ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ವಿಮರ್ಶೆಗೆ ಸಕಾಲ

ನ್ಯಾಯಾಂಗಕ್ಕೆ ಕಾಯಕಲ್ಪ ಹೇಗೆ?
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ಗೆದ್ದವನು ಸೋತ, ಸೋತವನು ಸತ್ತ’ ಎಂಬ ಜನಜನಿತವಾದ ಹಳೆಯ ಗಾದೆ ಮಾತು ನಮ್ಮ ನ್ಯಾಯದಾನದ ವಿಳಂಬಕ್ಕೆ ಕೈಗನ್ನಡಿ. ನ್ಯಾಯಮೂರ್ತಿಗಳ ಕೊರತೆಯಿಂದ ಹಿಡಿದು ಆ ಸ್ಥಾನದ ನೇಮಕಾತಿಗೆ ಗುಣಮಟ್ಟದ ಅಭ್ಯರ್ಥಿಗಳು ಸಿಗದಿರುವವರೆಗೂ ಇದಕ್ಕೆ ಕಾರಣವಾಗುವ ಸಂಗತಿಗಳು ಹಲವು. ಪರಿಣಾಮವಾಗಿ ಕೋರ್ಟ್‌ಗಳಲ್ಲಿ ಕೋಟ್ಯಂತರ ಪ್ರಕರಣಗಳು ಕೊಳೆಯುತ್ತಾ ಬಿದ್ದಿವೆ. ಈ ‘ಅನ್ಯಾಯ’ ಸರಿಪಡಿಸಿ ನ್ಯಾಯಾಂಗ ವ್ಯವಸ್ಥೆಗೆ ‘ನ್ಯಾಯ’ ಒದಗಿಸುವುದು ಹೇಗೆ?

ಕೋರ್ಟು ಕಚೇರಿಗಳೆಂದು ಅಲೆದಿರುವ ಅನುಭವಸ್ಥರು ಬಹಳಷ್ಟು ಬಾರಿ ಕಕ್ಷಿದಾರರು ಹಾಗೂ ಸಾಕ್ಷಿದಾರರು ಕಣ್ಣೀರಿಡುವುದನ್ನು ಕಂಡಿರುವುದುಂಟು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರರು ತುಂಬಿದ ಸಭೆಯಲ್ಲಿ ಭಾವುಕರಾದದ್ದು ಎಲ್ಲರನ್ನೂ ಚಕಿತಗೊಳಿಸಿದೆ. ಜನಸಾಮಾನ್ಯರು ನ್ಯಾಯಾಂಗದಲ್ಲಿ ಇಟ್ಟುಕೊಂಡಿರುವ ವಿಶ್ವಾಸ, ನಂಬಿಕೆಗಳನ್ನು ಎತ್ತಿಹಿಡಿಯುವಲ್ಲಿ ಬಂದಿರುವ ತೊಡಕುಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಮುಖ್ಯವಾಗಿ, ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಬೆಂಬಲ ದೊರೆಯದಿರುವುದನ್ನು ಎತ್ತಿ ಹೇಳಿದರು.

ಅಧಿಕ ನ್ಯಾಯಾಧೀಶರ ನೇಮಕಾತಿಯಿಂದ ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಸುಧಾರಣೆ ಬರಬಹುದೆಂಬುದು ಅನೇಕ ಬಾರಿ ಕೇಳಿಬಂದಿರುವ ಸಲಹೆ. ನಿರ್ದಿಷ್ಟವಾದ ಜನಸಂಖ್ಯೆಗೆ ತಕ್ಕಂತೆ ನ್ಯಾಯಾಧೀಶರ  ಪ್ರಮಾಣವಿದ್ದಲ್ಲಿ ನ್ಯಾಯಾಲಯಗಳು ತ್ವರಿತವಾಗಿ ಮೊಕದ್ದಮೆಗಳನ್ನು ವಿಲೇವಾರಿ ಮಾಡಿಯಾವು ಎಂಬುದು ಇಲ್ಲಿನ ಆಶಯ.  ಈ ಚರ್ಚೆಯಲ್ಲಿ ನಿರ್ವಿವಾದದ ವಿಷಯವೆಂದರೆ, ಮೊಕದ್ದಮೆಗಳು ನಡೆಯುವ ನಿಧಾನಗತಿ. ಭಾರತೀಯ ಕೋರ್ಟುಗಳಲ್ಲಿನ ಮೊಕದ್ದಮೆಗಳ ವಿಚಾರಣೆಯ ವಿಳಂಬ ಗತಿ ವಿಶ್ವಕುಖ್ಯಾತಿ ಪಡೆದಿದೆ. ಇದು ನ್ಯಾಯಾಂಗದ ಸಮಸ್ಯೆಯೊಂದೇ ಅಲ್ಲ. ಅದು ಬೀರುವ ಸಾಮಾಜಿಕ, ಆರ್ಥಿಕ ಪರಿಣಾಮಗಳಿಂದ ಇಂದು ಇಡೀ ದೇಶ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸ್ಥಿತಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ, ಮತ್ತಷ್ಟು ನ್ಯಾಯಾಧೀಶರನ್ನು ನೇಮಕ ಮಾಡುವುದು ನ್ಯಾಯಾಂಗ ಸುಧಾರಣೆಯ ದೀರ್ಘ ಯಾತ್ರೆಯಲ್ಲಿ ಮೊದಲ ಹೆಜ್ಜೆಯಷ್ಟೆ. ಇಲ್ಲಿ ಸ್ಪಷ್ಟಪಡಿಸಲೇಬೇಕಾದ ಇನ್ನೊಂದು ಅಂಶವಿದೆ: ಅವಶ್ಯಕ ನ್ಯಾಯಾಧೀಶರ ಸಂಖ್ಯೆಯನ್ನು ಲೆಕ್ಕ ಹಾಕುವಾಗ, ಜನಸಂಖ್ಯೆಗೂ ಮೊಕದ್ದಮೆಗಳ ಸಂಖ್ಯೆಗೂ ಇರುವ ಪ್ರಮಾಣವನ್ನು ಪರಿಗಣಿಸಲೇಬೇಕಾಗುತ್ತದೆ. ಜನಸಂಖ್ಯೆಯೊಂದನ್ನೇ ಆಧಾರವಾಗಿ ಇಟ್ಟುಕೊಂಡರೆ ಆಗುವ ಅನುಚಿತತೆಗೆ ಒಂದು ಉದಾಹರಣೆ: ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಜನಸಂಖ್ಯೆಯು ಸುಮಾರು ತಲಾ ಹತ್ತು ಲಕ್ಷದಷ್ಟು. ಜನಸಂಖ್ಯಾಧಾರಿತವಾಗಿ ನ್ಯಾಯಾಧೀಶರನ್ನು ನೇಮಕ ಮಾಡಿದರೆ ಈ ಎರಡೂ ಜಿಲ್ಲೆಗಳಲ್ಲೂ ನ್ಯಾಯಾಧೀಶರ ಸಂಖ್ಯೆ ಒಂದೇ ಪ್ರಮಾಣದಲ್ಲಿ ಇರಬೇಕಾಗುತ್ತದೆ. 

ಆದರೆ ಇಲ್ಲಿನ ಕೋರ್ಟುಗಳಲ್ಲಿ ಹೂಡಿರುವ ಮೊಕದ್ದಮೆಗಳ ಸಂಖ್ಯೆ ತೀರಾ ಭಿನ್ನವಾಗಿದೆ. ಲಭ್ಯವಿರುವ ಮಾಹಿತಿಯ ಅನುಸಾರ, ರಾಮನಗರದಲ್ಲಿ ಸುಮಾರು 33 ಸಾವಿರ ಕೇಸುಗಳಿದ್ದರೆ, ಚಾಮರಾಜನಗರದಲ್ಲಿ ಸುಮಾರು 18 ಕೇಸುಗಳಿವೆ. ಹೀಗಾಗಿ ಹೆಚ್ಚು ಮೊಕದ್ದಮೆಗಳು ಬಾಕಿಯಿರುವ ಕೋರ್ಟುಗಳಲ್ಲಿ ಹೆಚ್ಚು ನ್ಯಾಯಾಧೀಶರು ನೇಮಕವಾಗಬೇಕಾಗಿರುವುದು ಸಹಜ. ಹೀಗಿದ್ದರೂ ನಮ್ಮಲ್ಲಿ ಅವಶ್ಯಕ್ಕಿಂತ ಕಡಿಮೆ ನ್ಯಾಯಾಧೀಶರಿದ್ದಾರೆ ಎಂಬುದು ವಾಸ್ತವ. ಹೈಕೋರ್ಟ್‌ಗಳಲ್ಲಿ ಶೇ 44 ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ 25ರಷ್ಟು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ನೇಮಕಾತಿ ಪ್ರಕ್ರಿಯೆಯಲ್ಲಿಯ ಕೆಲ ಗಮನಾರ್ಹ ಅಂಶಗಳು ಹೀಗಿವೆ:

1. ಮೇಲೆ ತಿಳಿಸಿದ ಶೇ 44 ಮತ್ತು ಶೇ 25 ಖಾಲಿ ಹುದ್ದೆಗಳನ್ನು ಲೆಕ್ಕ ಮಾಡುವಾಗ  ಮಂಜೂರು ಮಾಡಲಾದ ಹುದ್ದೆಗಳನ್ನು ಪರಿಗಣಿಸಲಾಗಿದೆ. ಉದಾಹರಣೆಗೆ: ಹೈಕೋರ್ಟ್‌ಗಳಲ್ಲಿ 1,056 ಹುದ್ದೆಗಳು ಮಂಜೂರಾಗಿದ್ದು ಅವುಗಳಲ್ಲಿ 592 ಮಾತ್ರ ಭರ್ತಿಯಾಗಿವೆ. ಹುದ್ದೆಗಳನ್ನು ಮಂಜೂರು ಮಾಡುವ ಕ್ರಿಯೆಯಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಕೂತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ- ಇದು ಮುಖ್ಯವಾಗಿ ಆಯಾ ರಾಜ್ಯದ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ನಡೆಯುತ್ತದೆ. 

2. ಸರ್ಕಾರದ ಸಹಮತಿ ಎನ್ನಬಹುದಾದ ಕ್ರಿಯೆಯಿರುವುದು ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಲ್ಲಿನ ನೇಮಕದಲ್ಲಿ ಮಾತ್ರ. ಅಧೀನ ನ್ಯಾಯಾಲಯಗಳಿಗೆ ನೇಮಕ ಮಾಡುವಾಗ ನ್ಯಾಯಾಂಗ ಹೆಚ್ಚಾಗಿ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಿರುವಾಗ ಶೇ 25ರಷ್ಟು ಖಾಲಿಯಿರುವ ಹುದ್ದೆಗಳಿಗೆ ಹೊಣೆಗಾರರನ್ನು ಹುಡುಕಲು ನಾವು ಪ್ರಯಾಸ ಪಡಬೇಕಾಗಿಲ್ಲ.

3. ನ್ಯಾಯಾಂಗ ಸುಧಾರಣೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ನ್ಯಾಯಾಧೀಶರ  ನೇಮಕಾತಿಯ ಸುತ್ತಲೇ ಚರ್ಚೆ ಕೇಂದ್ರೀಕೃತವಾಗುತ್ತದೆ. ನ್ಯಾಯಾಲಯ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಆಡಳಿತ ವರ್ಗದಲ್ಲಿಯ ನೌಕರರ ಸಂಖ್ಯೆಯೂ ಮತ್ತು ನ್ಯಾಯಾಲಯಕ್ಕೆ ಒದಗಿಸುವ ಆಧುನಿಕ ತಂತ್ರಜ್ಞಾನವೂ ನಿಗದಿತ ಪ್ರಮಾಣದಲ್ಲಿರಬೇಕು. ಸರ್ಕಾರ ಈ ಸಲುವಾಗಿ ನ್ಯಾಯಾಂಗಕ್ಕೆ ನೀಡುವ ಅನುದಾನ ಹೆಚ್ಚಿಸಬೇಕು.

ಅಧಿಕ ನ್ಯಾಯಾಧೀಶರನ್ನು ನೇಮಿಸುವ ಕ್ರಮವೊಂದೇ ನ್ಯಾಯಾಂಗಕ್ಕೆ ಸಂಜೀವಿನಿಯಾಗಲಾರದು. ಕೋರ್ಟುಗಳಲ್ಲಿ ನ್ಯಾಯ ಪಡೆಯಲು ವರ್ಷಾನುಗಟ್ಟಲೆ ಏಕೆ ಹಿಡಿಯುತ್ತಿದೆ ಎನ್ನುವುದನ್ನು ಗಂಭೀರವಾಗಿ ವಿಮರ್ಶಿಸಬೇಕಾಗಿದೆ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಮೊಕದ್ದಮೆಗಳು ಪೂರ್ಣಗೊಳ್ಳಲು ವಿವಿಧ ಕೋರ್ಟುಗಳು ಭಿನ್ನ ಭಿನ್ನ ಕಾಲಾವಧಿ ತೆಗೆದುಕೊಳ್ಳುತ್ತಿವೆ. ಉದಾಹರಣೆಗೆ: ಕ್ರಿಮಿನಲ್ ಮೇಲ್ಮನವಿಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಸರಾಸರಿ 3.5 ವರ್ಷಗಳಲ್ಲಿ ವಿಲೇವಾರಿಯಾದರೆ, ಬಾಂಬೆ ಹೈಕೋರ್ಟ್‌ನಲ್ಲಿ ಸುಮಾರು 11.75 ವರ್ಷಗಳು ಹಿಡಿಯುತ್ತವೆ. ಮೊಕದ್ದಮೆಗಳನ್ನು ವಿಲೇವಾರಿ ಮಾಡುವ ಗತಿಯೂ ಬೇರೆಬೇರೆಯಾಗಿದೆ.

‘ದಕ್ಷ್’ ಸಂಸ್ಥೆಯು ಕಲೆಹಾಕಿರುವ ಮಾಹಿತಿಯ ಅನುಸಾರ, ಮೊಕದ್ದಮೆಗಳನ್ನು ವಿಲೇವಾರಿ ಮಾಡಲು ಅಲಹಾಬಾದ್ ಹೈಕೋರ್ಟ್‌ ಸರಾಸರಿ 3.7 ವರ್ಷಗಳನ್ನು ತೆಗೆದುಕೊಂಡರೆ, ಸಿಕ್ಕಿಂ ನ್ಯಾಯಾಲಯವು ಸುಮಾರು 9 ತಿಂಗಳು ತೆಗೆದುಕೊಳ್ಳುತ್ತದೆ. ಈ ಸಂಗತಿಯನ್ನು ಕೇಳಿದ ಕೂಡಲೇ ಕೆಲವರು ಹೇಳಬಹುದು, ಈ ವ್ಯತ್ಯಾಸಗಳು ಆಯಾ ಕೋರ್ಟಿನ ಕಾರ್ಯಭಾರದ ಪ್ರಮಾಣವನ್ನು ಆಧರಿಸಿವೆ ಎಂದು. ಇರಬಹುದು, ಆದರೆ ಕರ್ನಾಟಕ ಹೈಕೋರ್ಟ್‌ಗೆ ಸಂಬಂಧಪಟ್ಟಂತೆ ಬಾಕಿ ಉಳಿದಿರುವ ಪ್ರಕರಣಗಳನ್ನು ನೋಡೋಣ. ಇಲ್ಲಿ ರಿಟ್‌ ಅರ್ಜಿಗಳ ಸಂಖ್ಯೆ ಅತ್ಯಧಿಕವಾದರೂ (79,984) ಅವು 866 ದಿನಗಳಿಂದ ವಿಲೇವಾರಿಯಾಗದೆ ಉಳಿದಿವೆ.

ಬೇರೆ ವಿಧದ ಕೆಲವು ಮೊಕದ್ದಮೆಗಳಿಗೆ ಹೋಲಿಸಿದರೆ ಬಾಕಿ ಉಳಿದಿರುವ ದಿನಗಳ ಪ್ರಮಾಣ ಕಡಿಮೆಯೇ. ಕಂಪೆನಿ ಅರ್ಜಿಗಳು ಅಷ್ಟೊಂದು ಪ್ರಮಾಣದಲ್ಲಿ ಇಲ್ಲವಾದರೂ (1,414) ಅವು 2179 ದಿನಗಳಿಂದ ಬಾಕಿ ಉಳಿದಿವೆ!  ಹೀಗೆ ಮೊಕದ್ದಮೆಗಳ ಸಂಖ್ಯೆಗೂ ಅವುಗಳನ್ನು ಇತ್ಯರ್ಥಪಡಿಸಲು ಬೇಕಾದ ಅವಧಿಗೂ ಯಾವುದೇ ಸಂಬಂಧವಿಲ್ಲದಂತೆ ತೋರುತ್ತದೆ. ಹಾಗಾದರೆ ಈ ಕಾಲದ ಪ್ರಮಾಣದಲ್ಲಿನ ವ್ಯತ್ಯಾಸಗಳಿಗೆ ಕಾರಣಗಳನ್ನು ಹುಡುಕಬೇಕಾಗಿದೆ. ಎಲ್ಲ ಕೋರ್ಟುಗಳು ಹಾಗೂ ಎಲ್ಲ ವಿಷಯಗಳಿಗೆ ಸಂಬಂಧಪಟ್ಟ ಮೊಕದ್ದಮೆಗಳು ಒಂದೇ ಗತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವುದು ಇಲ್ಲಿಯ ವಾದವಲ್ಲ.

ಮೊಕದ್ದಮೆಗಳ ನಿಧಾನಗತಿಯನ್ನು ಸುಧಾರಿಸಲು ಹೊರಡುವ ಮುನ್ನ ಕೋರ್ಟ್‌ಗಳ ಚಟುವಟಿಕೆಗಳ ಅಧ್ಯಯನದ ಅಗತ್ಯವನ್ನು ಎತ್ತಿ ಹಿಡಿಯುವುದೇ ಆಗಿದೆ. ಕೋರ್ಟುಗಳ ಅನುಭವ ಇರುವವರೆಲ್ಲರಿಗೂ ತಿಳಿದಿರುವ ವಿಷಯವೆಂದರೆ, ದಿನನಿತ್ಯವೂ ನ್ಯಾಯಾಧೀಶರೊಬ್ಬರ ಮುಂದೆ ಸುಮಾರು 70ರಿಂದ 150  ಪ್ರಕರಣಗಳು ಪಟ್ಟಿಯಾಗುತ್ತವೆ. ಆದರೆ ಅವುಗಳಲ್ಲಿ ವಾಸ್ತವವಾಗಿ ಸಾವಕಾಶವಾದ  ವಾದ ಮಂಡನೆಗೆ ಕಾಲಾವಕಾಶವಿರುವುದು ಹೆಚ್ಚೆಂದರೆ 10-15 ಪ್ರಕರಣಗಳಿಗೆ ಮಾತ್ರ. ಹೀಗಿರುವಾಗ 70- 150 ಪ್ರಕರಣಗಳ ವಕೀಲರು, ಕಕ್ಷಿದಾರರು, ಸಾಕ್ಷಿದಾರರು ತಮ್ಮ ಪ್ರಕರಣಗಳ ಬಗ್ಗೆ ಕಾತರದಿಂದ ಕಾದು ಕೂತುಕೊಂಡಿರಬೇಕಾದ ಪರಿಸ್ಥಿತಿ ಏಕಿರಬೇಕು?

ಆದರೆ ವಾಸ್ತವವಾಗಿ, ಪ್ರಕರಣಗಳನ್ನು ಪಟ್ಟಿ ಮಾಡುವ  ನ್ಯಾಯಾಲಯದ ಆಡಳಿತ ವರ್ಗದವರಿಗೂ ಯಾವ ಪ್ರಕರಣದವರು ಮುಂದೂಡಿಕೆಯನ್ನು ಬೇಡುತ್ತಾರೆ ಎನ್ನುವುದರ ಅರಿವಿಲ್ಲದೆ, ಆ ದಿನದ ಪ್ರಕರಣಗಳ ಪಟ್ಟಿ ಬೆಳೆಯುತ್ತದೆ. ಪ್ರಾಯಶಃ ಮೊಕದ್ದಮೆಗಳನ್ನು ವಿಷಯಾನುಸಾರ ವಿಂಗಡಿಸಿ, ಒಂದೊಂದು ವಿಷಯದ ಮೊಕದ್ದಮೆಗಳಿಗೂ ಕಾಲಮಿತಿಗೆ (no. of hearings) ನ್ಯಾಯಾಲಯ ನಿರ್ದೇಶಿಸಿದರೆ ಪರಿಸ್ಥಿತಿ ಬದಲಾಗಬಹುದು. ಈ ಸಮಸ್ಯೆಗೆ ನಿರ್ದಿಷ್ಟ ಪರಿಹಾರ ಹೀಗೆಯೇ ಎಂದು ಹೇಳಲು ಮತ್ತಷ್ಟು ಸಂಶೋಧನೆಯ ಅಗತ್ಯವಿದೆ. ನಮ್ಮ ನ್ಯಾಯಾಂಗ ರಚನೆಯಾಗಿರುವ ರೀತಿ ಹೇಗಿದೆಯೆಂದರೆ, ಕಾರ್ಯಭಾರದಿಂದ ಬಾಗಿಹೋಗಿರುವ ನ್ಯಾಯಾಧೀಶರ ಮೇಲೆ ನ್ಯಾಯಾಲಯಗಳ ಆಡಳಿತದ ನಿರ್ವಹಣೆ ಸಹ ಬಿದ್ದಿದೆ.

ಆಡಳಿತ ಬದಲಾವಣೆಗಳ ಮೂಲಕ ತರಬಹುದಾದ ಸುಧಾರಣೆಗಳ ಬಗ್ಗೆ ಸಮಯದ ಅಭಾವದಿಂದ ನ್ಯಾಯಾಧೀಶರು ಗಮನ ಹರಿಸಲಾಗಿಲ್ಲ. ನ್ಯಾಯಾಲಯಗಳ ಆಡಳಿತವನ್ನು ನಿರ್ವಹಿಸಲು ಪ್ರತ್ಯೇಕ ಆಡಳಿತ ವರ್ಗದ ರಚನೆಯ ಅವಶ್ಯಕತೆಯಿದೆ. ಈಗಿರುವ ನಿರ್ವಹಣಾ ಸಾಮರ್ಥ್ಯವನ್ನು ಮತ್ತಷ್ಟು ಪಟ್ಟು ಹೆಚ್ಚಿಸಬೇಕಾಗಿದೆ. ಈ ಆಡಳಿತ ವರ್ಗಕ್ಕೆ ಆಧುನಿಕ ಮಾಹಿತಿ ತಂತ್ರಜ್ಞಾನದ ಉಪಯೋಗ ದೊರೆಯಬೇಕಾಗಿದೆ. ಇಂತಹ ಆಡಳಿತ ವಿನ್ಯಾಸದಿಂದ ನ್ಯಾಯಾಧೀಶರು ನ್ಯಾಯ ಒದಗಿಸುವ, ತೀರ್ಪು ನೀಡುವ ಮೂಲ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು. ಹೀಗೆ ಹಲವು ಆಯಾಮಗಳ ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ನ್ಯಾಯಾಂಗ, ಸರ್ಕಾರ ಮತ್ತು ಸಮಾಜ ಒಗ್ಗೂಡಿ ಕಂಕಣಬದ್ಧವಾಗಿ ಶ್ರಮಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT