ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಂಸ್ಥೆಯಾಗಿ ಅರ್ಥಶಾಸ್ತ್ರ ಶಾಲೆ: ವಿರೋಧ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರ ಶಾಲೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ರೀತಿಯಲ್ಲಿ ಸೊಸೈಟಿಗಳ ನೋಂದಣಿ ಕಾಯ್ದೆ ಅಡಿ ನೋಂದಾಯಿಸಬೇಕು~ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ನೇತೃತ್ವದ ಅಧ್ಯಯನ ಸಮಿತಿಯು ಶಿಫಾರಸು ಮಾಡಿದೆ. ಇದಕ್ಕೆ ವಿ.ವಿ ಶೈಕ್ಷಣಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

`ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ (2000) ಪ್ರಕಾರ ವಿ.ವಿ.ಯಲ್ಲಿ ಹೊಸ ವಿಭಾಗ ಅಥವಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶ ಇದೆಯೇ ಹೊರತು ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಅವಕಾಶ ಇಲ್ಲವೇ ಇಲ್ಲ~ ಎಂದು ವಿ.ವಿ ಅಧ್ಯಾಪಕರು ಹೇಳಿದ್ದಾರೆ. `ಕಾಯ್ದೆ ಪ್ರಕಾರ ವಿಶ್ವ ದರ್ಜೆಯ ಶಾಲೆ ಅಥವಾ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಉದ್ಯಮಿ ಡಾ.ಸೀತಾರಾಮ್ ಜಿಂದಾಲ್ ಅವರಿಂದ 100 ಕೋಟಿ ರೂಪಾಯಿ ದೇಣಿಗೆ ಪಡೆಯುವುದಕ್ಕೂ ಯಾವ ತಕರಾರೂ ಇಲ್ಲ. ಆದರೆ ನಿಯಮಬಾಹಿರವಾಗಿ ವಿ.ವಿ. ಹೆಸರು ಬಳಸಿಕೊಂಡು ಖಾಸಗಿ ಸಂಸ್ಥೆಯನ್ನು ಸ್ಥಾಪಿಸಲು ಹೊರಟಿರುವ ಹುನ್ನಾರಕ್ಕೆ ಎಲ್ಲರ ವಿರೋಧವಿದೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಲೆಯ ಪೂರ್ವಾಪರ: ಇಂಗ್ಲೆಂಡ್‌ನಲ್ಲಿರುವ `ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್~ ಮಾದರಿಯಲ್ಲಿ ಬೆಂಗಳೂರು ಅರ್ಥಶಾಸ್ತ್ರ ಶಾಲೆಯನ್ನು ಸ್ಥಾಪಿಸಬೇಕೆಂಬುದು ಮೂಲತಃ ಪ್ರಭುದೇವ್ ಅವರ ಚಿಂತನೆ. ತಮ್ಮ  ಮಹತ್ವಾಕಾಂಕ್ಷೆಯ ಪ್ರಸ್ತಾವವನ್ನು ಮೇ 3ರಂದು ನಡೆದ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ವಿಶೇಷ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಉದ್ದೇಶಿತ ಶಾಲೆಯ ಆಡಳಿತ, ಸಂಘಟನೆ ಮತ್ತು ಕಾರ್ಯನಿರ್ವಹಣೆಯ ಸ್ವರೂಪವನ್ನು ನಿರ್ಧರಿಸಲು ಕುಲಪತಿಯವರ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚಿಸಲಾಯಿತು.

ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ, ನವದೆಹಲಿಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಕುರಿತ ಭಾರತೀಯ ಸಂಶೋಧನಾ ಪರಿಷತ್ತಿನ ನಿರ್ದೇಶಕ ಪ್ರೊ.ಪಾರ್ಥಸಾರಥಿ ಶೋಮ್, ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನಿರ್ದೇಶಕ ಪ್ರೊ.ಎಸ್.ಸಡಗೋಪನ್, ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂಬಿ) ಪ್ರೊ.ರೂಪ ಚಂದ್, ಸಮಾಜಶಾಸ್ತ್ರದ ಸಹಪ್ರಾಧ್ಯಾಪಕ ಡಾ.ಆರ್.ರಾಜೇಶ್ ಅವರು ಸದಸ್ಯರಾಗಿದ್ದ ಸಮಿತಿಯು ನವೆಂಬರ್‌ನಲ್ಲಿ ವರದಿ ಸಲ್ಲಿಸಿತು.

ಒಟ್ಟು 52 ಪುಟಗಳ ವರದಿಯಲ್ಲಿ ಶಾಲೆ ಸ್ಥಾಪನೆಯ ಉದ್ದೇಶ, ಮುನ್ನೋಟ, ಸಾಂಸ್ಥಿಕ ಮತ್ತು ಆಡಳಿತ ಸಂರಚನೆ, ಆಡಳಿತದ ಅಂಗ ಸಂಸ್ಥೆಗಳು, ಅಧಿಕಾರ ವರ್ಗ, ಪಠ್ಯಕ್ರಮ, ಕೋರ್ಸುಗಳು, ಪ್ರವೇಶ ನೀತಿ, ಸಿಬ್ಬಂದಿ ನೇಮಕ, ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು ನೀಲನಕ್ಷೆ, ಆರ್ಥಿಕ ಮುನ್ನೋಟ ಮೊದಲಾದ ಅಂಶಗಳನ್ನು ವಿವರಿಸಲಾಗಿದೆ. `ಶಾಲೆಯ ಸ್ಥಾಪನೆಗಾಗಿ ನೀರು, ರಸ್ತೆ ಮೊದಲಾದ ಕನಿಷ್ಠ ಸೌಕರ್ಯಗಳು ಇರುವ, ನಗರಕ್ಕೆ ಸಮೀಪದಲ್ಲಿರುವ 50 ಎಕರೆ ಜಾಗವನ್ನು ಕರ್ನಾಟಕ ಸರ್ಕಾರ ಅಥವಾ ಬೆಂಗಳೂರು ವಿ.ವಿ ಮಂಜೂರು ಮಾಡಬೇಕು. ಈ ಜಮೀನಿಗೆ ಆದಷ್ಟು ಕಡಿಮೆ ಬೆಲೆ ನಿಗದಿ ಮಾಡಬೇಕು~ ಎಂದು ಹೇಳಿರುವ ಸಮಿತಿಯು ಜಮೀನಿನ ಒಟ್ಟು ಬೆಲೆ ಸುಮಾರು 5 ಕೋಟಿ ರೂಪಾಯಿ ಎಂದು ಸ್ವಯಂ ತಾನೇ ನಿಗದಿ ಮಾಡಿದೆ.

`ಉದ್ದೇಶಿತ ಶಾಲೆಯು ಸಂಪೂರ್ಣ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬರಬೇಕು~ ಎಂದು ಪ್ರತಿಪಾದಿಸಿರುವ ಸಮಿತಿಯು `ಈ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳಬಾರದು~ ಎಂದು ಅಭಿಪ್ರಾಯಪಟ್ಟಿದೆ.

ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ತರಗತಿಗಳ ಪ್ರವೇಶ, ಪಠ್ಯಕ್ರಮ, ಪರೀಕ್ಷೆ, ಪದವಿ ಪ್ರದಾನ ಮೊದಲಾದ ವಿವರಗಳನ್ನು ವರದಿ ಒಳಗೊಂಡಿದೆ.

ಶಾಲೆಯ ಆಡಳಿತದ ಭಾಗವಾಗಿ ನಿರ್ದೇಶಕರ ಮಂಡಳಿ, ಕಾರ್ಯನಿರ್ವಾಹಕ ಪರಿಷತ್ತು, ನಾಮನಿರ್ದೇಶಿತರ ಸದಸ್ಯರ ಸಮಿತಿ, ಹಣಕಾಸು ಸಮಿತಿಗಳು ಇರಲಿವೆ. ಈ ಯಾವ ಸಮಿತಿಗಳಲ್ಲೂ ವಿ.ವಿ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಿಲ್ಲ. ಈ ಬಗ್ಗೆ `ಪ್ರಜಾವಾಣಿ~ ಪ್ರಶ್ನಿಸಿದಾಗ ಉತ್ತರಿಸಿದ ಪ್ರಭುದೇವ್, `ನಿರ್ದೇಶಕರ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ ನಾನೇ ಇರುತ್ತೇನೆ. ಶಾಲೆ ಅಸ್ತಿತ್ವಕ್ಕೆ ಬಂದ ಮೇಲೆ ಮಂಡಳಿಯಿಂದ ರಚಿತವಾದ ಆಯ್ಕೆ ಸಮಿತಿಯು ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಅದಕ್ಕೆ ವಿ.ವಿ ಕುಲಾಧಿಪತಿ ಅಂದರೆ ರಾಜ್ಯಪಾಲರಿಂದ ಅನುಮೋದನೆ ಪಡೆದುಕೊಳ್ಳುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ~ ಎಂದರು.

ಸಮಿತಿ ವರದಿ ಸಿದ್ಧವಾದ ಮೇಲೆ ಡಿಸೆಂಬರ್ 27ರಂದು ಕರೆದಿದ್ದ ಶೈಕ್ಷಣಿಕ ಪರಿಷತ್ತಿನ ಸಭೆಯಲ್ಲಿ ಅದನ್ನು ಮಂಡಿಸಿಲ್ಲ. ಡಿ. 31ರಂದು ಕುಲಪತಿಯವರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಅರ್ಥಶಾಸ್ತ್ರ ಶಾಲೆಯನ್ನು ಸ್ಥಾಪಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ತಿಳಿಸಬೇಕೆಂದು ಕೋರಿದ್ದರು. ಅಭಿಪ್ರಾಯ ತಿಳಿಸಲು ತಮ್ಮ ವೈಯಕ್ತಿಕ ಇ-ಮೇಲ್ ವಿಳಾಸವನ್ನು ನೀಡಿದ್ದರು.

ತಮ್ಮ ಹೇಳಿಕೆಯಲ್ಲಿ ಪ್ರಭುದೇವ್ ಅವರು ಅಧ್ಯಯನ ಸಮಿತಿ ವರದಿಯ ವಿವರವನ್ನು ನೀಡಿರಲಿಲ್ಲ. ಬದಲಿಗೆ ಶಾಲೆಗೆ 100 ಕೋಟಿ ರೂಪಾಯಿ ದೇಣಿಗೆ ನೀಡುವ ಉದ್ಯಮಿ ಡಾ.ಸೀತಾರಾಮ್ ಜಿಂದಾಲ್ ಅವರ ಹೆಸರನ್ನು ಉದ್ದೇಶಿತ ಶಾಲೆಗೆ ನಾಮಕರಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು.

ಅಧ್ಯಾಪಕರ ಆಕ್ರೋಶ: ವಿ.ವಿ ಹಿರಿಯ ಅಧ್ಯಾಪಕರಾದ ಡಾ.ಕೆ.ಪಿ.ಶ್ರೀನಾಥ್, ಡಾ.ರಾಜೇಂದ್ರಕುಮಾರ್, ಡಾ.ಮಮತಾರಾವ್, ಡಾ.ಎಂ.ಜಿ.ಕೃಷ್ಣನ್, ಡಾ.ಎಂ.ಎಸ್.ತಳವಾರ್ ಮೊದಲಾದವರು `ಪ್ರಜಾವಾಣಿ~ ಜತೆ ಮಾತನಾಡಿ `ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳನ್ನು ನೋಡಿದರೆ ಉದ್ದೇಶಿತ ಶಾಲೆಗೂ ವಿ.ವಿ.ಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವಿಶ್ವ ವಿದ್ಯಾಲಯ ಹೆಸರು ಮತ್ತು ಅಧಿಕಾರ ಬಳಸಿಕೊಂಡು ಖಾಸಗಿ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆ ಇದ್ದ ಹಾಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಅಧ್ಯಯನ ಸಮಿತಿಯಲ್ಲಿ ವಿ.ವಿ ಅರ್ಥಶಾಸ್ತ್ರ ವಿಭಾಗದ ಯಾರೊಬ್ಬರೂ ಇಲ್ಲ. ಏಳು ಸದಸ್ಯರ ಪೈಕಿ ಒಂದಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ಅರ್ಥಶಾಸ್ತ್ರದ ಹಿನ್ನೆಲೆ ಇಲ್ಲ. ಕಡೇ ಪಕ್ಷ ಸಮಿತಿಯ ಸಂಚಾಲಕ ಸ್ಥಾನಕ್ಕಾದರೂ ವಿ.ವಿ.ಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಅಥವಾ ಅಧ್ಯಾಪಕರನ್ನು ನೇಮಿಸಿಕೊಳ್ಳಬಹುದಿತ್ತು~ ಎಂದು ಅವರು ಅಭಿಪ್ರಾಯಪಟ್ಟರು.

`ಸಮಿತಿಯ ಸದಸ್ಯರು ಕಾರ್ಪೊರೇಟ್ ರಂಗದ ಪರಿಣತರೇ ಇರಬಹುದು, ದೊಡ್ಡ ಮೇಧಾವಿಗಳೇ ಇರಬಹುದು. ಆದರೆ ಅವರಲ್ಲಿ ಯಾರೊಬ್ಬರಿಗೂ ವಿ.ವಿ ಕಾಯ್ದೆ ಬಗ್ಗೆ ಸ್ವಲ್ಪವೂ ತಿಳಿದಂತಿಲ್ಲ. ಹೀಗಾಗಿ ಅನುಷ್ಠಾನಯೋಗ್ಯವಲ್ಲದ ಶಿಫಾರಸುಗಳನ್ನು  ಮಾಡಿದ್ದಾರೆ~ ಎಂದು ಅವರು ಆರೋಪಿಸಿದರು.

`ಸೊಸೈಟಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಯಾರು ಬೇಕಾದರೂ ಸ್ಥಾಪಿಸಿಕೊಳ್ಳಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹ ಹಕ್ಕು ಎಲ್ಲ ಪ್ರಜೆಗಳಿಗೂ ಇದೆ. ಆದರೆ ವಿ.ವಿ ಚೌಕಟ್ಟಿನಲ್ಲಿ ಖಾಸಗಿ ಸಂಸ್ಥೆ ಸ್ಥಾಪಿಸಲು ಯಾರಿಗೂ ಹಕ್ಕಿಲ್ಲ~ ಎಂದು ಅವರು ವಾದಿಸಿದರು.

`ರಾಮನ್ ಸಂಶೋಧನಾ ಸಂಸ್ಥೆಯಂತಹ ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಯೇ ಪದವಿ ಪ್ರದಾನ ಮಾಡುತ್ತಿಲ್ಲ. ಯಾವುದೇ ಸಂಸ್ಥೆ ಸ್ವಾಯತ್ತ ಸ್ಥಾನಮಾನ ಪಡೆಯಲು ನಿಗದಿತ ಅರ್ಹತೆಯನ್ನು ಹೊಂದಿರಬೇಕು. ವಿ.ವಿ.ಗಳಿಗೆ ಮಾತ್ರ ಪದವಿ ನೀಡುವ ಅಧಿಕಾರ ಇರುತ್ತದೆ. ಇನ್ನೂ ಹುಟ್ಟೇ ಇರದ ಅರ್ಥಶಾಸ್ತ್ರ ಶಾಲೆಯು ಪದವಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಿಕೊಂಡಿರುವುದು ವಿವೇಚನಾರಹಿತವಾಗಿದೆ~ ಎಂದು ಅವರು ನುಡಿದರು.

`ಈಗಾಗಲೇ ಇರುವ ಅರ್ಥಶಾಸ್ತ್ರ ವಿಭಾಗವನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ರೂಪಿಸಬಹುದಿತ್ತು. ಅದರ ಬದಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯವೇನಿದೆ? ಒಂದೇ ವಿ.ವಿ ಆವರಣದಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುವುದಿಲ್ಲವೇ?~ ಎಂದು ಅವರು ಪ್ರಶ್ನಿಸಿದರು.

`ನಮಗಾಗಲಿ, ಅಧಿಕಾರಿಗಳಿಗಾಗಲಿ ಶಾಲೆ ಬಗ್ಗೆ ಕಿಂಚಿತ್ ಮಾಹಿತಿ ನೀಡಿಲ್ಲ. ಇನ್ನು ವರದಿಯ ವಿವರವನ್ನು ಸಂಪೂರ್ಣವಾಗಿ ಬಹಿರಂಗಗೊಳಿಸದೇ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಿರುವುದು ದಿಕ್ಕುತಪ್ಪಿಸುವ ತಂತ್ರ. ಮತ್ತು ಸೊಸೈಟಿ ಕಾಯ್ದೆ ಅಡಿ ಅಸ್ತಿತ್ವಕ್ಕೆ ಬರುವ ಸಂಸ್ಥೆಯಲ್ಲಿ ರಾಜ್ಯಪಾಲರಿಗೆ ಯಾವುದೇ ಪಾತ್ರ ಇರುವುದಿಲ್ಲ~ ಎಂದು ಅವರು ವಿಶ್ಲೇಷಿಸಿದರು.

ವರದಿಯೇ ಅಂತಿಮವಲ್ಲ: ಪ್ರಭುದೇವ್
`ಉದ್ದೇಶಿತ ಅರ್ಥಶಾಸ್ತ್ರ ಶಾಲೆ ಸ್ಥಾಪನೆಗೆ ಸಂಬಂಧಿಸಿದಂತೆ ಅಧ್ಯಯನ ಸಮಿತಿ ವರದಿಯ ಶಿಫಾರಸುಗಳೇ ಅಂತಿಮವಲ್ಲ. ಅವನ್ನು ಬದಲಾಯಿಸಲು ಅವಕಾಶ ಇದೆ. ಬದಲಾವಣೆ ಮಾಡದೇ ಯಥಾವತ್ತಾಗಿ ಜಾರಿಗೆ ತರಲೂಬಹುದು~ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ಹೇಳಿದರು.

`ವರದಿಯನ್ನು ಈ ತಿಂಗಳ 13ರಂದು ನಡೆಯುವ ಶೈಕ್ಷಣಿಕ ಪರಿಷತ್ತಿನ ಸಭೆ ಮುಂದಿಡುತ್ತೇನೆ. ನಂತರ ಸಿಂಡಿಕೇಟ್ ಸಭೆಯಿಂದ ಅಂಗೀಕಾರ ಪಡೆದು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು~ ಎಂದು ಅವರು ತಿಳಿಸಿದರು.
 
ಶಾಲೆಯನ್ನು ಖಾಸಗಿ ಸಂಸ್ಥೆಯನ್ನಾಗಿ ನೋಂದಾಯಿಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಅದರಲ್ಲಿ ತಪ್ಪೇನು? ಅಂತರರಾಷ್ಟ್ರೀಯ ಮಟ್ಟದ ಶಾಲೆಯ ಕಾರ್ಯನಿರ್ವಹಣೆಗೆ ಸ್ವತಂತ್ರ ಅಸ್ತಿತ್ವ ಅವಶ್ಯ~ ಎಂದರು. `ಕರ್ನಾಟಕ ವಿ.ವಿ ಕಾಯ್ದೆ ಪ್ರಕಾರವೇ ಶಾಲೆಯನ್ನು ಸ್ಥಾಪಿಸಲಾಗುವುದು. ನಾನು ಕುಲಪತಿ ಆಗಿರುವವರೆಗೆ ವಿ.ವಿ ನಿಯಂತ್ರಣದಲ್ಲೇ ಇರುತ್ತದೆ. ನಂತರದಲ್ಲಿ ಏನಾಗುತ್ತದೋ ಮುಂದೆ ಬರುವವರು ಅದನ್ನು ತೀರ್ಮಾನಿಸುತ್ತಾರೆ~ ಎಂದು ಅವರು ನುಡಿದರು.

`ಸಂಶೋಧನಾ ಕ್ಷೇತ್ರದಲ್ಲಿನ ಇತ್ತೀಚಿನ ಪರಿಕಲ್ಪನೆಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಂಡು ಏಕಕಾಲದಲ್ಲಿ ಪ್ರಾದೇಶಿಕವೂ ಜಾಗತಿಕವೂ ಆದ ಉನ್ನತ ಮಟ್ಟದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದು ನಮ್ಮ ಉದ್ದೇಶ~ ಎಂದು ಅವರು ಹೇಳಿದರು.

ನನಗೆ ಏನೂ ಗೊತ್ತಿಲ್ಲ: ಮೈಲಾರಪ್ಪ

`ನಾನು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದಿದೆ. ಸ್ಕೂಲ್ ಆಫ್ ಎಕನಾಮಿಕ್ಸ್ ಬಗ್ಗೆ ಪತ್ರಿಕೆಗಳ ಮೂಲಕ ಅಲ್ಪಸ್ವಲ್ಪ ತಿಳಿದುಕೊಂಡಿದ್ದೇನೆ.

ಶಾಲೆ ಸ್ಥಾಪನೆಯ ಯೋಜನೆಗೆ ಸಂಬಂಧಿಸಿದಂತೆ ಕುಲಪತಿಯವರಾಗಲಿ, ಅಧ್ಯಯನ ಸಮಿತಿಯ ಯಾವೊಬ್ಬ ಸದಸ್ಯರೂ ನನ್ನನ್ನು ಸಂಪರ್ಕಿಸಿಲ್ಲ. ನನಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ~ ಎಂದು ರಿಜಿ್ಟ್ರಾರ್ ್ರೊ.ಬಿ.ಸಿ.ಮೈಲಾರ್ಪ ಹೇಳಿದರು.

ಕಾಂಕ್ರೀಟ್ ಕಾಡಾಗುವ ಆತಂಕ
ವಿ.ವಿ ಜ್ಞಾನಭಾರತಿ ಆವರಣದಲ್ಲಿ ಈಗಾಗಲೇ ಹತ್ತಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಕ್ರೀಡಾ ಪ್ರಾಧಿಕಾರ, ಕಲಾ ಗ್ರಾಮ, ಪರಮಾಣು ಶಕ್ತಿ ಇಲಾಖೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಸಂಸ್ಥೆ (ಐಸೆಕ್), ನ್ಯಾಕ್, ಎನ್‌ಸಿಟಿಇ, ಸರ್ಕಾರಿ ಮುದ್ರಣಾಲಯ, ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ, ಇಂದಿರಾಗಾಂಧಿ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳು ವಿ.ವಿ ಜಾಗವನ್ನು ಪಡೆದುಕೊಂಡಿವೆ. ಅಪರೂಪದ ಸಸ್ಯ ವೈವಿಧ್ಯವನ್ನು ಹೊಂದಿರುವ ಜ್ಞಾನಭಾರತಿ ಆವರಣವನ್ನು ಜೀವ ವೈವಿಧ್ಯ ತಾಣವನ್ನಾಗಿ ರೂಪಿಸುವ ಕಾರ್ಯಕ್ರಮವೂ ನೆನೆಗುದಿಗೆ ಬಿದ್ದಿದೆ. ಹೊಸ ಸಂಸ್ಥೆಗಳ ಕಟ್ಟಡಗಳು ತಲೆ ಎತ್ತಲು ಅವಕಾಶ ನೀಡುತ್ತಾ ಹೋದರೆ ಹಸಿರು ವನದಂತಿರುವ ಜ್ಞಾನಭಾರತಿ ಆವರಣ ಕಾಂಕ್ರೀಟ್ ಾಡಾಗಿ ಪರಿವರ್ತನೆ ಆಗುವ ಅಪಾಯವಿೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT