ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಹೆಣ್ಣು ಸಮಾನತೆ

Last Updated 9 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಸೂಫಿ ಪ್ರೇಮ ವ್ಯಾಖ್ಯಾನದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದಿರುವುದು ಕೂಡ ವಿಶಿಷ್ಟವಾಗಿದೆ. ಇಷ್ಕ್ ಎನ್ನುವುದು ಬರೀ ಪ್ರೇಮ ವ್ಯಾಖ್ಯಾನಕ್ಕೆ ಮಾತ್ರ ಸೀಮಿತವಾಗದೇ ಮಾನವೀಯತೆ ಮತ್ತು ವಿಶ್ವಮಾನವ ಪರಿಕಲ್ಪನೆಯನ್ನು ಸಾರುತ್ತದೆ. ಇಸ್ಲಾಮಿಕ್ ಕಾನೂನಿನಲ್ಲಿ ಮತ್ತು ಸಮಾಜದ ಆಗುಹೋಗುಗಳಲ್ಲಿ ಪುರುಷರದ್ದೇ ಮೇಲುಗೈ.

ಆದರೆ ಕುರಾನ್‌ನಲ್ಲಿ ಮತ್ತು ಇಸ್ಲಾಮಿಕ್ ಆಧ್ಯಾತ್ಮದಲ್ಲಿ ಪುರುಷರು ಮತ್ತು ಸ್ತ್ರೀಯರು ಇಬ್ಬರಿಗೂ ಸಮಾನತೆ ಇದೆ. ಕುರಾನಿನ ಅಧ್ಯಾಯ 4 : 1ರಲ್ಲಿ ಹೆಣ್ಣು ಗಂಡನ್ನು ಒಂದೇ ಜೀವದಲ್ಲಿ ಸೃಷ್ಟಿಸಲಾಗಿದೆ ಎಂದಿದೆ. ಇಷ್ಟಾಗಿಯೂ ಪರಂಪರಾಗತವಾಗಿ ಸೂಫಿ ಎಂದರೆ ಗಂಡಾಗಿಯೇ ಉಳಿದಿದ್ದಾನೆ. ಸೂಫಿ ನೀತಿಶಾಸ್ತ್ರವು ಅನಾಥರಕ್ಷಕ, ಧೀರೋದಾತ್ತ, ನಿಸ್ವಾರ್ಥ, ದಯಾಪರವಾಗಿರುವ ಲಕ್ಷಣಗಳನ್ನು ಒಳಗೊಂಡ, ‘ಫತವ್ವಾ’ ಅಥವಾ ‘ಯುವ ಪುರುಷತ್ವ’ ಎಂದೆನಿಸಲ್ಪಟ್ಟಿದೆ. ಇದಕ್ಕೆ ಪ್ರಾಚೀನ ಅರೆಬಿಕ್ ಸಂಸ್ಕೃತಿಯಲ್ಲಿನ ಧೈರ್ಯ, ವಿಶೇಷವಾದ ದಯಾಪರತೆ, ಬಲಹೀನರ ರಕ್ಷಕ ಗುಣಗಳನ್ನೊಳಗೊಂಡ ‘ಮರವ್ವಾ’ ಅಥವಾ ‘ಪುರುಷತ್ವ’ದ ಅರ್ಥ ಹಾಗೂ ನಿಯಮಕ್ಕೆ ಸರಿಸಮನಾದ ಮೂಲದ ಬೆಂಬಲವಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಮಹಿಳೆಯನ್ನು ಗಂಡು ಎಂದು ಗುರುತಿಸುವ (ಭಾರತದಲ್ಲಿ ಗಂಡೆದೆಯುಳ್ಳವರು ಎನ್ನುವಂತೆ) ಪರಿಪಾಠವಿದೆ.

ಹನ್ನೆರಡನೆ ಶತಮಾನದ ಖ್ಯಾತ ಸೂಫಿ ಮತ್ತು ಚಿಂತಕ ಫರೀದುದ್ದೀನ್ ಅತ್ತಾರ್, ರಾಬಿಯಾ ಅಲ್ ಅದವಿಯ್ಯರನ್ನು ಮಹಿಳಾ ಸೂಫಿ ಎನ್ನದೆ ಗಂಡು ಸೂಫಿಗಳ ಸಾಲಿನಲ್ಲಿ ಗುರುತಿಸುತ್ತಾರೆ. ‘ದೇವರ ಭಕ್ತಿ ಸಾಧನೆಯ ಮಾರ್ಗದಲ್ಲಿ ಓರ್ವ ಮಹಿಳೆ ಗಂಡಿನ ಸಾಧನೆ ಮಾಡಿದಾಗ ಅವಳನ್ನು ಮಹಿಳೆಯೆಂದು ಗುರುತಿಸಲಾಗದು, ಅವಳು ಗಂಡೇ ಆಗಿರುತ್ತಾಳೆ’ ಎನ್ನುತ್ತಾರೆ ಅತ್ತಾರ್.

ಪಂಜಾಬಿನ ಖ್ಯಾತ ಸೂಫಿ ಸಂತ ಬಾಬಾ ಷೇಖ್ ಫರೀದ್ ಇಂತಹ ಮಹಿಳಾ ಸಾಧಕಿಯರನ್ನು ‘ಹೆಣ್ಣಿನ ರೂಪದಲ್ಲಿ ಸೃಷ್ಟಿಸಲಾದ ಗಂಡು’ ಎಂದು ಹೊಗಳಿದ್ದಾರೆ. ಆದರೆ ಇಂತಹ ಅರ್ಥೈಸುವಿಕೆಯ ಉದ್ದೇಶವೇನೇ ಇದ್ದರೂ, ಕೊನೆಯಲ್ಲಿ ಇದು ಮಹಿಳೆಯರನ್ನು ಕೀಳರಿಮೆಯ ಪರಿಧಿಯೊಳಗೆ ನೂಕುವ ಹುನ್ನಾರವಾಗಿಯೇ ಕಾಣಿಸುವ ಅಪಾಯವಿದೆ.

ಇಂತಹ ವ್ಯಾಖ್ಯಾನದ ಹಿಂದೆ  ಪ್ರಾಮಾಣಿಕ ಆಧ್ಯಾತ್ಮಿಕ ಸಾಧನೆ ಪುರಷರ ಸೊತ್ತಾಗಿದೆ ಎಂಬ ಅರ್ಥ ಎದ್ದು ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಸೂಫಿ ಆಧ್ಯಾತ್ಮಿಕ ಸಾಧನೆಗೆ ಹೆಣ್ಣು ಗಂಡೆಂಬ ಬೇಧವಿರದೆ ದೈವಸನ್ನಿಧಿಯ ಸ್ಥಾನ ಸಮಾನವಾಗಿರುತ್ತದೆ. ಇದಕ್ಕೆ ರಾಬಿಯಾ ಅಲ್ ಅದವಿಯ್ಯ ಒಂದು ಉತ್ತಮ ನಿದರ್ಶನವಾಗುತ್ತಾರೆ. ‘ಆಖಿರತ್’ ಕಟ್ಟಕಡೆಯ ದೈವಸಾನ್ನಿಧ್ಯ ತಲಪಿದ ಕೂಡಲೇ ಈ ಲಿಂಗಬೇಧ, ಕಟ್ಟುಪಾಡುಗಳು ಯಾವುದಕ್ಕೂ ಬೆಲೆಯಿರುವುದಿಲ್ಲ

ಸೂಫಿ ಪಂಥದಲ್ಲಿ ಸೂಫಿಯೊಬ್ಬನ/ಳ ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ವೈಯಕ್ತಿಕ ಬಯಕೆಗಳು ದೈವಿಕ ಸಂಕಲ್ಪದೊಂದಿಗೆ ಮಿಲನವಾಗುತ್ತದೆ. ಸೂಫಿಯ ನಡೆನುಡಿಗಳು ದೈವಿಕ ಇಚ್ಛೆಯೊಂದಿಗೆ ಐಕ್ಯವಾಗುವಂತೆ, ವೈಯಕ್ತಿಕ ಗುಣಗಳು ಮಾಯವಾಗಿ ದೈವಿಕ ಗುಣಗಳು ಸಂಪನ್ನವಾಗುತ್ತಾ ‘ತೌಹೀದ್’ ಅಥವಾ ದೈವಿಕ ಶಕ್ತಿಯೊಂದಿಗೆ ಲೀನವಾಗುವ ಹಂತಕ್ಕೆ ಮುಟ್ಟುತ್ತಾನೆ. ಈ ಅಂತಿಮ ಘಟ್ಟವನ್ನು ತಲುಪಿದಾಗ ಪರಮಾನಂದವನ್ನು ಹೊಂದುತ್ತಾನೆ/ಳೆ. ಈ ಅಂತಿಮ ಹಂತದಲ್ಲಿ ಹೆಣ್ಣು-ಗಂಡು ಎಂಬ ಭೇದ ನಶಿಸಿಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT