ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಲ್ ಜಾ ಸಿಮ್ ಸಿಮ್...

Last Updated 24 ಏಪ್ರಿಲ್ 2013, 7:08 IST
ಅಕ್ಷರ ಗಾತ್ರ

ಪಾಸ್‌ವರ್ಡ್ ನೆನೆದರೇ ಸಾಕು ನಿಮ್ಮ ಖಾತೆ ತೆರೆದುಕೊಳ್ಳುತ್ತದೆ, ಥೇಟ್ ಅರಬ್ಬೀ ಕಥೆ `ಖುಲ್ ಜಾ ಸಿಮ್ ಸಿಮ್' ರೀತಿ!

`ಖುಲ್ ಜಾ ಸಿಮ್ ಸಿಮ್'... ಎಂದರೆ ಸಾಕು ಎಲ್ಲರಿಗೂ ನೆನಪಿಗೆ ಬರುವುದು ಬಾಲ್ಯದಲ್ಲಿ ಕೇಳುತ್ತಿದ್ದ ಅಲಿಬಾಬಾ ಮತ್ತು 40 ಮಂದಿ ಕಳ್ಳರು ಕಥೆ. ಅದರಲ್ಲಿ ಕಳ್ಳರ ನಾಯಕ ಗುಹೆ ಬಳಿ ಬಂದು `ಖುಲ್ ಜಾ ಸಿಮ್ ಸಿಮ್' ಎಂದರೆ ಸಾಕು ಗುಹೆಯ ಬಾಗಿಲು ತೆರೆದುಕೊಳ್ಳುತ್ತಿತ್ತು.

ಅದೇ ಬಗೆಯಲ್ಲಿ ಹೊಸ ಉಪಕರಣ ಅಮೆರಿಕದಲ್ಲಿ ರೂಪುತಳೆದಿದೆ. ಇದರ ಮೂಲಕ ಪಾಸ್‌ವರ್ಡ್ ನೆನೆದರೆ ಸಾಕು ಕಂಪ್ಯೂಟರ್ ಪರದೆಯ ಮೇಲೆ ನಮ್ಮ   ಇ-ಮೇಲ್ ಖಾತೆ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ!

ಕ್ಯಾಲಿಫೋರ್ನಿಯಾದ `ಬರ್ಕ್ಲಿ' ಮಾಹಿತಿ ತಂತ್ರಜ್ಞಾನ ಕೇಂದ್ರದ ಸಂಶೋಧಕರು ಇಂತಹದ್ದೊಂದು ವೈರ್‌ಲೆಸ್ ಹೆಡ್‌ಸೆಟ್ ಅಭಿವೃದ್ಧಿಪಡಿಸಿದ್ದಾರೆ.  ಇದು ಮಿದುಳಿನಲ್ಲಿ ಮೂಡುವ ತರಂಗಗಳನ್ನು ಆಧರಿಸಿ ಕೆಲಸ ಮಾಡುತ್ತದೆ. ಜೀವ ಸಂವೇದಕ ತಂತ್ರಜ್ಞಾನದ ಸಹಾಯದಿಂದ ಮಿದುಳಿನ ತರಂಗಗಳನ್ನು ಅಳೆದು ಅರ್ಥ ಮಾಡಿಕೊಳ್ಳುವ  ಈ ವಿನೂತನ ಉಪಕರಣಕ್ಕೆ `ಪಾಸ್‌ಥಾಟ್ಸ್' ಎಂದು ಹೆಸರಿಡಲಾಗಿದೆ. ಇದು   ಬ್ಲೂ ಟೂತ್ ಮುಖಾಂತರ ಕಂಪ್ಯೂಟರ್ ಜತೆಗೆ ಸಂಬಂಧ ಬೆಸೆಯುತ್ತದೆ.

`ಪಾಸ್‌ಥಾಟ್ಸ್' ಸಾಧನವನ್ನು ಲಲಾಟಕ್ಕೆ ಜೋಡಿಸಿದರೆ ಅದು ಎಲೆಕ್ಟ್ರೋ ಎನ್‌ಸೆಫೆಲೋಗ್ರಾಮ್ ಅಂದರೆ ವಿದ್ಯುನ್ ‌ಮಸ್ತಿಷ್ಕಲೇಖ ತರಹ ಕೆಲಸ ಮಾಡುತ್ತದೆ. ಅರ್ಥಾತ್ ಮಿದುಳಿನ ಅಲೆಗಳನ್ನು ದಾಖಲಿಸಿಕೊಂಡು ಬ್ಲೂಟೂತ್ ಮೂಲಕ ಕಂಪ್ಯೂಟರ್‌ಗೆ ಪಾಸ್  ವರ್ಡ್ ರವಾನಿಸುತ್ತದೆ.

ಇದು ನೋಡುವುದಕ್ಕೆ ಬೇರೆ ಸಾಂಪ್ರದಾಯಿಕ ಬ್ಲೂಟೂತ್ ಉಪಕರಣಗಳಾದ ಮೊಬೈಲ್ ಹೆಡ್‌ಸೆಟ್ ಹಾಗೂ ಮ್ಯೂಸಿಕ್ ಪ್ಲೇಯರ್‌ನ ಹೆಡ್‌ಸೆಟ್‌ನಂತೆಯೇ ಇದ್ದರೂ ಬಳಕೆಯ ದೃಷ್ಟಿಯಿಂದ ಮಾತ್ರ ಇದು ಭಿನ್ನವಾಗಿ ನಿಲ್ಲುತ್ತದೆ. ಬೇರೆ ಬ್ಲೂಟೂತ್ ಉಪಕರಣಗಳಿಗೆ ಹೋಲಿಸಿದರೆ ಇದು ಹೆಚ್ಚು `ಬಳಕೆದಾರ ಸ್ನೇಹಿ' ಎಂಬುದು ಸಂಶೋಧಕರ ಅಭಿಪ್ರಾಯ.

ಬೇರೆ ಮಿದುಳಿಗೆ ಸ್ಪಂದಿಸದು!
ಒಂದು ವೇಳೆ ನಿಮ್ಮ ಪಾಸ್‌ವರ್ಡ್ ತಿಳಿದ ಬೇರೆಯವರು ಇದೇ ಉಪಕರಣ ಬಳಸಿ ಯೋಚಿಸಿದರೆ ಈ ಉಪಕರಣ ಅದನ್ನು ಪರಿಗಣಿಸುವುದೇ ಇಲ್ಲ!

ಏಕೆಂದರೆ ಪ್ರತಿಯೊಬ್ಬರ ಮಿದುಳೂ ಭಿನ್ನವಾಗಿ ಆಲೋಚಿಸುವಂತೆಯೇ, ಬೇರೆ ಬೇರೆ ಮಸ್ತಿಷ್ಕದಿಂದ ಹೊರಡುವ ಸಂಕೇತಗಳು ಭಿನ್ನವಾಗಿರುತ್ತವೆ. ಹಾಗಾಗಿ ಇಲ್ಲಿ ಪಾಸ್‌ವರ್ಡ್ ಕಳವು ಅಥವಾ ಅನ್ಯ ವ್ಯಕ್ತಿಯಿಂದ ಇ-ಮೇಲ್ ತೆರೆಯುವ ಸಂಭವವೇ ಇಲ್ಲ.

ಸದ್ಯ `ಪಾಸ್‌ಥಾಟ್ಸ್' ಅನ್ನು 7 ವಿಭಿನ್ನ ವ್ಯಕ್ತಿಗಳ ಮೇಲೆ ಪ್ರಯೋಗಿಸಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಇದು ಯಶಸ್ವಿಯೂ ಆಗಿದೆ. ಈ ಸಾಧನಕ್ಕೆ ಅಮೆರಿಕದಲ್ಲಿ 100 ಡಾಲರ್(ರೂ5400) ಬೆಲೆ ನಿಗದಿಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT