ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ಚಿತ್ರೋದ್ಯಮಿ ಸಿ.ವಿ.ಎಲ್.ಶಾಸ್ತ್ರಿ ಇನ್ನಿಲ್ಲ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಹಂಚಿಕೆದಾರ ಸಿ.ವಿ.ಎಲ್. ಶಾಸ್ತ್ರಿ (82) ಅವರು ಗುರುವಾರ ರಾತ್ರಿ ಇಲ್ಲಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 11.30ಕ್ಕೆ ನಿಧನರಾದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು, `ಮಲಯ ಮಾರುತ~ ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.   

ಕಳೆದ ಮೂರು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆಲ ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಅವರ ಬಂಧುಗಳು ತಿಳಿಸಿದ್ದಾರೆ.

ಮೂಲತಃ ರಾಮನಗರದವರಾದ ಇವರು ಐವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಚಲನ ಚಿತ್ರೋದ್ಯಮದಲ್ಲಿ ತೊಡಗಿಸಿ ಕೊಂಡಿದ್ದವರು. ಕಳ್ಳಕುಳ್ಳ, ಮಲಯ ಮಾರುತ, ಪಕ್ಕಾ ಕಳ್ಳ, ಹೆಣ್ಣು ಹುಲಿ, ಆಸೆಯ ಬಲೆ ಮುಂತಾದ ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅವರ ನಿರ್ಮಾಣದ `ಆತಂಕ~ ಚಿತ್ರಕ್ಕೆ ಆರು ರಾಜ್ಯ ಪ್ರಶಸ್ತಿಗಳು ಬಂದಿದ್ದವು.

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಇವರು ಕರ್ನಾಟಕ ಚಿತ್ರೋದ್ಯಮದ ಬೆಳವಣಿಗೆಗೆ ಬಹಳಷ್ಟು ಕೆಲಸಗಳನ್ನು ಮಾಡಿದ್ದರು. ಇವರು ಹಿಂದೆ ಚೆನ್ನೈ ಮತ್ತು ತಿರುವನಂತಪುರಗಳಲ್ಲಿ ಕನ್ನಡ ಚಲನಚಿತ್ರೋತ್ಸವಗಳನ್ನು ಸಂಘಟಿಸಿದ್ದರು. 19ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಯಶಸ್ಸಿಗೆ ಇವರು ಕಾರಣ.

ಶಾಸ್ತ್ರಿ ಮೂವೀಸ್, ಶಾಸ್ತ್ರಿ ಸಿನಿ ಆರ್ಟ್ಸ್ ಪ್ರೊಡಕ್ಷನ್ ಸಂಸ್ಥೆಗಳ ಮೂಲಕ ಹಲವು ಕನ್ನಡ ಚಿತ್ರಗಳ ನಿರ್ಮಾಪಕರಾಗಿ, ಹಂಚಿಕೆದಾರರಾಗಿ ಕನ್ನಡ ಚಲನಚಿತ್ರೋದ್ಯಮಕ್ಕೆ ಬಲುದೊಡ್ಡ ಕೊಡುಗೆ ನೀಡಿದ್ದಾರೆ.

ಎಂಬತ್ತರ ದಶಕದಲ್ಲಿ ಇವರು ರಾಜಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇವರು ಮುಂಬೈನಲ್ಲಿ ದಾದಾಸಾಹೇಬ್ ಫಾಲ್ಕೆಯವರಿಗೆ ಸಂಬಂಧಿಸಿದ ಸಂಸ್ಥೆನೀಡುವ `ಫಾಲ್ಕೆ ಅಕಾಡೆಮಿ~ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಇವರು ಪತ್ನಿ ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗ, ಸ್ನೇಹಿತರನ್ನು ಅಗಲಿದ್ದಾರೆ.

ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT