ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲುಬೇನೆ: 4 ಎಮ್ಮೆ–ಕರು ಸಾವು

Last Updated 2 ಜನವರಿ 2014, 7:16 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ವೇದಗಂಗಾ ಮತ್ತು ದೂಧಗಂಗಾ ನದಿಪಾತ್ರದ ಗ್ರಾಮಗಳ ಜಾನುವಾರುಗಳಲ್ಲಿ ಕಳೆ­ದೊಂದು ವಾರದಿಂದ ಸಾಂಕ್ರಾಮಿಕ ಕಾಲುಬಾಯಿ ಬೇನೆ ಕಾಣಿಸಿಕೊಂಡಿದ್ದು, ಮಾಂಗೂರ ಗ್ರಾಮವೊಂದರಲ್ಲಿಯೇ ಕಳೆದೆರೆಡು ದಿನಗಳಲ್ಲಿ ಘಟಸರ್ಪ ರೋಗ (ಗಂಟಲು ಬೇನೆ)ದಿಂದ ಎಂಟು ದನ–ಕರುಗಳು ಮೃತಪಟ್ಟು, 25ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿವೆ.

ಕಬ್ಬು ಕಟಾವು ಮಾಡಲು ಮಹಾ­ರಾಷ್ಟ್ರದಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ತಂದಿರುವ ಎತ್ತುಗಳಿಂ­ದಲೇ ಈ ರೋಗ ಹರಡಿರಬಹುದು ಎಂದು ಪಶು ವೈದ್ಯರು ಶಂಕೆ ವ್ಯಕ್ತಪಡಿ­ಸಿದ್ದಾರೆ. ಮಾಂಗೂರ ಗ್ರಾಮದಲ್ಲಿ ಕಳೆದೆರೆಡು ದಿನಗಳಿಂದ ಎಮ್ಮೆ ಮತ್ತು ಹಸುಗಳಲ್ಲಿ ಘಟಸರ್ಪ ವ್ಯಾಧಿ ಉಲ್ಬಣಗೊಂಡಿದೆ.

ಗ್ರಾಮದ ರಾವಸು ಪಾಟೀಲ, ರವೀಂದ್ರ ಪಾಟೀಲ, ಗುಂಡು ಮಿರಜೆ, ಅನಿಲ ಅಡಕೆ, ದಯಾನಂದ ಧನವಡೆ ಎಂಬುವವರಿಗೆ ಸೇರಿದ 4 ಎಮ್ಮೆ ಮತ್ತು 4 ಕರುಗಳು ಬಲಿಯಾಗಿವೆ. ಗ್ರಾಮದಲ್ಲಿ 25ಕ್ಕೂ ಹೆಚ್ಚು ದನಕರುಗಳು ಗಂಟಲು ಬೇನೆಯಿಂದ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

‘ಸಾಮಾನ್ಯವಾಗಿ ನದಿಪಾತ್ರದ ಗ್ರಾಮ­ಗಳಲ್ಲಿ ಅಥವಾ ಚಳಿಗಾಲದಲ್ಲಿ ಪ್ರತಿವರ್ಷ ಜಾನುವಾರುಗಳಲ್ಲಿ ಕಾಲು ಬಾಯಿ ಬೇನೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ ನೀಡಿದರೆ ಒಂದು ವಾರ­ದಲ್ಲಿ ಆ ದನಕರುಗಳು ಗುಣಮುಖ­ವಾ­ಗುತ್ತವೆ. ಆದರೆ, ಮಾಂಗೂರ ಗ್ರಾಮ­ದಲ್ಲಿ ಜಾನುವಾರುಗಳಿಗೆ ಕಳೆದೊಂದು ವಾರದಿಂದ ಕಾಲು ಬಾಯಿ ಬೇನೆ ತಗುಲಿದ್ದು, ಅದರಲ್ಲಿ ಘಟಸರ್ಪ ರೋಗ ಹುಟ್ಟಿಕೊಂಡು ಉಸಿರಾಟ ತೊಂದರೆ­ಯಿಂದ ಜಾನುವಾರುಗಳು ಸಾವಿಗೀಡಾ­ಗುತ್ತಿವೆ.

ಇತರ ಜಾನುವಾರುಗಳಿಗೂ ಈ ರೋಗ ಹರಡದಂತೆ ಲಸೀಕರಣ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಲಾ­ಗು­ವುದು. ರೋಗ ಹತೋಟಿಗೆ ಬರುವ ತನಕ 24 ಗಂಟೆಯೂ ಚಿಕಿತ್ಸಾ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಪಶು ಸಂಗೋಪನಾ ಇಲಾಖೆ ಸಹಾ­ಯಕ ನಿರ್ದೇಶಕ ಎಸ್‌.ಎಸ್‌. ಕುಲಕರ್ಣಿ ’ಪ್ರಜಾವಾಣಿ’ಗೆ ತಿಳಿಸಿದರು.

‘ಏಕಾಏಕಿಯಾಗಿ ದನಕರುಗಳಿಗೆ ಗಂಟಲು ರೋಗ ತಗುಲಿ ಸಾವಿಗೀಡಾಗು­ತ್ತಿವೆ. ಕುಟುಂಬ ನಿರ್ವಹಣೆಯ ಮೂಲ ಆಧಾರ ಸ್ಥಂಭವಾಗಿದ್ದ ಹಾಲು ಕರೆಯುವ ಎಮ್ಮೆಗಳು ರೋಗಕ್ಕೆ ಬಲಿಯಾಗುತ್ತಿರುವುದರಿಂದ ಬಡವರು ಕಂಗಾಲಾಗಿದ್ದಾರೆ. ಮೃತಪಟ್ಟಿರುವ ದನಕರುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ರೋಗ ಅಂಟಿಕೊಂಡಿರುವ ಜಾನುವಾರುಗಳ ಚಿಕಿತ್ಸೆಗಾಗಿ ಭರಿಸಿರುವ ವೆಚ್ಚವನ್ನು ಸರ್ಕಾರ ಪಾವತಿಸಬೇಕು’ ಎಂದು ಗ್ರಾಮಸ್ಥರಾದ ಸಂಜಯ ಪಾಟೀಲ, ಬಾಬಾಸಾಬ ಪಾಟೀಲ ಮುಂತಾದವರು ಆಗ್ರಹಪಡಿಸಿದರು.

’ಗ್ರಾಮದಲ್ಲಿ ಪಶು ಚಿಕಿತ್ಸಾಲಯ­ವಿದೆ. ಆದರೆ, ವೈದ್ಯಾಧಿಕಾರಿಯನ್ನು ನೇಮಿಸಲಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಬೋರಗಾಂವ ಪಶು ಚಿಕಿತ್ಸಾಲಯದ ವೈದ್ಯರನ್ನು ಪ್ರಭಾರಿ­ಯಾಗಿ ನಿಯೋಜನೆ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ಪಶುಗಳ ಚಿಕಿತ್ಸೆಗಾಗಿ ಪರದಾಡುವಂತಾಗಿದ್ದು, ಇಲಾಖೆ ಗ್ರಾಮಕ್ಕೆ ಕಾಯಂ ಪಶು ವೈದ್ಯರ ನಿಯೋಜನೆ ಮಾಡಬೇಕು’ ಎಂದು ರೈತರು ಒತ್ತಾಯಿಸುತ್ತಾರೆ.

ಗ್ರಾಮದ ಆದಿನಾಥ ಗ್ರಾಮೀಣ ಮತ್ತು ನಗರ ಅಲ್ಪಸಂಖ್ಯಾತರ ಅಭಿವೃದ್ಧಿ ಸಂಘದ ಕಾರ್ಯಕರ್ತರು ರೋಗ ತಗುಲಿರುವ ಜಾನುವಾರುಗಳಿಗೆ ಚಿಕಿತ್ಸೆ ದೊರಕಿಸಿಕೊಡಲು ಶ್ರಮಿಸುತ್ತಿದ್ದಾರೆ. ಪಶು ವೈದ್ಯ ಡಾ.ಮಹಾವೀರ ಇಮ­ಗೌಡರ ಮತ್ತು ಸಿಬ್ಬಂದಿ ಗ್ರಾಮದಲ್ಲಿ ಬಿಡಾರ ಹೂಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ದೂಧಗಂಗಾ ನದಿಪಾತ್ರದ ಕಾರದಗಾ, ಬಾರವಾಡ, ಚಾಂದಶಿರದವಾಡ್, ಭೋಜ್ ಗ್ರಾಮಗಳಲ್ಲೂ ಜಾನುವಾರು­ಗಳು ಕಾಲು­ಬಾಯಿ ಬೇನೆಯಿಂದ ಬಳಲುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT