ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಗೆ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ ನಿರ್ವಹಣೆ

Last Updated 10 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಬೈಲಹೊಂಗಲ: ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯ ನಿರ್ವಹಣೆಯನ್ನು ಕೆ.ಎಲ್.ಇ. ಸಂಸ್ಥೆಗೆ ವಹಿಸುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರು ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಒಂದು ತಾಸಿಗೂ ಹೆಚ್ಚು ಕಾಲ ರಸ್ತೆತಡೆ  ನಡೆಸಿ, ಉಪವಿಭಾಗಾಧಿಕಾರಿ ವಿ.ಬಿ.ದಾಮಣ್ಣವರ ಮೂಲಕ ಮುಖ್ಯಮಂತ್ರಿ ಸದಾನಂದಗೌಡರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದ ಜಿ.ಪಂ.ಸದಸ್ಯ ಶಂಕರ ಮಾಡಲಗಿ ಮಾತನಾಡಿ `ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದರಿಂದ ಬಡ ಜನತೆಗೆ ರಕ್ತ ತಪಾಸಣೆ, ಎಕ್ಸರೇ, ಹೆರಿಗೆ ಭತ್ಯೆ ಮುಂತಾದ ವೈದ್ಯಕೀಯ ಸೇವೆಗಳ ಹಾಗೂ ಸರ್ಕಾರಿ ಉಚಿತ ಸೌಲಭ್ಯಗಳ ಮೇಲೆ ಉಂಟಾಗುತ್ತವೆ~ ಎಂದರು.

`ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಮಹಿಳೆಯರಿಗೆ ಉಚಿತ ಹೆರಿಗೆ ಹಾಗೂ ಸಂತಾನಹರಣ ಚಿಕಿತ್ಸೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಕೆ.ಎಲ್.ಇ. ಸಂಸ್ಥೆಯ ನಿರ್ದೇಶನದಂತೆ ಹಣ ನೀಡಬೇಕಾಗುತ್ತದೆ. ಆಸ್ಪತ್ರೆಯನ್ನು ಕೆ.ಎಲ್.ಇ. ಸಂಸ್ಥೆಗೆ ವಹಿಸುತ್ತಿರುವ ಶಾಸಕರ ಧೋರಣೆ ಖಂಡನೀಯ~ ಎಂದರು.

`ಈಗಿದ್ದ ಆಸ್ಪತ್ರೆಗೆ ಸರ್ಕಾರದಿಂದ ಹೆಚ್ಚಿನ ತಜ್ಞ ವೈದ್ಯರನ್ನು, ಸಿಬ್ಬಂದಿಯನ್ನು ಹಾಗೂ ಸೌಲಭ್ಯಗಳನ್ನು ಒದಗಿಸಲು ಶಾಸಕರು ಕ್ರಮ ಕೈಗೊಳ್ಳಬೇಕು. ಹತ್ತು ದಿನಗಳಲ್ಲಿ ಆಸ್ಪತ್ರೆಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು~ ಎಂದು ಮಾಡಲಗಿ ಹೇಳಿದರು.

ಈ ಸಂದರ್ಭದಲ್ಲಿ ಚಿತ್ರನಟ ಶಿವರಂಜನ ಬೋಳಣ್ಣವರ, ಸಂಗಯ್ಯ ದಾಬಿಮಠ, ಮಡಿವಾಳಪ್ಪ ಮೂಗಬಸವ, ಅಣ್ಣಪೂರ್ಣ ದೊಡವಾಡ, ದಯಾನಂದ ಚಿಕ್ಕಮಠ, ಮೂಗಬಸವ ಗ್ರಾಮದ ದಾನಪ್ಪಗೌಡ ಕುಸಲಾಪುರ ಮುಂತಾದವರು ಮಾತನಾಡಿ ಆಸ್ಪತ್ರೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಕ್ರಮವನ್ನು ವಿರೋಧಿಸಿದರು.

ರೈತಭವನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ ಬಳಿ ಒಂದು ತಾಸು ರಸ್ತೆ ತಡೆ ನಡೆಸಿ, ಉಪವಿಭಾಗಾಧಿಕಾರಿ ಕಾರ್ಯಾಲಯ ಬಳಿ  ಧರಣಿ ನಡೆಸಿತು.

ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಪುರಸಭೆ ಸದಸ್ಯ ಬಸವರಾಜ ಕಲಾದಗಿ, ಶಿವಾನಂದ ಬೆಟಗೇರಿ, ಸಯ್ಯದ ಸುಬಾನಿ, ಮಾಜಿ ಉಪಾಧ್ಯಕ್ಷ ಪತ್ರೆಪ್ಪ ವಾಲಿ, ಕುಮಾರ ದೇಶನೂರ, ರೆಹಮಾನ ನಂದಗಡ, ಶಂಕರ ಕುಡಸೋಮಣ್ಣವರ, ಕರವೇ ಘಟಕದ ಶಿವಾನಂದ ಕುರಬೆಟ್ಟ, ರಫೀಕ ಬಡೇಘರ, ವಕೀಲ ಎಂ.ಎಸ್.ಕುರಿ, ರಾಮನಗೌಡ ಪಾಟೀಲ ತಾಲ್ಲೂಕಿನ ಕರವೇ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT