ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಲಿಂಗೇಶ್ವರ ಜಾತ್ರೆಗೆ ಅದ್ದೂರಿ ತೆರೆ

Last Updated 19 ಏಪ್ರಿಲ್ 2013, 9:20 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಘೊಡಗೇರಿ ಗ್ರಾಮದ ಗುರು ಗಜಲಿಂಗೇಶ್ವರ ಜಾತ್ರೆಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಜಾತ್ರೆಯ ಅಂಗವಾಗಿ ಭಾನುವಾರದಿಂದ ಮೂರು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು.

ಭಾನುವಾರ ಹನ್ನೊಂದು ಸುಮಂಗಲೆಯರು ಘಟಪ್ರಭಾ ನದಿಗೆ ಪೂಜೆ ಸಲ್ಲಿಸಿ ಪಂಚಕುಂಭಗಳಿಂದ ನೀರು ತಂದು ಕೊಪ್ಪರಗಿ ಪೂಜೆ ಮಾಡಿದರು. ಸೋಮವಾರ ಮುಂಜಾನೆ ದೇವರ ಪೂಜೆ ಮತ್ತು ರುದ್ರಾಭಿಷೇಕದ ನಂತರ ಘೋಡಗೇರಿ ಹಾಗೂ ನೊಗಿನಹಾಳ ಗ್ರಾಮಗಳ ಪಲ್ಲಕ್ಕಿಗಳನ್ನು ಬರಮಾಡಿಕೊಂಡರು.

ಮಂಗಳವಾರ ಮಹಿಳೆಯರ ಆರತಿ ಮೇಳದೊಂದಿಗೆ ಅಂಬಲಿ ಕೊಡ ಬರಮಾಡಿಕೊಳ್ಳಲಾಯಿತು. ನಂತರ ಪಲ್ಲಕ್ಕಿ ಉತ್ಸವ, ಭಂಡಾರ ಹಾರಿಸುವ ಕಾರ್ಯಕ್ರಮ ಜರುಗಿತು.

ಕಾಲಜ್ಞಾನ: ದೇವಋಷಿ ಅಲಗ ಹಾಯುವ ಹಾಗೂ ಸಿದ್ದಾಟಿಕೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಲ್ಲದೆ, ಮುಳ್ಳಾವಿಗೆ ಮೇಲೆ ನಿಂತು ಭವಿಷ್ಯದ ಜ್ಞಾನ ನುಡಿಗಳನ್ನು ಹೇಳಿದರು.

ಕುದುರೆ ಗಾಡಿ ಸ್ಪರ್ಧೆ: ಜಾತ್ರೆಯ ಕೊನೆಯ ದಿನ ಒಂದು ಎತ್ತು ಒಂದು ಕುದುರೆ ಗಾಡಿ ಸ್ಪರ್ಧೆ ನಡೆಯಿತು. ಬಸಪ್ಪ ಮೇಲ್ಮಟಿ ಪ್ರಥಮ, ಈರಪ್ಪ ಈಟಿ ದ್ವಿತೀಯ ಹಾಗೂ ಬಾಬು ಮದಿಹಳ್ಳಿ ತೃತೀಯ ಬಹುಮಾನ ಪಡೆದರು.  ಓಡುವ ಹಾಗೂ ಸೈಕಲ್ ಸ್ಪರ್ಧೆಗಳೂ ನಡೆದವು.

ನಂತರ ಕುಸ್ತಿ ಪಂದ್ಯಆಯೋಜಿಸಲಾಗಿತ್ತು. ಮೆಳವಂಕಿ, ಪರಕನಟ್ಟಿ ಹಾಗೂ ವಂಟಮೂರಿ ಗ್ರಾಮಗಳ ಡೊಳ್ಳಿನ ಪದಗಳ ಕಾರ್ಯಕ್ರಮ ಗಮನ ಸೆಳೆದವು. ಕೊನೆಯಲ್ಲಿ `ಮಣ್ಣು ಪಾಲಾದ ಮನೆತನ' ಬೈಲಾಟದೊಂದಿಗೆ ಜಾತ್ರೆಗೆ ತೆರೆ ಬಿತ್ತು.

ಗ್ರಾಮದ ಪ್ರಮುಖರಾದ ಶ್ರೀಶೈಲಪ್ಪ ಮಗದುಮ್ಮ, ಶ್ರೀಕಾಂತ ಭೂಶಿ, ಸಿದ್ರಾಮ ಮುಗಳಿ, ಜಿ.ಎಂ.ಕಡೇಲಿ, ಪುಂಡಲೀಕ ಪೂಜೇರಿ, ಶ್ರೀಕಾಂತ ಪೂಜೇರಿ, ಜಿಯಾ ಉಲ್ಲಾ ವಂಟಮೂರಿ, ಎಸ್.ಎನ್.ಪೂಜೇರಿ, ಎಸ್.ವೈ.ಪೂಜೇರಿ ಸೇರಿದಂತೆ ಮತ್ತಿತರರು ಜಾತ್ರೆ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT