ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಪಡೆಯ ತಾಲೀಮು ಆರಂಭ

Last Updated 2 ಸೆಪ್ಟೆಂಬರ್ 2013, 8:26 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಗೆ ಆಗಮಿಸಿದ ಆನೆಗಳಿಗೆ ಭಾನುವಾರದಿಂದ ತಾಲೀಮು ಆರಂಭವಾಯಿತು. ಚಿನ್ನದ ಅಂಬಾರಿ ಹೊರುವ `ಅರ್ಜುನ' ಗಜಪಡೆಯ ಸಾರಥ್ಯ ವಹಿಸುತ್ತಿದ್ದಾನೆ.

ಭಾನುವಾರ ಬೆಳಿಗ್ಗೆ 8 ಗಂಟೆಗೆ ಅರಮನೆಯ ಉತ್ತರ ದ್ವಾರದಿಂದ ಹೊರ ಬಂದ ಆನೆಗಳು ಒಂದರ ಹಿಂದೊಂದು ರಸ್ತೆಯುದ್ದಕ್ಕೂ ಸಾಗಿದವು. ಚಾಮರಾಜ ಒಡೆಯರ್ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಆರ್‌ಎಂಸಿ ವೃತ್ತವನ್ನು ತಲುಪಿದವು.

`ಅರ್ಜುನ'ನನ್ನು ಸರಳಾ, ಅಭಿಮನ್ಯು, ಗಜೇಂದ್ರ, ವರಲಕ್ಷ್ಮೀ ಹಾಗೂ ಬಲರಾಮ ಹಿಂಬಾಲಿಸಿದವು. ಸಂಜೆ 6ರಿಂದ ಮತ್ತೆ ಇದೇ ರೀತಿಯ ತಾಲೀಮು ಆಯುರ್ವೇದ ವೃತ್ತದವರೆಗೆ ನಡೆಯಿತು. `ಜಂಬೂಸವಾರಿಯ ಮಾರ್ಗವನ್ನು ಪರಿಚಯಿಸುವ ಉದ್ದೇಶದಿಂದ ತಾಲೀಮು ಮಾಡಲಾಯಿತು. ಒಂದು ವಾರ ಕಳೆದ ಬಳಿಕ ಮರದ ಅಂಬಾರಿಯನ್ನು ಹೊರಿಸಲಾಗುವುದು' ಎಂದು ಮಾವುತರು `ಪ್ರಜಾವಾಣಿ'ಗೆ ತಿಳಿಸಿದರು.

ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುವ ಗಜಪಡೆಗೆ ತಾಲೀಮು ಮಾಡಿಸುವುದು ವಾಡಿಕೆ. 750 ಕೆ.ಜಿ ತೂಕದ ಅಂಬಾರಿಯನ್ನು ಹೊರಲು ಈ ಮೂಲಕ ಗಜಪಡೆಯನ್ನು ತಯಾರು ಮಾಡಲಾಗುತ್ತದೆ. ಗಜಪಯಣದಲ್ಲಿ ಬಂದ ಆರು ಆನೆಗಳು ಎರಡು ದಿನಗಳ ಹಿಂದೆಯಷ್ಟೇ ಅಂಬಾವಿಲಾಸ ಅರಮನೆ ಪ್ರವೇಶಿಸಿದ್ದವು. ಆನೆಗಳ ತೂಕ ಪರೀಕ್ಷೆ ಕೂಡ ಶನಿವಾರ ನಡೆದಿತ್ತು.

ಪೌಷ್ಟಿಕ ಆಹಾರ: ಜಂಬೂಸವಾರಿಗೆ ಸಿದ್ಧಗೊಳಿಸಲು ಗಜಪಡೆಗೆ ಪೌಷ್ಟಿಕ ಆಹಾರವನ್ನು ಶನಿವಾರದಿಂದ ನೀಡಲಾಗುತ್ತಿದೆ. ಉದ್ದು, ಹೆಸರು ಕಾಳು, ಗೋಧಿ, ಕುಸುಬಲಕ್ಕಿ, ತರಕಾರಿಯನ್ನು ಬೇಯಿಸಿ ಬೆಣ್ಣೆ ಮಿಶ್ರಣ ಮಾಡಿ ತಾಲೀಮಿಗೆ ತೆರಳುವುದಕ್ಕೂ ಮುನ್ನ ಆನೆಗಳಿಗೆ ನೀಡಲಾಗುತ್ತದೆ. ತಾಲೀಮು ಮುಗಿದ ಬಳಿಕ ಒಣ ಮತ್ತು ಹಸಿ ಹುಲ್ಲು, ಬತ್ತ, ಕಾಯಿ, ಬೆಲ್ಲವನ್ನು `ಕುಸುರೆ' ಕಟ್ಟಿ ತಿನ್ನಿಸಲಾಗುತ್ತದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಪೌಷ್ಟಿಕ ಆಹಾರವನ್ನು ಗಜಪಡೆಗೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT