ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ ಜೋಳದ ಬೆಲೆ: ಸಾಮಾನ್ಯ ತತ್ತರ

Last Updated 17 ಫೆಬ್ರುವರಿ 2012, 8:30 IST
ಅಕ್ಷರ ಗಾತ್ರ

ರೋಣ:  ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.  ಕಳೆದ ವರ್ಷದಿಂದ ಈ ಭಾಗದ ಜನರ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ಜೋಳ ಬೆಲೆ ಕೆ.ಜಿ.ಒಂದಕ್ಕೆ ರೂ. 25 ರಿಂದ 40ರೂ ಆಗಿದೆ. ಇದರಿಂದಾಗಿ ಬಡ ಕೂಲಿ ಕಾರ್ಮಿಕರಿಗೆ ಸಿಗುವ ಅಲ್ಪ ಸ್ವಲ್ಪ ಕೂಲಿಯಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ.
 
ಕಳೆದ ವರ್ಷದ ಧಾರಣೆ 

ಕಳೆದ ವರ್ಷ ಜೋಳದ ಬೆಲೆ ಕ್ವಿಂಟಲ್ ರೂ 2000 ರಿಂದ 2500 ವರೆಗಿತ್ತು. ಈಗ ಅದರ ಬೆಲೆಯು 3ಸಾವಿರದಿಂದ 4 ಸಾವಿರಕ್ಕಿಂತಲೂ ಹೆಚ್ಚಿಗೆ ಮಾರಾಟ ವಾಗುತ್ತಿದೆ. ಜೋಳದ ಬೆಲೆಯು  ದಿನಸಿ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಈಗ 30ರಿಂದ 40 ರೂಗಳಿಗೆ ಹೆಚ್ಚಿದೆ.

ಈ ವರ್ಷ ಪೂರ್ತಿಯಾಗಿ ಧಾರಣೆ ಕಡಿಮೆಯಾಗುವ ಸಾಧ್ಯತೆಯಿಲ್ಲ. ಈ ವರ್ಷ ಸರಿಯಾಗಿ ಮಳೆಯಾಗದೇ ಇರುವುದರಿಂದ ಹಿಂಗಾರು ಹಂಗಾಮಿನ ಬಿಳಿ ಜೋಳದ ಬೆಳೆಯು ಕೈಗೆ ಏಟುಕುವ ಸಾಧ್ಯತೆ  ಕಡಿಮೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆವಕ ಕಡಿಮೆ
ಜೋಳದ ಮಾರಾಟದಲ್ಲಿ ತಾಲ್ಲೂಕಿನ ಪ್ರಮುಖ ಮಾರು ಕಟ್ಟೆಯಾದ ಹೊಳೆ ಆಲೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಉತ್ತರ  ಕರ್ನಾಟಕದಲ್ಲಿ ಒಳ್ಳೆಯ ಹೆಸರು ಇದೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಗೆ ಜೋಳದ ಆವಕವು ಕಡಿಮೆಯಾಗಿದೆ.

ಇದರಿಂದಾಗಿ ದಿನಸಿ ಅಂಗಡಿಗಳಲ್ಲಿ ಜೋಳದ ಬೆಲೆಯು ಒಮ್ಮಲೇ ಹೆಚ್ಚಿಗೆ ಆಗಿದೆ ಎನ್ನುವ ಅಭಿಪ್ರಾಯ ವ್ಯಾಪಾರಸ್ಥರದ್ದು.

ಬೆಲೆ ಹೆಚ್ಚಳ ಸಾಧ್ಯತೆ
ಹಿಂಗಾರು ಮಳೆಯು ಸರಿಯಾಗಿ ಆಗದೇ ಇರುವುದರಿಂದ ಹಿಂಗಾರಿನ ಬೆಳೆಗಳಾದ ಜೋಳ, ಕಡಲೆ, ಗೋಧಿ, ಮುಂತಾದ ಬೆಳೆಗಳು ಸರಿಯಾಗಿ ಆಗಿಲ್ಲ. 

ಹಾಗಾಗಿ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು. ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ಧಾರವಾಡ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಬಿತ್ತಿದ ಬಿಳಿ ಜೋಳವು  ಶಿವರಾತ್ರಿಯ  ನಂತರ ಕಟಾವಾಗಿ ಮಾರುಕಟ್ಟೆಗೆ ಬರಲಿದೆ. ಅಲ್ಲಿಯವರೆಗೆ ಗ್ರಾಹಕರಿಗೆ ಜೋಳದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 
ಊಟದ ಬೆಲೆ ಹೆಚ್ಚಳ

ಜೋಳದ ಬೆಲೆ  ಮತ್ತು ದಿನಸಿ, ಕಾಯಿಪಲ್ಲೆ ಬೆಲೆ ಏರಿಕೆಯಿಂದ ಖಾನಾವಳಿಗಳಲ್ಲಿ ಜೋಳದ ರೊಟ್ಟಿಯ ಊಟದ ಬೆಲೆ ಹೆಚ್ಚಾಗಲಿದೆ. ಅನಿವಾರ್ಯವಾಗಿ ರೊಟ್ಟಿ ಊಟದ ಬೆಲೆಯನ್ನು ಹೆಚ್ಚಿಸಬೇಕಾಗಿದೆ ಎಂದು ರೋಣ ಪಟ್ಟಣದ ಬಸವೇಶ್ವರ ಖಾನಾವಳಿಯ ಮಾಲೀಕರಾದ ಮುಧೋಳ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವ್ಯಾಪಾಸ್ಥರ ಅಭಿಪ್ರಾಯ

ಮಳೆಯಾಗದ ಹಿನ್ನೆಲೆಯಲ್ಲಿ ಹಿಂಗಾರು ಬೆಳೆಯಾದ ಜೋಳ ಮತ್ತೆ ಕೈಕೊಟ್ಟಿರುವುದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಜೋಳದ ಬೆಲೆಯೂ ಹೆಚ್ಚಾಗಿದೆ ಎಂದು ವ್ಯಾಪಾರಸ್ಥ ರೊಬ್ಬರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೊಟ್ಟಿಯಿಲ್ಲದೇ ಹೊಟ್ಟೆ ತುಂಬುವುದಿಲ್ಲ: ರೊಟ್ಟಿ ತಿನ್ನದೇ ಉತ್ತರ ಕರ್ನಾಟಕದ ಜನರ ಹೊಟ್ಟೆ ತುಂಬುವುದಿಲ್ಲ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸರಕಾರ ಬಡ ಜನರಿಗೆ ನ್ಯಾಯ ಬೆಲೆಯ ಅಂಗಡಿಗಳಲ್ಲಿ ಜೋಳವನ್ನು ಕಡಿಮೆ ಬೆಲೆಗೆ  ಮಾರಾಟ ಮಾಡಿ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT