ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಜಿ ಕೇಂದ್ರಕ್ಕೆ ತೆರಳಲು ಸಂತ್ರಸ್ತರು ಹಿಂದೇಟು

Last Updated 6 ಜುಲೈ 2013, 6:07 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಬಳಿಯ ಬೆಟ್ಟದಕಾಡು ಬಳಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ನದಿ ದಂಡೆಯಲ್ಲಿ ವಾಸವಾಗಿದ್ದ ಕೆಲವು ಕುಟುಂಬಗಳನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಾವೇರಿ ನದಿದಂಡೆಯ ಪಕ್ಕದಲ್ಲಿಯೇ ವಾಸವಿರುವ ಸುಮಾರು 150 ಕುಟುಂಬಗಳು ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿವೆ.

ಅಂಗನವಾಡಿಯಲ್ಲಿ ತೆರೆಯಲಾಗಿರುವ ಗಂಜಿಕೇಂದ್ರಕ್ಕೆ ಕೇವಲ ಮೂರು ಕುಟುಂಬದ 10 ಜನ ಸದಸ್ಯರು ಮಾತ್ರ ತೆರಳಿದ್ದಾರೆ. ಇನ್ನುಳಿದ ಜನರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ನದಿ ದಂಡೆಯ ಮೇಲೆ ನಿರ್ಮಿಸಲಾಗಿರುವ ಮನೆಗಳಿಗೆ ಯಾವುದೇ ಹಕ್ಕುಪತ್ರ ಇಲ್ಲ. ಹೀಗಾಗಿ, ತಾವು ಗಂಜಿಕೇಂದ್ರಕ್ಕೆ ಹೋದಾಗ ಈ ಮನೆಗಳನ್ನು ನಾಶಪಡಿಸಬಹುದೆನ್ನುವ ಆತಂಕ ಕೆಲವರಿಗೆ ಕಾಡುತ್ತಿದೆ. ಹೀಗಾಗಿ ಬಹುತೇಕ ಜನರು ಗಂಜಿಕೇಂದ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಮನೆಯ ಗೋಡೆಗೆ ಕಾವೇರಿ ನದಿಯ ನೀರು ಅಪ್ಪಳಿಸುತ್ತಿದ್ದರೂ ಅವರು ಸ್ಥಳಾಂತರಗೊಳ್ಳುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ' ಪ್ರತಿನಿಧಿ ಎದುರು ಅಧಿಕಾರಿಗಳು ಅಸಹಾಯಕತೆಯನ್ನು ತೋಡಿಕೊಂಡರು.

ಶಾಶ್ವತ ಪರಿಹಾರಕ್ಕೆ ಆಗ್ರಹ: `ತಮಗೆ ಶಾಶ್ವತವಾಗಿ ನಿವೇಶನ ಕೊಟ್ಟರೆ ಮಾತ್ರ ಇಲ್ಲಿಂದ ಸ್ಥಳಾಂತರಗೊಳ್ಳುತ್ತೇವೆ. ಇಲ್ಲದಿದ್ದರೆ ನಾವು ಇಲ್ಲಿಯೇ ಇರುತ್ತೇವೆ'  ಎಂದು ಸ್ಥಳಾಂತರಗೊಂಡವರು ಸುದ್ದಿಗಾರರಿಗೆ ಹೇಳಿದರು.

`ಸುಮಾರು 30-40 ವರ್ಷಕ್ಕಿಂತಲೂ ಹೆಚ್ಚು ಕಾಲ ನಾವಿಲ್ಲಿ ವಾಸವಿದ್ದೇವೆ. ನಮ್ಮ ತಾತನ ಕಾಲದಿಂದಲೂ ನಾವಿಲ್ಲಿ ಇದ್ದೇವೆ. ಆಗ ನಮಗೆ ಹೊಳೆ ದಂಡೆಯ ಮೇಲೆ ವಾಸವಿರಬಾರದು ಎಂದು ಯಾರೂ ಹೇಳಿಲ್ಲ' ಎಂದು ಜ್ಯೋಬಿ ಹೇಳಿದರು.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ ಮಾತನಾಡಿ, ಬೇರೆ ಸ್ಥಳಗಳಲ್ಲಿ ನಿವೇಶನ ಕೊಡುತ್ತೇವೆ ತೆರಳಿ ಎಂದರೆ ಇವರಾರೂ ಒಪ್ಪುತ್ತಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದಿರುವ ಇವರಿಗೆ ಆಸುಪಾಸಿನಲ್ಲಿಯೇ ನಿವೇಶನ ಕಲ್ಪಿಸಬೇಕಾಗಿದೆ ಎಂದರು.

ಅವರ ಜೊತೆ ಉಪಾಧ್ಯಕ್ಷೆ ಷಫಿಯಾ ಮೊಹಮ್ಮದ್, ಗ್ರಾಮ ಪಂಚಾಯಿತಿ ಸದಸ್ಯ ರಘು ಕೂಡ ಇವರಿಗೆ ಧ್ವನಿಗೂಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ಭಾಗದಲ್ಲಿ ಒತ್ತುವರಿಯಾಗಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ, ಇವರಿಗೆ ಹಂಚುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಗುಡ್ಡೆಹೊಸೂರು ಬಳಿಯ ಮೂರು ಎಕರೆ ಪ್ರದೇಶದಲ್ಲಿ ಇವರಿಗೆ ನಿವೇಶನ ನೀಡಿ, ಆಶ್ರಯ ಯೋಜನೆಯಡಿ ಮನೆಗಳನ್ನು ಕಟ್ಟಿಕೊಡುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗಂಜಿ ಕೇಂದ್ರಕ್ಕೆ ಸ್ಥಳಾಂತರವಾಗಿರುವ ಕುಟುಂಬಗಳಿಗೆ ಪಡಿತರ ಅಕ್ಕಿ, ಬೇಳೆ ಕಾಳುಗಳನ್ನು ಜಿಲ್ಲಾಡಳಿತ ವತಿಯಿಂದ ಸರಬರಾಜು ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಅರೆಯೂರು ಜಯಣ್ಣ, ಸದಸ್ಯ ವಿ.ಕೆ. ಲೋಕೇಶ್, ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ವೆಂಕಟಾಚಲಪ್ಪ, ಪಟ್ಟೆಮನೆ ಶೇಷಪ್ಪ, ಇತರರು ಉಪಸ್ಥಿತರಿದ್ದರು.

ಶನಿವಾರಸಂತೆ: ಸಾಧಾರಣ ಮಳೆ
ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಾದ ಮುಳ್ಳೂರು, ಹೊನ್ನೆಕೊಪ್ಪಲು, ಮಾಲಂಬಿ, ಗೋಪಾಲಪುರ, ದುಂಡಳ್ಳಿ, ಗಂಗನಹಳ್ಳಿ, ತೋಯಳ್ಳಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.

ಹೊನ್ನೆಕೊಪ್ಪಲು ಗ್ರಾಮದಲ್ಲಿ ಬುಧವಾರದಿಂದ ಗುರುವಾರದವರೆಗೆ ಐದು ಇಂಚು ಮಳೆ ಸುರಿದಿದೆ. ಹೊಲಗದ್ದೆಗಳಲ್ಲಿ ನೀರು ತುಂಬಿದ್ದು, ಬೆಳೆ ಹಾನಿಯಾಗಿದೆ. ಶನಿವಾರಸಂತೆ ಪಟ್ಟಣದಲ್ಲೂ ಬುಧವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆಯವರೆಗೆ 130 ಮಿ.ಮೀ.ಮಳೆಯಾಗಿದೆ. ವರ್ಷ ಪ್ರಾರಂಭದಿಂದ ಜುಲೈ 5ರವರೆಗೆ ಒಟ್ಟು 34 ಇಂಚು ಮಳೆಯಾಗಿದೆ. ಈ ವರ್ಷ ಕೊಡ್ಲಿಪೇಟೆ ವಿಭಾಗದಲ್ಲೂ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT