ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರವಾಗಿ ಪರಿಗಣಿಸಿದ ಬಿಎಐ

ಬ್ಯಾಡ್ಮಿಂಟನ್: ಸೈನಾ ಪಂದ್ಯದಿಂದ ಹಿಂದೆ ಸರಿದ ಘಟನೆ
Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಸೈನಾ ನೆಹ್ವಾಲ್ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದ ಘಟನೆಯನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಗಂಭೀರವಾಗಿ ಪರಿಗಣಿಸಿದೆ. ಸೈನಾ ವಿರುದ್ಧ ಬಿಎಐ ಯಾವುದೇ ಕ್ರಮಕ್ಕೆ ಮುಂದಾಗದಿದ್ದರೂ, ಭವಿಷ್ಯದಲ್ಲಿ ಇಂತಹ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ಧರಿಸಿದೆ.

ಒಲಿಂಪಿಕ್ ಪದಕ ವಿಜೇತೆ ಸೈನಾ ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಇಂಡಿಯಾ ಗ್ರ್ಯಾನ್ ಪ್ರಿ ಟೂರ್ನಿಯ ಮೊದಲ ಸುತ್ತಿನ ಪಂದ್ಯದ ವೇಳೆ ಮಂಡಿ ನೋವಿನ ಕಾರಣ ನೀಡಿ `ನಿವೃತ್ತಿ'ಯಾಗಿದ್ದರು. ಗೆಲುವಿಗೆ ಕೇವಲ ಒಂದು ಪಾಯಿಂಟ್ ಇದ್ದಾಗ ಅವರು ಈ ಹೆಜ್ಜೆಯಿಟ್ಟಿದ್ದರು. ಆದರೆ ಸೈನಾ ಉದ್ದೇಶಪೂರ್ವಕವಾಗಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿತ್ತು. ಅವರಿಗೆ ಈ ಟೂರ್ನಿಯಲ್ಲಿ ಆಡುವ ಆಸಕ್ತಿ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
 
ಸ್ಪರ್ಧಿಗಳು ಈ ರೀತಿ ಉದ್ದೇಶಪೂರ್ವಕವಾಗಿ ಪಂದ್ಯದಿಂದ ಹಿಂದೆ ಸರಿಯುವುದನ್ನು ತಡೆಯಲು ಬಿಎಐ ಕಠಿಣ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಮಾತ್ರವಲ್ಲ, ಸೈನಾ ಘಟನೆಯ ಬಗ್ಗೆ ಚರ್ಚೆ ನಡೆಸಲು ಡಿಸೆಂಬರ್ 23 ರಂದು ಸಭೆ ನಡೆಸಲು ಸಂಸ್ಥೆ ನಿರ್ಧರಿಸಿದೆ. 
 
`ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಕೆಲವೊಂದು ನಿಯಮಗಳ ಅಗತ್ಯವಿದೆ. ಬಿಎಐ ಹಾಗೂ ಆಟಗಾರರ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯ. ಸಂಸ್ಥೆಯ ಅಧ್ಯಕ್ಷರು ಡಿಸೆಂಬರ್ 22 ರಂದು ಇಲ್ಲಿಗೆ ಆಗಮಿಸುವರು. ಅವರೊಂದಿಗೆ ಚರ್ಚೆ ನಡೆಸುವೆವು' ಎಂದು ಬಿಎಐ ಅಧಿಕಾರಿಯೊಬ್ಬರು ನುಡಿದಿದ್ದಾರೆ. 
 
ಸೈನಾ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಬಿಎಐ ಉಪಾಧ್ಯಕ್ಷ ಟಿ.ಪಿ.ಎಸ್. ಪುರಿ, `ಸೈನಾ ಕೆಲ ಸಮಯಗಳಿಂದ ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾತ್ರವಲ್ಲ `ಸೂಪರ್ ಸರಣಿ ಫೈನಲ್ಸ್' ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದರು. ಆದರೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ನಿಯಮದಂತೆ ಅವರು ಅಲ್ಲಿ ಆಡಲೇಬೇಕಾಗಿತ್ತು' ಎಂದರು. 
 
ಸೈನಾ ಮೊದಲೇ ಟಿಕೆಟ್ ಕಾಯ್ದಿರಿಸಿದ್ದು, ಅವರಿಗೆ ಇಲ್ಲಿ ಎರಡನೇ ಸುತ್ತಿನಲ್ಲಿ ಆಡುವ ಇಚ್ಛೆ ಇರಲಿಲ್ಲ ಎಂಬ ಬಗ್ಗೆ ಕೇಳಿದಾಗ ಪುರಿ, `ಅಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ' ಎಂದು ಉತ್ತರಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT