ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುರ್ಷಿದ್ ಮಾನನಷ್ಟ ಖಟ್ಲೆ: ಟಿವಿ ಟುಡೆ, ಇತರರಿಗೆ ದೆಹಲಿ ಹೈಕೋರ್ಟ್ ನೋಟಿಸ್

Last Updated 19 ಅಕ್ಟೋಬರ್ 2012, 9:20 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ ಎಸ್): ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ದಂಪತಿ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಯು ಅಂಗವಿಕಲರಿಗೆ ಮೀಸಲಾದ ಲಕ್ಷಾಂತರ ರೂಪಾಯಿಗಳನ್ನು ಗುಳುಂ ಮಾಡಿದೆ ಎಂದು ಆಪಾದಿಸಿ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಖುರ್ಷಿದ್ ಪತ್ನಿ ದಾಖಲಿಸಿದ ಮಾನನಷ್ಟ ಮೊಕದ್ದಮೆ ಸಂಬಂಧ ಉತ್ತರ ನೀಡುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಟಿವಿ ಟುಡೆ ಜಾಲ ಮತ್ತು ಇತರ 13 ಮಂದಿಗೆ ನೋಟಿಸ್ ಜಾರಿ ಮಾಡಿತು.

ತಮ್ಮ ಟಿವಿ ಜಾಲಗಳು, ಹೆಡ್ ಲೈನ್ಸ್ ಟುಡೆ ಮತ್ತು ಆಜ್ ತಕ್ ನಲ್ಲಿ ಮಾನನಷ್ಟಕರ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಟಿವಿ ಟುಡೆ ಸೇರಿದಂತೆ 14 ಮಂದಿ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ವಾಲ್ಮೀಕಿ ಜೆ. ಮೆಹ್ತಾ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿ, ಪ್ರಕರಣವನ್ನು ಜನವರಿ 30ಕ್ಕೆ ನಿಗದಿ ವಿಚಾರಣೆಗೆ ನಿಗದಿ ಪಡಿಸಿದರು.

ಮೊಕದ್ದಮೆಯನ್ನು ವೈಯಕ್ತಿಕವಾಗಿ ದಾಖಲಿಸಲಾಗಿದೆಯೇ ಅಥವಾ ಡಾ. ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್ ಪರವಾಗಿ ದಾಖಲಿಸಲಾಗಿದೆಯೇ ಎಂಬುದಾಗಿ ಸ್ಪಷ್ಟ ಪಡಿಸುವಂತೆ ನ್ಯಾಯಾಲಯವು ಲೂಯಿಸ್ ಖುರ್ಷಿದ್ ಅವರಿಗೂ ಸೂಚನೆ ನೀಡಿತು.

ಜನವರಿ 7ರ ಒಳಗಾಗಿ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನೂ ಜಂಟಿ ರಿಜಿಸ್ಟ್ರಾರ್ ಮುಂದೆ ಹಾಜರು ಪಡಿಸುವಂತೆಯೂ ನ್ಯಾಯಾಲಯ ಆದೇಶ ನೀಡಿತು.

ಜಾಲಗಳಲ್ಲಿ ಪ್ರಸಾರ ಮಾಡಲಾದ ವರದಿಯ ಜೊತೆಗೆ ಖುರ್ಷಿದ್ ಅವರ ಹೇಳಿಕೆಯನ್ನೂ ಅವರು ಪ್ರಸಾರ ಮಾಡಿದ್ದಾರೆಯೇ ಎಂದು ಎಂದು ನ್ಯಾಯಾಲಯ ಟಿವಿ ಟುಡೆ ಪರ ಹಾಜರಾದ ಹಿರಿಯ ವಕೀಲ ಸಿ.ಎಸ್. ಸುಂದರಂ ಅವರನ್ನು ಪ್ರಶ್ನಿಸಿತು.

ನಿಷೇಧ ರೂಪದ ಕಡ್ಡಾಯ ಖಾಯಂ ಪರಿಹಾರಾಜ್ಞೆ (ಇಂಜೆಂಕ್ಷನ್) ಮತ್ತು ಹಾನಿ ತಂಬಿಕೊಡುವಂತೆ ಪ್ರಾರ್ಥಿಸಿ ಟಿವಿ ಟುಡೆ ಸಂಪಾದಕ ಅರೂನ್ ಪುರೀ, ಇಂಡಿಯಾ ಟುಡೆ ಹಾಗೂ ಹೆಡ್ ಲೈನ್ಸ್ ಟುಡೆಯ ಸಂಪಾದಕೀಯ ನಿರ್ದೇಶಕ ಎಂ.ಜೆ. ಅಕ್ಬರ್ ಅವರಲ್ಲದೆ ಶಾಮ್ಸ್ ತಾಹಿರ್ ಖಾನ್, ರಾಹುಲ್ ಕನ್ವಾಲ್ ಮತ್ತು ಅರ್ಜುನ್ ಸಿಂಗ್ ಮತ್ತು ಇತರರ ವಿರುದ್ಧ ಲೂಯಿಸ್ ಖುರ್ಷಿದ್ ಖಟ್ಲೆ ದಾಖಲಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT