ಮಾಜಿ ನಗರಸಭಾಧ್ಯಕ್ಷೆ ರೇಷ್ಮಾಭಾನು, ಮಾಜಿ ಉಪಾಧ್ಯಕ್ಷ ಕೆ.ಎಲ್.ಕುಮಾರ್, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಚಿದಾನಂದ್, ಹಾಲಿ ನಗರಸಭಾ ಸದಸ್ಯರಾದ ಬಿ.ಪಿ.ಮುದ್ದುಕೃಷ್ಣೇಗೌಡ, ಜಕಿ ಅಹಮದ್ ಖಾನ್ ಇತರರು ಭಾಗವಹಿಸಿದ್ದರು.

35 ನಿಮಿಷದ್ಲ್ಲಲೇ ಮುಗಿದ ಕಾರ್ಯಕ್ರಮ: ಸುಮಾರು ರೂ.35 ಕೋಟಿ ಅಂದಾಜು ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ಕೇವಲ 35 ನಿಮಿಷದಲ್ಲಿ ಮುಕ್ತಾಯವಾಗಿದ್ದು ವಿಶೇಷವಾಗಿತ್ತು.

ಜೆಡಿಎಸ್ ನಗರಸಭಾ ಸದಸ್ಯರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಮತ್ತು ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT