ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗಂಡ-ಹೆಂಡತಿಯ ಗುಲಾಮಗಿರಿಗೆ ಒಳಗಾಗುವುದಿಲ್ಲ'

Last Updated 18 ಏಪ್ರಿಲ್ 2013, 13:10 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರವು ತೀವ್ರ ಜಿದ್ದಾಜಿದ್ದಿಯ ಚುನಾವಣಾ ಕಣವಾಗಿ ಪರಿಣಮಿಸಿದೆ.

ಸಮಾಜವಾದಿ ಪಕ್ಷದಿಂದ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ನೇರ ಪ್ರತಿಸ್ಪರ್ಧಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದತ್ ಅಲಿಖಾನ್, ಬಿಜೆಪಿ ಅಭ್ಯರ್ಥಿಯಾಗಿ ರವಿ ಕುಮಾರ್ ಗೌಡ ಇದ್ದರೂ ನೇರ ಹಣಾಹಣಿ ಇರುವುದು ಅನಿತಾ ಮತ್ತು ಯೋಗೇಶ್ವರ್ ನಡುವೆ ಎಂಬುದು ಕ್ಷೇತ್ರದ ಜನರ ಮಾತಾಗಿದೆ.

ಸತತ 12 ದಿನದಿಂದ ಕ್ಷೇತ್ರದಿಂದ ಹೊರಗಿದ್ದ ಯೋಗೇಶ್ವರ್ ಬುಧವಾರ ಚನ್ನಪಟ್ಟಣಕ್ಕೆ ಬಂದಿದ್ದರು. ಕಾಂಗ್ರೆಸ್ ಟಿಕೆಟ್ ತಂದೇ ತರುತ್ತೇನೆ ಎಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಅವರಿಗೆ ತೀವ್ರ ನಿರಾಸೆ ಆಗಿತ್ತು. ಆದರೂ ಅವರಿಗೆ ಬುಧವಾರ ಕ್ಷೇತ್ರದ ಮತದಾರರು ಅಭೂತ ಪೂರ್ವ ಬೆಂಬಲ ವ್ಯಕ್ತಪಡಿಸಿದರು. ಒಂದೇ ದಿನದಲ್ಲಿ ಸಾವಿರಾರು ಜನರು ಒಂದೆಡೆ ಬಂದು, ಯೋಗೇಶ್ವರ್ ಅವರನ್ನು ಬೆಂಬಲಿಸಿದ್ದಲ್ಲದೆ, ಮಳೂರು ಪಟ್ಟಣದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆತಂದ ದೃಶ್ಯ ನೋಡಿ ಎದುರಾಳಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ ಎಂದು ಯೋಗೇಶ್ವರ್ ಹಿಂಬಾಲಕರು ತಿಳಿಸಿದರು.

ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರಿಂದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗೆ ಹೆಚ್ಚು ಸಂತಸವಾಗಿತ್ತು. ನಾಮಪತ್ರ ಸಲ್ಲಿಸುವ ಮೊದಲೇ ಅವರ ಮನದಲ್ಲಿ ಗೆಲುವು ಆವರಿಸಿತ್ತು. ಸೋಮವಾರ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಂದಿದ್ದ ಸಾವಿರಾರು ಜನರನ್ನು ನೋಡಿ, ವಿಜಯದ ಸಂಕೇತವನ್ನು ಪ್ರದರ್ಶಿಸಿದ್ದರು.

ಆದರೆ ಬುಧವಾರ ಯೋಗೇಶ್ವರ್ ನಾಮಪತ್ರ ಸಲ್ಲಿಸುವಾಗ ಸೇರಿದ್ದ ಜನರ ಸಂಖ್ಯೆಯನ್ನು ನೋಡಿ ಬಹುತೇಕರು ಮೂಕ ವಿಸ್ಮಿತರಾದರು. ಏಕಪಕ್ಷೀಯ ಚುನಾವಣೆ ಆಗಬಹುದು ಎಂದು ಲೆಕ್ಕಿಸಿದ್ದವರಿಗೆ ಯೋಗೇಶ್ವರ್ ಚುನಾವಣೆ ಪ್ರವೇಶಿಸಿರುವುದರಿಂದ ತೀವ್ರ ಸ್ಪರ್ಧೆ ಎದುರಾದಂತಾಗಿದೆ.

`15 ದಿನ ಅಲೆದೆ' : `ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ತ್ಯಜಿಸಿ ಆಡಳಿತಾರೂಢ ಬಿಜೆಪಿ ಸೇರಿ ಕೆಲ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದೆ. ಬಿಜೆಪಿಯ ಆಂತರಿಕ ಕಲಹದಿಂದ ಪಕ್ಷ ವಿಭಜನೆಯಾಗಿದ್ದರಿಂದ ಬೇಸರವಾಗಿತ್ತು. ಅಲ್ಲದೆ ಕೆಲ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದರಿಂದ ಕಾಂಗ್ರೆಸ್ ಬಾಗಿಲು ತಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಆ ಪಕ್ಷದ ಶಾಸಕನಾಗಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಆಗುತ್ತದೆ. ಅಲ್ಲದೆ ನೀರಾವರಿ ತಾಲ್ಲೂಕು ಮಾಡಬೇಕು ಎಂಬ ಕನಸು ಈಡೇರಿಸಲು ನೆರವಾಗುತ್ತದೆ ಎಂದು ಪುನಃ ಕಾಂಗ್ರೆಸ್ ಸೇರಲು ಮುಂದಾದೆ. ಟಿಕೆಟ್‌ಗಾಗಿ 15 ದಿನ ಕಾಂಗ್ರೆಸ್ ಹೈಕಮಾಂಡ್ ಮನೆ ಅಲೆದೆ. ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದೆ. ಆದರೆ ಪಕ್ಷ ಟಿಕೆಟ್ ನೀಡದೆ ವಂಚಿಸಿತು' ಎಂದು ಅವರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

`ಕಾಂಗ್ರೆಸ್ ಟಿಕೆಟ್ ಪಡೆಯುವ ಸಲುವಾಗಿ ಶಾಸಕ ಸ್ಥಾನಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ. ಆದರೆ ಹೈಕಮಾಂಡ್ ಟಿಕೆಟ್ ನೀಡಲಿಲ್ಲ. ರಾಜಕೀಯ ಒಪ್ಪಂದಗಳಲ್ಲಿ ಮುಳುಗಿರುವ ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ವ್ಯಕ್ತಿಗೆ ಟಿಕೆಟ್ ಕೊಡಲು ಮುಂದಾಗಲಿಲ್ಲ' ಎಂದು ಹೇಳಿದರು.

`ನಾನು ಸ್ಪರ್ಧಿಸುವುದಿಲ್ಲ, ಗೆಲುವು ನನ್ನದೇ ಎಂದು ಕೆಲ ಅಭ್ಯರ್ಥಿಗಳು ಭ್ರಮೆಯಲ್ಲಿ ಇದ್ದರು. ನಾನು ಹಾಗೆಲ್ಲ ಕಣದಿಂದ ಹಿಂದೆ ಸರಿಯುವವನಲ್ಲ. ಕ್ಷೇತ್ರದ ಮತದಾರರ ಶ್ರೀರಕ್ಷೆ ಇರುವವರೆಗೆ ನನ್ನನ್ನು ಯಾರಿಂದ ಏನೂ ಮಾಡಲು ಆಗುವುದಿಲ್ಲ' ಎಂದು ಅವರು ತಿಳಿಸಿದರು.

`ಅಕ್ಕ-ಪಕ್ಕದ ಕ್ಷೇತ್ರದಲ್ಲಿ ಗಂಡ-ಹೆಂಡತಿಯರನ್ನು ಗೆಲ್ಲಿಸಿ, ಅವರ ಗುಲಾಮಗಿರಿಯಲ್ಲಿ ಇರಲು ಚನ್ನಪಟ್ಟಣದ ಮತದಾರರು ಬಯಸುವುದಿಲ್ಲ. ಸ್ವಾಭಿಮಾನಿ ಮತದಾರರು ಚುನಾವಣೆಯಲ್ಲಿ ಹೊರಗಿನವರಿಗೆ ಬುದ್ಧಿ ಕಲಿಸತ್ತಾರೆ' ಎಂದರು.

ಹೆದರಿಸುವ ತಂತ್ರ: `12 ದಿನ ಕ್ಷೇತ್ರದಿಂದ ಹೊರಗಿದ್ದ ನಾನು ನಾಮಪತ್ರ ಸಲ್ಲಿಸಲು ಬುಧವಾರ ಬಂದಾಗ ಸಾವಿರಾರು ಬೆಂಬಲಿಗರು ಸ್ವಯಂ ಪ್ರೇರಿತರಾಗಿ ಬಂದರು. ಇವರನ್ನು ನಿಯಂತ್ರಿಸುವ ನೆಪದಲ್ಲಿ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಚುನಾವಣಾ ಕಣದಲ್ಲಿ ಇರುವ ಕೆಲವರು ಪೊಲೀಸರ ಮೂಲಕ ಬೆಂಬಲಿಗರನ್ನು ಹೆದರಿಸಲು ಈ ಕೃತ್ಯ ಎಸಗಿದ್ದಾರೆ. ಇದಕ್ಕೆಲ್ಲ ಕ್ಷೇತ್ರದ ಮತದಾರರು ಜಗ್ಗುವುದಿಲ್ಲ' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT