ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧದ ಗುಡಿಯಲ್ಲಿ `ತ್ರಿಗಲ್ ಬಂದಿ' ಪರಿಮಳ

Last Updated 22 ಜುಲೈ 2013, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವಕ್ಕೆ ಭಾನುವಾರ ಸಂಜೆ ವಿಶೇಷ ಕಳೆ ತುಂಬಿತ್ತು. ಜೂನಿಯರ್ ರಾಜಕುಮಾರ್ ಖ್ಯಾತಿಯ ಅಶೋಕ ಬಸ್ತಿ, ವರನಟನ ಹಾವಭಾವ ಪ್ರದರ್ಶಿಸುತ್ತ ಹಾಡಿ ಕನ್ನಡದ ಕಂಪು ಹರಡಿದರೆ ಇದರ ಬೆನ್ನಲ್ಲಿ ಒಂದೇ ಕುಟುಂಬದ ಮೂವರು ವೇದಿಕೆ ಮೇಲೆ ರಾಗ-ರಸದ ಮ್ಯಾಜಿಕ್ ಮೂಲಕ ಸಭಿಕರನ್ನು ರೋಮಾಂಚನಗೊಳಿಸಿದರು.

ಪುಟಾಣಿ ಆದಿತ್ಯ ಕೊಳಲಿನಲ್ಲಿ ತನ್ನ ಪಾರಮ್ಯವನ್ನು ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. ಪತಿ-ಪತ್ನಿಯ ಜುಗಲ್ ಬಂಧಿಯೂ ವಿಶೇಷ ಕಳೆ ತಂದಿತು.
ಸಂಗೀತೋತ್ಸವದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮಗಳ ನಡುವೆ ಅಶೋಕ ಬಸ್ತಿ ಅವರು ಹಾಡಿದ ಶರಣರ ಗೀತೆಗಳ ಗಾಯನದ `ದಡವ ಸೇರಿಸು' ಸಿಡಿಯನ್ನು ಹಿರಿಯ ಗಾಯಕ ನಾಗನಾಥ ಒಡೆಯರ ಬಿಡುಗಡೆ ಮಾಡಿದರು. ಬಾಬುರಾವ ಹಾನಗಲ್, ನಾರಾಯಣರಾವ ಹಾನಗಲ್, ಡಾ.ಮನೋಹರ ನಾಡಕರ್ಣಿ, ಶೈಲೇಂದ್ರ ಕುಮಾರ, ವೀರೇಶ ಕಾಲವಾಡಮಠ ಮತ್ತಿತರರು ಭಾಗವಹಿಸಿದ್ದರು.

ಸಿಡಿ ಬಿಡುಗಡೆಯ ನಂತರ ಬಸ್ತಿ ಅವರು ಗಂಧದ ಗುಡಿ ಚಿತ್ರದ `ನಾವಾಡುವ ನುಡಿಯೇ...' ಹಾಡನ್ನು ಪ್ರಸ್ತುತಪಡಿಸಿದರು. ರಾಜಕುಮಾರ್ ಅವರಂತೆಯೇ ನಟಿಸಿ ಪ್ರೇಕ್ಷಕರ ಮನ ಮುದಗೊಳಿಸಿದರು.

ಇದರ ನಂತರ ವೇದಿಕೆಯೇರಿದ್ದು ಕೊಳಲು ವಾದಕ ಕೃಷ್ಣ ಜೋಶಿ. ಇವರೊಂದಿಗೆ ಸಹೋದರನ ಪುತ್ರ ಆದಿತ್ಯ ಜೋಶಿಯೂ ಇದ್ದರು. ಅಕ್ಕನ ಮಗ ಶ್ರೀವತ್ಸ ಕೌಲಗಿ ತಬಲಾ ಸಾಥ್ ನೀಡಿದರು. ಹಂಸಧ್ವನಿ ರಾಗದಲ್ಲಿ `ವಾತಾಪಿ ಗಣಪತಿಂ ಭಜೇಹಂ' ಕೃತಿಯನ್ನು ಪ್ರಸ್ತುತಪಡಿಸಿದ ಕೃಷ್ಣ ಅವರ ವಾದನಕ್ಕೆ ಆದಿತ್ಯ ಕಳೆಕಟ್ಟಿದರು.

ಪುಟ್ಟ ಬಾಲಕನ ಸಾಧನೆಗೆ ಸಭಾಂಗಣ ಚಪ್ಪಾಳೆಯ ಮಳೆ ಸುರಿಸಿ ಅಭಿನಂದನೆ ಸಲ್ಲಿಸಿತು. ಇದಕ್ಕೂ ಮುನ್ನ ಎಂಜಿನಿಯರಿಂಗ್ ವಿದ್ಯಾರ್ಥಿನಿ ತೇಜಸ್ವಿನಿ ಮಳಗಿ ಭೂಪ್ ರಾಗ ಪ್ರಸ್ತುತಪಡಿಸಿದರು. ಪ್ರಕಾಶ ಹೆಗಡೆ ಯಡಹಳ್ಳಿ ಅವರ ತನಿ ಹಾರ್ಮೋನಿಯಂ ವಾದನ, ವಿಕಾಸ ನರೇಗಲ್ ಅವರ ತನಿ ತಬಲಾ ವಾದನ, ವೈ.ಕಾಶೀನಾಥ, ಜಯರಾಮ ಕುಲಕರ್ಣಿ, ಶ್ರೀಕಾಂತ ಬಾಕಳೆ, ಹನುಮಂತಪ್ಪ ಅಳಗವಾಡಿ ಅವರ ಗಾಯನ ಗಮನ ಸೆಳೆಯಿತು.

ಕೊನೆಗೆ ನಡೆದ ಶ್ರೀಪಾದ ಹೆಗಡೆ ಸೋಮನಮನೆ ಮತ್ತು ಬಕುಳಾ ಹೆಗಡೆ ಅವರ ದ್ವಂದ್ವ ಗಾಯನ ಸಂಗೀತ ಪ್ರಿಯರನ್ನು ರಸಗಡಲಲ್ಲಿ ತೇಲಾಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT