ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಕಲ್ಯಾಣ ವಿದ್ಯುತ್ ಸಂಪರ್ಕಕ್ಕೆ ಹಣ-ಆರೋಪ

Last Updated 1 ಜುಲೈ 2012, 10:05 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಬೇಕೆಂಬ ಆದೇಶವಿದ್ದರೂ ಸಹ ಕೆಲವು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ವಿಚಾರ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ  ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

 ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಶಾಸಕ ಡಿ.ಎನ್.ಜೀವರಾಜ್, ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿ ರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದರು. ಎಸ್‌ಸಿ ಮತ್ತುಎಸ್‌ಟಿ ನಿಗಮದವರು ಈ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಕೊಳವೆ ಬಾವಿ ತೆಗೆಸಿ ವಿದ್ಯುತ್ ಸಂಪರ್ಕ ಕಲ್ಪಿಸ ಬೇಕೆಂಬ ಆದೇಶವಿದ್ದರೂ ಸಹ ಇಲಾಖೆಯವರು ವಿದ್ಯುತ್ ಗುತ್ತಿಗೆದಾರರನ್ನು ಮಧ್ಯವರ್ತಿ ಗಳನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.
 
ಅಧಿಕಾರಿಯ ವಿರುದ್ಧ ಶಿಸ್ತುಕ್ರಮಕ್ಕೆ ತೀರ್ಮಾನಿಸ ಲಾಯಿತು. ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಂದ ಅಧಿಕಾರಿಗಳು ಹಣ ವಸೂಲಿಗೆ ಮುಂದಾದರೆ ಅಂತವರ ವಿರುದ್ಧ ಶಾಸಕರಿಗೆ ದೂರು ನೀಡಬಹುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು 100ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಇದರ ಕಟ್ಟಡ ಕಾಮಗಾರಿಗೆ ರೂ.2.45ಕೋಟಿ ಹಣ ಮಂಜೂ ರಾಗಿದೆ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ. ಹಳೇ ಕಟ್ಟಡವನ್ನು ದುರಸ್ತಿ ಪಡಿಸಲಾಗಿದೆ. ಹೊಸದಾಗಿ ಅರವಳಿಕೆ ತಜ್ಞರನ್ನು ಸರ್ಕಾರ ನೇಮಿಸಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಸುದರ್ಶನ್ ಸಭೆಗೆ ಮಾಹಿತಿ ನೀಡಿದರು.

ಪಶು ಸಂಗೋಪನಾ ಇಲಾಖೆ ಯೋಜನೆಯ ಬಗ್ಗೆ ಹಾಗೂ ಮಂಜೂರಾದ ಅನುದಾನದ ಬಗ್ಗೆ ಸಭೆಗೆ ಸರಿಯಾದ ಮಾಹಿತಿ ನೀಡದಿರುವ ಬಗ್ಗೆ ವೈದ್ಯಾಧಿಕಾರಿಗಳನ್ನು  ಸಭೆಯಲ್ಲಿ ತೀವ್ರತರಾಟೆ ತೆಗೆದುಕೊಳ್ಳಲಾಯಿತು. ಮಳೆಗಾಲ ಪ್ರಾರಂಭವಾಗಿದ್ದರೂ ವಿದ್ಯುತ್ ಮಾರ್ಗ ನಿರ್ವಹಣೆ ಮಾನ್‌ಸೂನ್‌ಗ್ಯಾಂಗ್‌ಮನ್ ನೇಮಿಸಿಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸಭೆ ಸೂಚಿಸಿತು.

ಬಸವ, ಇಂದಿರಾ ಆವಾಸ್ ಯೋಜನೆಯಡಿ 1226 ಮನೆ ಮಂಜೂರಾಗಿದ್ದು, ಇದರಲ್ಲಿ ಕೇವಲ 99 ಮನೆ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದಾಗ ಗ್ರಾಮ ಪಂಚಾಯಿತಿ ಅಧಿಕಾರಗಳ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
 
ಈಗಾಗಲೇ ನೀಡಿರುವ ಮನೆಗಳನ್ನೆ ಪೂರ್ಣಗೊಳಿಸದವರು ಇನ್ನೂ 1300 ಮನೆಗಳು ಹೊಸದಾಗಿ ಮಂಜೂರಾಗಿದ್ದು, ಇದನ್ನು ಹೇಗೆ ಪೂರ್ಣಗೊಳಿಸುತ್ತಿರಾ ಎಂದು ಪ್ರಶ್ನಿಸಿದರು. ಹುಲ್ಲಿನ ಗುಡಿಸಲಿದ್ದವರಿಗೆ ಕೂಡಲೇ ಮನೆ ನಿರ್ಮಿಸಿ ಕೊಡುವಂತೆ ಆದೇಶಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೆ ರೂ.200 ಕೋಟಿ ವೆಚ್ಚದಲ್ಲಿ ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕೊರಲುಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆಯ ಮೇಲೆ ಹಾದು ಹೋಗುವ ರಸ್ತೆ ಒಂದೇ ವರ್ಷದಲ್ಲಿ ಹಾಳಾಗಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಭೆ ಸೂಚಿಸಿತು.

ಜಲಾನಯನಯ ಇಲಾಖೆಯವರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈ ಗೊಂಡ ಕಾಮಗಾರಿಗಳು, ಬಿಡುಗಡೆಯಾದ ಅನುದಾನ ಬಗ್ಗೆ ಸಂಪೂರ್ಣ ಕಡತಗಳನ್ನು ಆಯಾ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಸಭೆ ಸೂಚಿಸಿತು.

ಪಟ್ಟಣದ ನೀರಿನ ಟ್ಯಾಂಕ್ ವೃತ್ತದಲ್ಲಿ ಬಡವರ ಯೋಜನೆ ಕಾರ್ಯಕ್ರಮದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಪ್ರಸ್ತುತ ಗೋಡಂಗಡಿ ಇರುವವರಿಗೆ ಹಸ್ತಾಂತರಿಸ ಬೇಕೆಂದು ಸಭೆ ಸೂಚಿಸಿತು. ಪಟ್ಟಣದ ನಿವಾಸಿಗಳಿಗೆ ಆಶ್ರಯ ಮನೆ ನೀಡಲು ನಿರ್ಧರಿಸುವ ಸ್ಥಳವನ್ನು ನ್ಯಾಯಾಲ ಯದ ಅನುಮತಿ ಪಡೆದು ಸಮೀಕ್ಷೆ ಮಾಡಿ ವಸತಿ ರಹಿತರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿತು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಡಿ.ಎನ್.ಜೀವರಾಜ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಚಿತಾ ನರೇಂದ್ರ, ಸದಸ್ಯೆ ಸುಜಾತ, ತಾಲ್ಲೂಕು

ಪಂಚಾಯಿತಿ ಉಪಾಧ್ಯಕ್ಷೆ ಬಿ.ಬಿ.ಉಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ನೋಡಲ್ ಅಧಿಕಾರಿ ಸುಬ್ಬರಾವ್, ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮಂಜುನಾಥ್ ಇದ್ದರು.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT