ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂಲಿ ವಿರುದ್ಧ ಪೊಲೀಸರಿಗೆ ದೂರು?

ಲೈಂಗಿಕ ಕಿರುಕುಳ ಆರೋಪ: ಕಾನೂನು ವಿದ್ಯಾರ್ಥಿನಿ ಚಿಂತನೆ
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ/ಕೋಲ್ಕತ್ತ (ಪಿಟಿಐ): ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರಿಗೆ ತಿರುಗೇಟು ನೀಡಿರುವ ಕಾನೂನು ತರಬೇತಿ ವಿದ್ಯಾರ್ಥಿನಿ, ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಚಿಂತಿಸಿರುವುದಾಗಿ ಹೇಳಿದ್ದಾರೆ.

‘ನಾನು ಮಾಡಿರುವ ಆರೋಪದ ಬಗ್ಗೆ ಊಹಾಪೋಹಗಳನ್ನು ಹಬ್ಬಿಸಲಾ­ಗುತ್ತಿದೆ ಮತ್ತು ಈ ವಿಷಯದಲ್ಲಿ ರಾಜಕೀಯ ಬೆರೆಸಲಾಗುತ್ತಿದೆ. ತನಿಖೆ ಹಾಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊ­ಳ್ಳುವ ಸಲುವಾಗಿ ಈ ಪ್ರಕರಣವನ್ನು ವಿಷಯಾಂತರ ಮಾಡುವ ಪ್ರಯತ್ನ­ವನ್ನೂ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿನಿಯು ತಮ್ಮ  ಬ್ಲಾಗ್‌ ‘ಲೀಗಲಿ ಇಂಡಿಯಾ’ದಲ್ಲಿ ಬರೆದು­ಕೊಂಡಿದ್ದಾರೆ.

‘ಈ ವಿಷಯದಲ್ಲಿ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ಚಿಂತಿಸಿದ್ದೇನೆ. ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸಬಾರದೆಂದೂ ಕೇಳಿಕೊಳ್ಳುವೆ’ ಎಂದಿದ್ದಾರೆ. ‘ಸುಪ್ರೀಂ ಕೋರ್ಟ್‌ನ ವಿಚಾರಣಾ ಸಮಿತಿ ಮುಂದೆ ನಾನು ನೀಡಿರುವ ಹೇಳಿಕೆಯನ್ನು ಸುಳ್ಳು ಎಂದಿರು­ವುದು ನನಗೆ ಮಾತ್ರವಲ್ಲ ಸುಪ್ರೀಂ ಕೋರ್ಟ್‌ಗೂ ಅಗೌರವ ತೋರುವ ವರ್ತನೆ’ ಎಂದು ಹೇಳಿದ್ದಾರೆ.

‘ಈ ಆರೋಪದಿಂದ ಎಂತಹ ಗಂಭೀರ ಸನ್ನಿವೇಶ­ಗಳು ಉದ್ಭವಿಸಬಹುದು ಎಂಬ ಅರಿವನ್ನು ಇರಿಸಿ­ಕೊಂಡೇ ಈ ವಿಷಯದಲ್ಲಿ ನಾನು ಬಹಳ ಜವಾಬ್ದಾರಿ­ಯುತವಾಗಿ ವರ್ತಿಸುತ್ತಿದ್ದೇನೆ’ ಎಂದೂ ವಿದ್ಯಾರ್ಥಿನಿ ಬರೆದಿದ್ದಾರೆ. ನ್ಯಾ.ಗಂಗೂಲಿ ಅವರು, ತಮ್ಮ ವಿರುದ್ಧ ಕೇಳಿಬಂದಿ­ರುವ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದು, ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ. ಪಿ. ಸದಾಶಿವಂ ಅವರಿಗೆ ಎಂಟು ಪುಟಗಳ ಪತ್ರ ಬರೆದಿದ್ದಾರೆ.

ಅದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಚಾರಿತ್ರ್ಯಕ್ಕೆ ಮಸಿ ಬಳಿಯುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರತಿಕ್ರಿಯಿಸುವುದಿಲ್ಲ’: ಈ ಮಧ್ಯೆ, ವಿದ್ಯಾರ್ಥಿನಿಯು ಬ್ಲಾಗ್‌ನಲ್ಲಿ ವ್ಯಕ್ತಪಡಿಸಿರುವ ಅಭಿ­ಪ್ರಾಯಕ್ಕೆ ತಾವು ಪ್ರತಿಕ್ರಿಯಿಸು­ವುದಿಲ್ಲ ಎಂದು ನ್ಯಾ. ಗಂಗೂಲಿ ಕೋಲ್ಕತ್ತ­ದಲ್ಲಿ ಹೇಳಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ­ರುವ ಗಂಗೂಲಿ ಅವರ ಮೇಲೆ ಈ ಸ್ಥಾನದಿಂದ ಕೆಳಗಿಳಿಯು­ವಂತೆ ಒತ್ತಡ ಹೆಚ್ಚುತ್ತಿದೆ.

ಅವರು (ಗಂಗೂಲಿ) ಪದತ್ಯಾಗ ಮಾಡಬೇಂಬುದು ರಾಜಕೀಯದ ಒತ್ತಾಯವಲ್ಲ.  ನ್ಯಾಯಾಂಗದ ಪಾವಿತ್ರ್ಯ  ಗೌರವಿಸಿ ರಾಜೀನಾಮೆ ನೀಡಬೇಕು  ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ. ಈ ನಡುವೆ, ವಕೀಲರು ಮತ್ತು ನಿವೃತ್ತ ನ್ಯಾಯಾಧೀಶರ ಗುಂಪೊಂದು ನ್ಯಾ. ಗಂಗೂಲಿ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಕೋಲ್ಕತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದೆ.

ವಜಾ– ಸಂವಿಧಾನ ಬಾಹಿರ: ನ್ಯಾ.ಗಂಗೂಲಿ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದರೆ ಅದು ಸಂವಿಧಾನ ಬಾಹಿರ ಕ್ರಮವಾಗುತ್ತದೆ ಎಂದು ಕೋಲ್ಕತ್ತದ ಸ್ವಯಂ ಸೇವಾ ಸಂಸ್ಥೆಯೊಂದು ರಾಷ್ಟ್ರಪತಿ ಅವರಿಗೆ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದೆ.

ಹರೀಶ್‌ ಸಾಳ್ವೆ ಟೀಕೆ: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ನಿವೃತ್ತ ನ್ಯಾ. ಎ.ಕೆ. ಗಂಗೂಲಿ ಅವರನ್ನು ಮಾಜಿ ಸಾಲಿಸಿಟರ್‌ ಜನರಲ್‌ ಹರೀಶ್‌ ಸಾಳ್ವೆ ಟೀಕಿಸಿದ್ದಾರೆ. ಗಂಗೂಲಿ ಅವರು, ವಿದ್ಯಾರ್ಥಿ­ನಿಯು ಬೇರೊಬ್ಬರ ಚಿತಾವಣೆಗೆ ಒಳಗಾ­ಗಿದ್ದಾಳೆ ಎನ್ನು­ವಂತಹ ಆರೋಪ ಮಾಡಬಾರದಿತ್ತು ಎಂದಿದ್ದಾರೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಗಂಗೂಲಿ ಅವರು ಬರೆದಿರುವ ಪತ್ರದ ಬಗ್ಗೆಯೂ ಪ್ರತಿಕ್ರಿಯಿಸಿರುವ ಸಾಳ್ವೆ, ‘ಸಿಜೆಐ ಅವರಿಗೆ ಇಂತಹದೊಂದು ಪತ್ರ ಇದುವರೆಗೂ ಬಂದಿರ­ಲಿಲ್ಲ. ಇದೊಂದು ವಿಷಾದನೀಯ ಬೆಳವಣಿಗೆ’ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ತನಿಖೆ: ರಾಷ್ಟ್ರಪತಿಗೆ ಶಿಫಾರಸು ಸಾಧ್ಯತೆ
ಪಶ್ಚಿಮ ಬಂಗಾಳದ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿರುವ  ನ್ಯಾ.ಗಂಗೂಲಿ ಅವರ ವಿರುದ್ಧದ ಆರೋಪ ಬಗ್ಗೆ ಸುಪ್ರೀಂ ಕೋರ್ಟ್‌ ಹೊಸದಾಗಿ ತನಿಖೆ ಕೈಗೊಳ್ಳಲು ಕಾನೂನು ತೊಡಕಿಲ್ಲ ಎಂಬ ಅಭಿಪ್ರಾಯವನ್ನು ಅಟಾರ್ನಿ ಜನರಲ್‌ ಜಿ.ಇ.ವಾಹನ್ವತಿ ಅವರು ನೀಡಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಕೇಂದ್ರ ಸರ್ಕಾರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪರಿಶೀಲನೆಗೆ ಕಳುಹಿಸುವ ಇಂಗಿತ ವ್ಯಕ್ತಪಡಿಸಿದೆ.

ಈ ಕುರಿತಂತೆ ಗೃಹ ಸಚಿವಾಲಯವು ಶೀಘ್ರದಲ್ಲೇ ಟಿಪ್ಪಣಿ ಸಿದ್ಧಪಡಿಸಿ ಸಂಪುಟಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಸಂಪುಟವು ಗೃಹ ಸಚಿವಾಲಯದ ಈ ಪ್ರಸ್ತಾವವನ್ನು ಅನುಮೋದಿಸಿದರೆ  ಇದನ್ನು ರಾಷ್ಟ್ರಪತಿ ಅವರ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ನ್ಯಾ.ಗಂಗೂಲಿ ಅವರನ್ನು ಮಾನವ ಹಕ್ಕು ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಕೋರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ರಾಷ್ಟ್ರಪತಿ  ಅವರಿಗೆ ಪತ್ರ ಬರೆದಿದ್ದರು. ಈ  ಬಗ್ಗೆ ಅಟಾರ್ನಿ ಜನರಲ್‌ ಅವರ ಅಭಿಪ್ರಾಯ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT