ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಿಮಡಿ ಕಾಲೊನಿ: ವಾಸಕ್ಕೆ ಅಸಹನೀಯ

Last Updated 6 ಜನವರಿ 2014, 5:58 IST
ಅಕ್ಷರ ಗಾತ್ರ

ಗದಗ: ಕಾಲೊನಿಗೆ ಕಾಲಿಡುತ್ತಿದ್ದಂತೆ ಚರಂಡಿ ದರ್ಶನ, ಡಾಂಬರು ಕಾಣದ ರಸ್ತೆಗಳು, ಚರಂಡಿ ಪಕ್ಕದಲ್ಲಿಯೇ ಕುಡಿಯಲು ನೀರು ಸಂಗ್ರಹ, ಖಾಲಿ ನಿವೇಶನದಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳು, ಎಲ್ಲಿ ನೋಡಿದರೂ ಕಸದ ರಾಶಿ, ಕೆಟ್ಟು ನಿಂತಿರುವ ಬೋರ್‌ವೆಲ್‌ಗಳು.... ಇದು ನಗರದ ಹುಬ್ಬಳ್ಳಿ ರಸ್ತೆಯ ಪಕ್ಕ­ದಲ್ಲಿರುವ ಗಂಗಿಮಡಿ  ಆಶ್ರಯ ಕಾಲೊನಿಯ ದುಃಸ್ಥಿತಿ. ನಗರದ ಬಹುತೇಕ ಬಡಾವಣೆಗಳಲ್ಲಿ ಮೂಲಸೌಲಭ್ಯ ಎಂಬುದು ಮರೀಚಿಕೆ. ಇದರ ಸಾಲಿಗೆ ಗಂಗಿಮಡಿ ಸಹ ಸೇರ್ಪಡೆಯಾ­ಗಿರುವುದು ವಿಪರ್ಯಾಸ.

ದಿನದಿಂದ ದಿನಕ್ಕೆ ಗದಗ ಬೆಟಗೇರಿ ಅವಳ ನಗರ ಬೆಳೆಯುತ್ತಿದೆ. ಅದರ ಜತೆಯಲ್ಲಿಯೇ ಸಮಸ್ಯೆಗಳು ಬೆಳೆಯುತ್ತಿವೆ ಹೊರತು ಪರಿಹಾರ ಮಾತ್ರ ದೊರಕುತ್ತಿಲ್ಲ. ಗಂಗಿಮಡಿ ಪ್ರದೇಶಕ್ಕೆ ಭೇಟಿ ನೀಡಿದರೆ ಎಲ್ಲೆಂದರಲ್ಲಿ ಕಾಣುವ ಕಸದ ರಾಶಿ, ರಸ್ತೆ ಮೇಲೆ ಹರಿಯುವ ಚರಂಡಿ ನೀರು ಅಲ್ಲಿನ ಅವ್ಯವಸ್ಥೆಗೆ ಹಿಡಿದ  ಕೈಗನ್ನಡಿ.

ಚರಂಡಿ ವ್ಯವಸ್ಥೆ ಇಲ್ಲದೆ ಮನೆ ಮುಂದಿರುವ ಇಂಗು ಗುಂಡಿಗಳಲ್ಲಿ ಸಂಗ್ರಹವಾಗುವ ಬಚ್ಚಲ ನೀರನ್ನು ಅಲ್ಲಿನ ಮಹಿಳೆಯರೇ ಹೊರ ಹಾಕಬೇಕು. ರೋಗರುಜಿನಗಳು ಬರುವುದು ಸಾಮಾನ್ಯ. ಶಾಲೆ ಪಕ್ಕದಲ್ಲಿಯೇ ತೆರೆದ ಚರಂಡಿ ನೀರು ತುಂಬು ತುಳುಕುತ್ತಿದೆ. ಸುಮಾರು 2500 ಆಶ್ರಯ ಮನೆ ಹೊಂದಿರುವ ಗಂಗಿಮಡಿ  ಹಲ­ವಾರು ಸಮಸ್ಯೆಗಳಿಗೆ ಉತ್ತರ ಸಿಗದೆ ತತ್ತರಿಸುತ್ತಿದೆ.

ಸಮಸ್ಯೆ ಎದುರಿಸಲಾರದೇ ಕೆಲವರು ಮನೆ ಬಿಟ್ಟು  ಹೋದರೆ, ಕೆಲ ಮನೆಗಳ ಬಾಗಿಲು, ಕಿಟಕಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇಲ್ಲಿರುವ ಆಶ್ರಯ ಮನೆಗಳು ಈಗ ಕೊಳಚೆ ಪ್ರದೇಶವಾಗಿ ಪರಿವರ್ತನೆ­ಯಾಗಿದೆ.

‘ಗಂಗಿಮಡಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ. ಕೇವಲ ಭರವಸೆ ನೀಡುತ್ತಿದ್ದಾರೆ  ಹೊರತು ಅಭಿವೃದ್ಧಿ ಮರೀಚಿಕೆಯಾಗಿದೆ. ರಸ್ತೆ, ಚಂಡಿ, ಬೀದಿ ದೀಪ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತಗೊಂಡಿದೆ.

ಜನರು ಇಲ್ಲಿ ವಾಸಿಸಲು ಸಹ ಹಿಂದೇಟು ಹಾಕುತ್ತಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿಯೇ ಗಲೀಜು ನೀರು ನಿಂತು ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ  ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ನಿವಾಸಿ ಜೆ.ಎಚ್.ಉಮಚಗಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT