ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಜ್ಜಿ ನೆನಪು: ಯುವ ಪ್ರತಿಭೆಗಳ ಸಂಗಮ

Last Updated 22 ಜುಲೈ 2013, 6:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊರಗೆ ಧಾರಾಕಾರ ಮಳೆ. ಜರ್ಕಿನ್ ಒಳಗೆಯೂ ನುಸುಳುವ ಚಳಿಗಾಳಿ. ಇಂಥ ಹಿತವಾದ ವಾತಾವರಣದಲ್ಲಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಾದ ಸುಧೆ ಹರಿದಿತ್ತು. ಹಿರಿಯ ಕಲಾವಿದರ ಪ್ರಬುದ್ಧತೆಯ ಜೊತೆಗೆ ಯುವ ತಲೆಮಾರಿನ ಪ್ರತಿನಿಧಿಗಳ ಮೋಹಕ ಕಂಠದ ಮಾಧುರ್ಯ. ಮಳೆಯಲ್ಲೂ ಬಂದಿದ್ದ ಸಂಗೀತಾಸಕ್ತರ ಕರತಾಡನದಿಂದ ಸಭಾಂಗಣದಲ್ಲಿ ನವೋನ್ಮೇಷದ ಸಂಚಲನ.

ಗಂಗೂಬಾಯಿ ಹಾನಗಲ್ ಅವರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಾಸ್ತ್ರೀಯ ಸಂಗಿತೋತ್ಸವದಲ್ಲಿ ಹಿರಿಯ ಹಾಗೂ ಕಿರಿಯ ಗಾಯಕರು ಗಾಯನ, ವಾದನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು; ಗಂಗಜ್ಜಿಯನ್ನು ನೆನಪಿಸಿದರು.

ಎಲೆ ಮರೆಯ ಕಾಯಿಯಂತೆ ಇದ್ದ ಅನೇಕ ಗಾಯಕರನ್ನು ಬೆಳಕಿಗೆ ತಂದ ವೇದಿಕೆಯಲ್ಲಿ ರಾಗಗಳು ಅಲೆ ಅಲೆಯಾಗಿ ಮಾರ್ದನಿಸಿದಾಗ ಪ್ರೇಕ್ಷಕರು ತಲೆದೂಗಿ ಚಪ್ಪಾಳೆಯ ಮಳೆ ಸುರಿಸಿದರು. ಶಹನಾಯ್, ತಬಲಾ, ಹಾರ್ಮೋನಿಯಂ ತನಿ ವಾದನವೂ ಕಲಾಪ್ರಿಯರ ಮನತಣಿಸಿತು.

ಶಹನಾಯ್ ವಾದನದ ಮೂಲಕ ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಎಸ್.ಡಿ. ಭಜಂತ್ರಿ. ನಂತರ ಹಾನಗಲ್ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್‌ನ ಮಕ್ಕಳು ಗುರು ಅರುಣ ದೇಸಾಯಿ ನೇತೃತ್ವದಲ್ಲಿ ಸಮೂಹ ಗಾಯನ ನಡೆಸಿಕೊಟ್ಟರು. ಒಂದೇ ಸ್ವರದಲ್ಲಿ ಕೇಳಿಬಂದ ಕೀರ್ತನೆ, ದಾಸರ ಪದಗಳು ಹೃದಯ ತಂಪಾಗಿಸಿದವು. ನಂತರ ಧಾರವಾಡದ ವಲ್ಲಭ ಮುಳಗುಂದ ಅವರು ಕೋಮಲ್ ಋಷಭ ಅಸಾವರಿ ರಾಗದ ಮೂಲಕ ಸಭಾಂಗಣದಲ್ಲಿ ರಸ ತುಂಬಿದರು.

ಗಂಭೀರ ಆಲಾಪ್‌ಗಳ ಮೂಲಕ ಆರಂಭದಲ್ಲೇ ಗಮನ ಹಿಡಿದಿಟ್ಟ ಅವರು ಧೃತ್ ಗತ್‌ನಲ್ಲಿ ಪ್ರಸ್ತುತಪಡಿಸಿದ `ಮೈ ತೋ ತುಮ್‌ರೋ ದಾಸ್ ಜನಮ್ ಜನಮ್ ಸೇ' ಎಂಬ ಚೀಸ್ ಉತ್ಸಾಹ ತುಂಬಿತು. ಶ್ರೀಪಾದ ಮುಳಗುಂದ ಹಾರ್ಮೋನಿಯಂನಲ್ಲಿ ಮತ್ತು ಶ್ರೀಕಾಂತ ತಬಲಾದಲ್ಲಿ ಸಹಕಾರ ನೀಡಿದರು.

ಧಾರವಾಡದ ಗೀತಾ ಆಲೂರ ಅವರು ರಾಮ್‌ಕಲಿ ರಾಗದಲ್ಲಿ ಪ್ರಸ್ತುತಪಡಿಸಿದ `ಆಜ್ ರಾಧಾ ತೋರೆ ವದನ್'ನ ಬೆನ್ನಲ್ಲೇ ಧೃತ್‌ಗತ್‌ನಲ್ಲಿ ಹರಿದು ಬಂದ `ಸಗರಿ ರೈನ್‌ಕೆ ಜಾಗೇವಾಲೆ' ಪ್ರೇಕ್ಷಕರ ಮನ ಗೆದ್ದಿತು. ತಮ್ಮಣ್ಣ ಪಾಟೀಲ ಹಾರ್ಮೋನಿಯಂ ಸಾಥ್ ನೀಡಿದರು.

ಜಪ್ ತಾಳ್ ಸೊಬಗು
ವಾಸುದೇವ ಕಾರೇಕರ್ ಜಪ್‌ತಾಳ್‌ನ ಸೊಬಗನ್ನು ಉಣಬಡಿಸಿದರು. ಬೃಂದಾವನಿ ಸಾರಂಗ್ ರಾಗದಲ್ಲಿ `ಘನ ಗಗನ ಕರಗತ' ಪ್ರಸ್ತುತಪಡಿಸಿದ ಅವರು ಸಂಗೀತ ಪ್ರಿಯರನ್ನು ಕುಳಿತಲ್ಲೇ ಕುಣಿಸಿದರು. ಯುವ ಗಾಯಕ ಹರೀಶ ಹೆಗಡೆ ಹಳವಳ್ಳಿ ಮಧುರ ಗಾಯನ ಆರಂಭವಾದಾಗ ಹೊತ್ತು ನೆತ್ತಿಗೇರಿತ್ತು.

ಹೊಟ್ಟೆ ಹಸಿಯುತ್ತಿದ್ದರೂ ಅವರ ಸ್ವರ ಮಾಧುರ್ಯಕ್ಕೆ ಮನಸೋತ ಪ್ರೇಕ್ಷಕರು ಕುಳಿತಲ್ಲಿಂದ ಕದಲದೇ ಶುದ್ಧ ಸಾರಂಗ್ ರಾಗದ ಸವಿ ಉಂಡರು.
ಸುಪ್ರಿಯಾ ಭಟ್, ಪರಶುರಾಮ ಭಜಂತ್ರಿ ಹಾಗೂ ಪವನ ಎಂ.ಹೆಗಡೆ ಅವರ ಗಾಯನವೂ ಗಮನ ಸೆಳೆಯಿತು. ನಾಗಭೂಷಣ ಎಸ್.ಜಿ.ತಬಲಾ ತನಿ ಪ್ರದರ್ಶನ ನೀಡಿದರು.

ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಢೇಷನ್ ಅಧ್ಯಕ್ಷ ಮನೋಜ ಹಾನಗಲ್, ಹುಬ್ಬಳ್ಳಿ ಆರ್ಟ್ ಸರ್ಕಲ್ ಕಾರ್ಯದರ್ಶಿ ಬಾಬುರಾವ ಹಾನಗಲ್ ಮತ್ತಿತರರು ಉಪಸ್ಥಿತರಿದ್ದರು. ಪಲ್ಲವಿ ಖಾನಪೇಟೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT