ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಚುಕ್ಕಿ ಜಲಪಾತೋತ್ಸವ: ಅದ್ದೂರಿ ತೆರೆ

Last Updated 16 ಸೆಪ್ಟೆಂಬರ್ 2013, 5:43 IST
ಅಕ್ಷರ ಗಾತ್ರ

ಮಂಡ್ಯ: ಜಲಪಾತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಗಗನಚುಕ್ಕಿ ಜಲಪಾತವನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಮಹದೇವಪ್ರಸಾದ್‌ ಹೇಳಿದರು.

ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ ನಲ್ಲಿ ಭಾನುವಾರ ನಡೆದ ಗಗನಚುಕ್ಕಿ ಜಲಪಾತೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಮೆರಿಕಾದ ನಯಾಗಾರ ಜಲಪಾತದಂತಹ ಜಲಪಾತಗಳೂ ನಮ್ಮಲ್ಲಿಯೂ ಇವೆ. ಆದರೆ, ಅವುಗಳನ್ನು ಸಮರ್ಪಕವಾಗಿ ತೋರಿಸುವ ವ್ಯವಸ್ಥೆ ಮಾಡದಿರುವ ಕಾರಣ ಹಿಂದುಳಿದಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರೇಕ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಈ ಪ್ರದೇಶಕ್ಕೆ ಪ್ರಚಾರ ನೀಡುವ ಕೆಲಸವ ಮಾಡಲಾಗುತ್ತಿದೆ. 347 ಕೋಟಿ ರೂಪಾಯಿಗಳನ್ನು ಪ್ರವಾಸಿ ಸ್ಥಳಗಳ ಅಭಿವೃದ್ಧಿ ಸರ್ಕಾರ ತೆಗೆದಿರಿಸಿದೆ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಮಣೀಯವಾದ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಾವಿದರ ಕಲಾ ಪ್ರದರ್ಶನಕ್ಕೂ ವೇದಿಕೆಯಾಗಿದೆ ಎಂದರು.

ಸಂಗೀತ, ನೃತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ. ಮನರಂಜನೆ ಎಂದರೆ ಚಲನಚಿತ್ರ ಎಂದುಕೊಂಡಿದ್ದೇವೆ. ಉತ್ತಮ ಅಭಿರುಚಿ ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬೇಕು. ಶಾಶ್ವತವಾಗಿ ನಡೆಯುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದರು. ಸಂಸದೆ ರಮ್ಯಾ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಜಲಪಾತೋತ್ಸವ ಅದ್ಧೂರಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಗಗನಚುಕ್ಕಿಯನ್ನು ಮುಂದಿನ ದಿನಗಳಲ್ಲಿ ಮಾದರಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರಾಸುಗಳಿಗೆ ಬಾಯಿ ರೋಗ ಜಾಸ್ತಿಯಾಗಿದೆ. ಜಾನುವಾರುಗಳು ಸಾವನ್ನಪ್ಪುತ್ತಿವೆ. ಕೂಡಲೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಆಗಬೇಕಿದೆ ಎಂದರು.

ಶಾಸಕ ಕೆ.ಸಿ. ನಾರಾಯಣಗೌಡ, ಜಿ.ಪಂ. ಅಧ್ಯಕ್ಷ ಭಾರತಿ ಕೃಷ್ಣಮೂರ್ತಿ, ಜಿ.ಪಂ. ಸದಸ್ಯರಾದ ಆರ್‌.ಎನ್‌್.ವಿಶ್ವಾಸ್‌, ಜಕ್ರಿಯಾಖಾನೆ್, ಶಿವಮ್ಮ, ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಭಂಡಾರಿ, ಕೆಪಿಸಿಸಿ ಸದಸ್ಯ ಶಿವಣ್ಣ, ತಾ.ಪಂ. ಅಧ್ಯಕ್ಷ ಕೆ.ಎಸ್‌. ಪ್ರಕಾಶ್‌, ಉಪಾಧ್ಯಕ್ಷೆ ಚಂದ್ರಮ್ಮ, ಗ್ರಾ.ಪಂ. ಅಧ್ಯಕ್ಷ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

‘ಮಹಾದೇವ ಬಾರಯ್ಯ ದರುಶನವ ತೋರಯ್ಯ....’
ಮಂಡ್ಯ:  ‘ಮಹಾದೇವ ಬಾರಯ್ಯ ದರುಶನವ ತೋರಯ್ಯ....’ ಎಂಬ ಹಾಡು ಅಲೆ, ಅಲೆಯಾಗಿ ಕೇಳಿ ಬಂದಿತು. ಮಳವಳ್ಳಿಯ ಜಾನಪದ ತಂಡವು ಮಹದೇಶ್ವರನ ಕುರಿತು ಹಾಡುಗಳನ್ನು ಹಾಡುತ್ತಿದ್ದರೆ, ಜಿಲ್ಲೆಯ ಗಗನಚುಕ್ಕಿ ಜಲಪಾತೋತ್ಸವದಲ್ಲಿ ನೆರೆದಿದ್ದ ಪ್ರೇಕ್ಷಕರ ಮನದಲ್ಲಿ ಭಕ್ತಿಯ ಭಾವದ ಅಲೆಯೇ ಎದ್ದಿತು.

ಕೃಷ್ಣಾಪುರದ ಮಹದೇವಸ್ವಾಮಿ, ಯರಹಳ್ಳಿ ಪುಟ್ಟಸ್ವಾಮಿ ಮತ್ತಿತರರು, ‘ಚೆಲ್ಲಿದರೂ ಮಲ್ಲಿಗೆಯಾ ಬಾನಸೂರ ಏರಿ ಮ್ಯಾಲೆ....’ ಹಾಡು ಸೇರಿದ್ದ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸಿತ್ತು.
ತರವಲ್ಲ ತಗಿ ನಿನ್ನ ತಂಬೂರೀಶ್ವರ....,, ಎಲ್ಲೋ ಜೋಗಪ್ಪ ನಿನ್ನ ಅರಮನೆ...., ಚಂದಿರನಿರದ ಬಾನಿನಲ್ಲಿ.... ಹಾಡು ಹಾಡುವ ಮೂಲಕ ಗಾಯದನ ಸುರಿಮಳೆಯನ್ನೇ ಸುರಿಸಿದರು.

ದೇವಿಪುರದ ಯುವಕರು ನೀಡಿದ ಮಾರ್ಷಲ್‌ ಕಲೆ ಪ್ರದರ್ಶನ ಗಮನ ಸೆಳೆಯಿತು. ನಂದಿಕೇಶ್ವರ ಡ್ಯಾನ್ಸ್‌ ಸ್ಕೂಲ್‌ ಮಕ್ಕಳೂ ನೃತ್ಯ ಪ್ರದರ್ಶನ ನೀಡಿದರು.

ರಮೇಶ್‌ ತಂಡದ ಪಟ ಕುಣಿತವು ರೋಮಾಂಚನ ಉಂಟು ಮಾಡಿತು. ಏಣಿಯ ಮೇಲೆ ಹತ್ತಿ ಕುಣಿಯುವ ಮೂಲಕ ವಿವಿಧ ಸಾಹಸ ಪ್ರದರ್ಶನವನ್ನೂ ಮಾಡಿದರು.

ಮುಗಿಬಿದ್ದ ಜನ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ ಮೈದುಂಬಿಕೊಂಡಿರುವ ಪರಿಣಾಮ ಗಗನಚುಕ್ಕಿ ಜಲಪಾತದ ಸೊಬಗು ಹೆಚ್ಚಾಗಿತ್ತು. ಉತ್ಸವಕ್ಕೆ ಆಗಮಿಸಿದ್ದ ಜನರು ಮುಗಿಬಿದ್ದು, ಆ ಸೊಬಗನ್ನು ಕಣ್ತುಂಬಿಕೊಂಡರು.

ಜಲಪಾತದ ವೀಕ್ಷಣೆಗಾಗಿ ನಿಮಿರ್ಸಿರುವ ಗ್ಯಾಲರಿ ಹೋಗಲು ಪೈಪೋಟಿ ಏರ್ಪಟ್ಟಿತ್ತು. ಸ್ವಲ್ಪ ಜಾಗ ಸಿಗುತ್ತಿದ್ದಂತೆಯೇ ಜನರು ತೂರಿಕೊಳ್ಳುತ್ತಿದ್ದರು. ಮೇಲ್ಗಡೆ ನಿಂತು ನೋಡುತ್ತಿರುವವರ ಸಂಖ್ಯೆಯೂ ಕಡಿಮೆ ಏನಿರಲಿಲ್ಲ.

ಫೋಟೊ ಕ್ಲಿಕ್‌: ಜಲಪಾತದ ವೈಭವ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು, ಕ್ಯಾಮೆರಾ, ಮೊಬೈಲ್‌ಗಳಲ್ಲಿ ಜಲಪಾತವನ್ನು ಸೆರೆ ಹಿಡಿಯುತ್ತಿದ್ದರು. ತಾವೂ ಸೇರಿದಂತೆ ಜಲಪಾತವೂ ಬರುವಂತೆ ಫೋಟೊ ತೆಗೆಯಿಸಿಕೊಳ್ಳುತ್ತಿದ್ದರು.

ಊಟ ಬಡಿಸಿದ ಸಂಸದೆ, ಶಾಸಕ: ಜಲಪಾತೋತ್ಸವಕ್ಕೆ ಆಗಮಿಸಿದ ಪ್ರವಾಸಿಗರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲಿಗೆ ತೆರಳಿದ ಸಂಸದೆ ರಮ್ಯಾ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಊಟದ ವ್ಯವಸ್ಥೆಯ ಬಗೆಗೆ ವಿಚಾರಿಸಿದರಲ್ಲದೇ, ಕೆಲಕಾಲ ಊಟವನ್ನೂ ಬಡಿಸಿದರು.

ಪ್ರವಾಸಿಗರಿಗೆ ರಸದೌತಣ
ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮದ್ರಂ ನಲ್ಲಿ ನಡೆದ ಎರಡು ದಿನಗಳ ಕಾಲ ನಡೆದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಭಾನುವಾರ ಅದ್ಧೂರಿ ತೆರೆ ಬಿದ್ದಿತು.

ಬೃಹತ್‌ ವೇದಿಕೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಕಲಾವಿದರು, ತಮ್ಮ ಕಲಾ ಪ್ರದರ್ಶನ ನೀಡುವ ಮೂಲಕ ಜನರಿಗೆ ಕಲಾರಸದೌತಣವನ್ನೆ ಬಡಿಸಿದರು.

ಪ್ರತಿ ಶನಿವಾರ ಹಾಗೂ ಭಾನುವಾರ ಗಗನಚುಕ್ಕಿ ಜಲಪಾತೋತ್ಸವ ವೀಕ್ಷಣೆಗೆ ಆಗಮಿಸುತ್ತಿದ್ದ ಪ್ರೇಕ್ಷಕರು, ಜಲಪಾತದ ವೈಭವದೊಂದಿಗೆ ಸಾಂಸ್ಕೃತಿಕ ಲೋಕದ ಸವಿಯನ್ನೂ ಸವಿದರು.

ಜಲಪಾತದಿಂದ ಸ್ವಲ್ಪ ದೂರದಲ್ಲಿರುವ ಸೇತುವೆಯ ಬಳಿಯೇ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕರೆ ತರುವ ಹಾಗೂ ಕಳುಹಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿತ್ತು.

ಮಳವಳ್ಳಿ ಹಾಗೂ ತಾಲ್ಲೂಕಿನ ಹಳ್ಳಿಗಳಿಂದ ಜಲಪಾತೋತ್ಸವ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಸುವ್ಯವಸ್ಥಿತವಾಗಿ ಮಾಡಲಾಗಿತ್ತು. ಊಟದ ಸಮಯದಲ್ಲಿ ನೂಕುನುಗ್ಗಲು ಉಂಟಾಗಬಾರದು ಎಂದು 25ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವುದನ್ನು ಗಮನದಲ್ಲಿಟ್ಟುಕೊಂಡ ಶಾಸಕ ನರೇಂದ್ರಸ್ವಾಮಿ ಅವರು ಊಟವನ್ನು ಅಡಿಕೆ ತಟ್ಟೆ ಹಾಗೂ ಬಾಳೆ ಎಲೆಯಲ್ಲಿ ಬಡಿಸುವ ವ್ಯವಸ್ಥೆ ಮಾಡಿದ್ದರು. ಆ ಮೂಲಕ ಪರಿಸರ ಸ್ವಚ್ಛವಾಗಿಡಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದರು.

ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಇದನ್ನು ಅನುಸರಿಸಿದರು. ಆದರೆ, ಅಲ್ಲಲ್ಲಿ ಕೆಲವೆಡೆ ಪ್ಲಾಸ್ಟಿಕ್‌ ಹಾಳೆಗಳು ಕಾಣಸಿಕ್ಕವು.

ಮಳೆ ಬಂದರೆ ವೀಕ್ಷಕರಿಗೆ ತೊಂದರೆಯಾಗಬಾರದೆಂದು ವಾಟರ್‌್ ಪ್ರೂಫ್‌್ ವೇದಿಕೆ ಹಾಗೂ ಸಭಾಂಗಣ ನಿಮಿರ್ಸಲಾಗಿತ್ತು. ಕಳೆದೊಂದು ವಾರದಿಂದ ಸುರಿದಿದ್ದ ಮಳೆರಾಯನು, ಎರಡು ದಿನಗಳ ಕಾಲವೂ ಬಿಡುವು ಮೂಲಕ ಜಲಪಾತೋತ್ಸವದ ಯಶಸ್ಸಿಗೆ ಸಹಕರಿಸಿದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT