ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣ ವಿರೋಧಿಸಿ ಅಂಗನವಾಡಿ ಸಿಬ್ಬಂದಿ ಪ್ರತಿಭಟನೆ

Last Updated 11 ಜನವರಿ 2014, 5:32 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಐಸಿಡಿಎಸ್‌ ಯೋಜನೆ ಪುನರ್‌ ರಚಿಸುವ ನೆಪದಲ್ಲಿ ‘ಮಿಷನ್‌ ಮೋಡ್‌’ ಹೆಸರಿನಲ್ಲಿ ಖಾಸಗೀಕರಣಗೊಳಿಸಲು ಹೊರಟಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸೂಕ್ತ ಭದ್ರತೆಯ ವ್ಯವಸ್ಥೆ ಇಲ್ಲದಿರುವಾಗ ‘ಮಿಷನ್‌ ಮೋಡ್‌’ ವ್ಯವಸ್ಥೆ ಬೇಕೇ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರ ಬಂದ್‌ ಮಾಡಿ ಪ್ರತಿಭಟಿಸಿದರು.

ಅಂಗನವಾಡಿ ಸಿಬ್ಬಂದಿಗೆ ನೀಡುವ ಗೌರವ ಧನ ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲು ಅಸಾಧ್ಯವಾಗಿದೆ. ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ‘ಸಿ’ ಮತ್ತು ‘ಡಿ’ ಗ್ರೂಫ್ ಎಂದು ಮಾಡಬೇಕು. ಮಾಸಿಕ ವೇತನವನ್ನು ಕಾರ್ಯಕರ್ತೆಯರಿಗೆ  ರೂ. 15 ಸಾವಿರ ಹಾಗೂ ಸಹಾಯಕಿಯರಿಗೆ ರೂ. 10 ಸಾವಿರ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು.  ಸೇವಾ ಹಿರಿತನದ ಮೇಲೆ ಗೌರವ ಧನ ಹೆಚ್ಚಿಸಬೇಕು ಎಂಬ ಹಲವು ಬೇಡಿಕೆಗಳನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಗ್ರೇಡ್‌–2 ತಹಸೀಲ್ದಾರ್‌ ನಿಂಗಯ್ಯ, ಶಿಶು ಅಭಿವೃದ್ದಿ ಅಧಿಕಾರಿ ಸದಾನಂದ ಅವರಿಗೆ ಮನವಿ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ತಾಲ್ಲೂಕು ಶಾಖೆಯ ಅಧ್ಯಕ್ಷೆ ಗಾಯತ್ರಿ ನಿತ್ಯಾನಂದ ಹೆಗ್ಡೆ, ಪ್ರಧಾನ ಕಾರ್ಯದರ್ಶಿ  ಫರ್ಜಾನಾ ಖಾನಂ, ಸಹಕಾರ್ಯದರ್ಶಿ ವಾಣಿ, ಖಜಾಂಚಿ ರಜನಿ, ಉಪಾಧ್ಯಕ್ಷೆ ಸಾವಿತ್ರಿ, ಜಿಲ್ಲಾ ಸಂಚಾಲಕ ರವೀಂದ್ರ ಸಾಗರ್‌ ವಹಿಸಿದ್ದರು.

ಪ್ರತಿಭಟನೆ
ಭದ್ರಾವತಿ:
  ಇಲ್ಲಿನ ಅಂಗನವಾಡಿ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿ ಪೊಲೀಸ್‌ ಬಂಧನಕ್ಕೆ ಒಳಗಾಗಿ ನಂತರ ಬಿಡುಗಡೆಗೊಂಡರು.

ಎಐಟಿಯುಸಿ ಬೆಂಬಲಿತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಸದಸ್ಯರು ಕೇಂದ್ರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ನಡೆದ  ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡರು ‘ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದ್ದು, ಇದನ್ನು ಫೆಡರೇಷನ್‌ ತೀವ್ರವಾಗಿ ವಿರೋಧಿಸುತ್ತದೆ’ ಎಂದರು.

ನಿವೃತ್ತ ನೌಕರರಿಗೆ ಪರಿಹಾರ, ಸರ್ಕಾರಿ ಸೌಲಭ್ಯ, ಐಸಿಡಿಎಸ್‌ ವ್ಯಾಪ್ತಿಗೆ ಸೇರಿದ ಕೆಲಸವನ್ನು ಹೊರತುಪಡಿಸಿ, ಯಾವುದೇ ಕಾರ್ಯ ಮಾಡಬಾರದು ಎಂದು ಒತ್ತಾಯಿಸಿದರು. 

ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ನೂರಾರು ಅಂಗನವಾಡಿ ಸಿಬ್ಬಂದಿಯನ್ನು ನ್ಯೂಟೌನ್‌ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಪ್ರತಿಭಟನಾಕಾರರು ಇದಕ್ಕೂ ಮುನ್ನ ತಹಶೀಲ್ದಾರ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಮುಖಂಡರಾದ ಸುಶೀಲಾಬಾಯಿ, ಆರ್‌. ಭಾಗ್ಯಮಣಿ, ಕೆ.ಸಿ. ವಿಶಾಲ, ಬಿ.ಕೆ. ಸುಲೋಚನ, ಜಿ.ಆರ್. ಸುಧಾ, ಅಮುದ, ಮಣಿಮೇಘ, ಭಾನುಮತಿ ಸೇರಿದಂತೆ ಇತರರು ನೇತೃತ್ವ ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT