ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳ ತಾರತಮ್ಯ: ಸರ್ಕಾರದಿಂದ ವರದಿ ಕೇಳಿದ ಎನ್‌ಸಿಪಿಸಿಆರ್

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನ್ವಯ ಖಾಸಗಿ ಶಾಲೆಗಳಿಗೆ ದಾಖಲಾಗಿರುವ ಮಕ್ಕಳನ್ನು ತಾರತಮ್ಯದಿಂದ ಕಾಣುತ್ತಿರುವ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್) ಈ ಕುರಿತು ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಆರ್‌ಟಿಇ ಅಡಿಯಲ್ಲಿ ದಾಖಲಾಗಿದ್ದ ಬಡವರ್ಗದ ನಾಲ್ವರು ಮಕ್ಕಳ ಮುಂದಲೆಯ ಕೂದಲನ್ನು ಕತ್ತರಿಸಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎನ್‌ಸಿಪಿಸಿಆರ್, ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಈ ಘಟನೆಯ ಬಗ್ಗೆ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಕ್ಷಣ ಇಲಾಖೆಗೆ ಎನ್‌ಸಿಪಿಸಿಆರ್ ಸೂಚಿಸಿದ್ದು, ಕ್ರಮ ಕೈಗೊಂಡಿರುವ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.
`ಈ ಘಟನೆಯಿಂದ ನೊಂದ ಮಕ್ಕಳ ಜೊತೆ ಸೂಕ್ತ ಆಪ್ತ ಸಮಾಲೋಚನೆ ಮತ್ತು ಈ ಮಕ್ಕಳ ಪೋಷಕರೊಂದಿಗೂ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದೇವೆ. ಹಾಗೆಯೇ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅನುಷ್ಠಾನ ಮಾಡುವಂತೆ ನಿರ್ದೇಶಿಸಬೇಕು ಎಂದೂ  ಸೂಚಿಸಲಾಗಿದೆ~ ಎಂದು ಎಸ್‌ಸಿಪಿಸಿಆರ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಘಟನೆಯ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದಿರುವ ಎನ್‌ಸಿಪಿಸಿಆರ್,  ಬಡವರ್ಗದ ಮಕ್ಕಳನ್ನು ಭೇದಭಾವದಿಂದ ಕಾಣುವ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಕುರಿತು ಖಾತರಿ ಒದಗಿಸುವಂತೆ ಸೂಚಿಸಿದೆ. ಈ ಬಗ್ಗೆ 30 ದಿವಸಗಳಲ್ಲಿ ವರದಿ ನೀಡುವಂತೆಯೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT