ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ ಸಾರಿಗೆ ಘಟಕಕ್ಕೆ ಬೇಕು ಕಾಯಕಲ್ಪ

Last Updated 1 ನವೆಂಬರ್ 2011, 10:10 IST
ಅಕ್ಷರ ಗಾತ್ರ

ಗಜೇಂದ್ರಗಡ: ಇಲ್ಲೊಂದು ಸಾರಿಗೆ ಘಟಕ ಇದೆ. ತಾಂತ್ರಿಕ, ಚಾಲನ, ಆಡಳಿತ ಸಿಬ್ಬಂದಿ ಸಾಕಷ್ಟು ಕೊರತೆಯನ್ನು ಎದುರಿಸುತ್ತಿದೆ. ಈ ಘಟಕದ ಬಸ್‌ಗಳ ಓಡಾಡುವ ರಸ್ತೆಗಳ ಸ್ಥಿತಿಯಂತೂ ದೇವರಿಗೆ  ಪ್ರೀತಿ.
ಹೀಗೆ ಇಲ್ಲಗಳ ಸರಮಾಲೆಗಳನ್ನು ಹೊತ್ತುಕೊಂಡು ಕಿತ್ತೋದ ರಸ್ತೆಗಳಲ್ಲಿ ಓಡಾಡುವ ಡಕೋಟಾ ಬಸ್‌ಗಳನ್ನು ಹೊಂದಿರುವ ಇಲ್ಲಿನ ಸಾರಿಗೆ ಘಟಕ ಆದಾಯದಲ್ಲಿ ಮಾತ್ರ ಜಿಲ್ಲೆಗೆ ನಂಬರ್ ಒನ್ ಸ್ಥಾನದಲ್ಲಿರುವುದು ಆಶ್ಚರ್ಯ ವಾದರೂ ಸತ್ಯ.

ವಾಯವ್ಯ ಕರ್ನಾಟಕದ ಸಾರಿಗೆ ಸಂಸ್ಥೆಯ 10 ಲಾಭದಾಯಕ ಘಟಕ ಗಳಲ್ಲಿ ಒಂದಾಗಿರುವ ಗಜೇಂದ್ರಗಡ ಸಾರಿಗೆ ಘಟಕವು 47 ಷೆಡ್ಯೂಲ್‌ಗಳನ್ನು ಹೊಂದಿದ್ದು, 50 ಬಸ್‌ಗಳಿವೆ. ಇವುಗಳಲ್ಲಿ ಡಕೋಟಾ ಬಸ್‌ಗಳ ಸಂಖ್ಯೆಯೇ ಹೆಚ್ಚು.

ಡಕೋಟ ಬಸ್‌ಗಳು ಮಾರ್ಗದಲ್ಲಿ ಹೋಗಿ ಮರಳಿ ಘಟಕ ತಲುಪುವ ಗ್ಯಾರಂಟಿ ಮಾತ್ರ ಕೇಳಬೇಡಿ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್‌ಗಳನ್ನು ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ತಳ್ಳುವ ದೃಶ್ಯ ಸಾಮಾನ್ಯವಾಗಿರುತ್ತದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಗಜೇಂದ್ರಗಡ ಜನದಟ್ಟಣೆ ಇರುವ ಪಟ್ಟಣವಾಗಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾರಿಗೆ ಘಟಕವು ಲಾಭದಲ್ಲಿ ಸಾಗಿದೆ.

2010ರ ಮೇ ತಿಂಗಳ ದಾಖಲೆಯ ಪ್ರಕಾರ 1.3 ಕೋಟಿ ಆದಾಯ ತಂದಿದೆ. ನಿರೀಕ್ಷೆಗೂ ಮೀರಿ ಆದಾಯ ತರುತ್ತಿರುವ ಘಟಕದ ಬೆಳವಣಿಗೆಯಲ್ಲಿ ಇಲ್ಲಿನ ಸಿಬ್ಬಂದಿ ಶ್ರಮ ಸಾಕಷ್ಟಿದೆ. ಆದರೆ, ಅವರ ಪರಿಶ್ರಮಕ್ಕೆ ತಕ್ಕಂತೆ ಸೌಲಭ್ಯಗಳಿಲ್ಲದಿರುವುದು ನೋವಿನ ಸಂಗತಿಯಾಗಿದೆ.

ಗಜೇಂದ್ರಗಡ ಸಾರಿಗೆ ಘಟಕದ ಬಹುತೇಕ ಬಸ್‌ಗಳು ಮುಖ್ಯವಾಗಿ ಗದಗ, ಇಳಕಲ್ ಮತ್ತು ರೋಣ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ, ಈ ಮೂರು ಮಾರ್ಗದ ರಸ್ತೆಗಳಲ್ಲಿ ರೋಣ ರಸ್ತೆಯನ್ನು ಹೊರತುಪಡಿಸಿದರೆ ಉಳಿದೆರಡು ರಸ್ತೆಗಳಲ್ಲಿ ಪ್ರಯಾಣ ಮಾಡುವುದು ದುಸ್ತರವಾಗಿದೆ.

ಗದಗ ರಸ್ತೆಯಲ್ಲಿ ಗಜೇಂದ್ರಗಡದಿಂದ ನರೇಗಲ್‌ವರೆಗೆ ಅಂದರೆ 25 ಕಿ.ಮೀ. ಹಾಗೂ ಗಜೇಂದ್ರಗಡದಿಂದ ಇಳಕಲ್ 35 ಕಿ.ಮೀ. ವರೆಗಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಉದ್ದಗಲಕ್ಕೂ ಮೊಣಕಾಲುದ್ದದ ತಗ್ಗು ದಿಣ್ಣೆಗಳೇ ರಾರಾಜಿಸುತ್ತಿವೆ. ಹೀಗಾಗಿ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ನಿರ್ವಾಹಕರು ಮತ್ತು ಚಾಲಕರು ಸುತಾರಾಮ್ ಇಷ್ಟಪಡುವುದಿಲ್ಲ.

ಆದರೆ ಮೇಲಾಧಿಕಾರಿಗಳ ಒತ್ತಾ ಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಸಂಚರಿಸುವ ಅನಿವಾರ್ಯತೆ ಸಿಬ್ಬಂದಿ ಯದ್ದಾಗಿದೆ. `ಒಂದು ವಾರ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಿ ವಾರದ ರಜೆ ದಿವಸ ನೇರವಾಗಿ ಆಸ್ಪತ್ರೆಗೆ ತೆರಳುತ್ತೇವೆ. ಮೈ, ಕೈ. ನೋವಿಗೆ ಚುಚ್ಚು ಮದ್ದು, ಔಷಧಿ ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಸ್ವಯಂಘೋಷಿತ ರಜೆ ಪಡೆದುಕೊಳ್ಳ ಬೇಕಾಗುತ್ತದೆ~ ಎಂದು ಇಲ್ಲಿನ ರಸ್ತೆಗಳ ದುಃಸ್ಥಿತಿ ಕುರಿತು ಚಾಲಕರು ಮತ್ತು ನಿರ್ವಾಹಕರು ತಮ್ಮದೇ ದಾಟಿಯಲ್ಲಿ ತಿಳಿಸುತ್ತಾರೆ.

ಗಜೇಂದ್ರಗಡವನ್ನು ಕೇಂದ್ರವನ್ನಾಗಿ ಟ್ಟುಕೊಂಡು ಗದುಗಿಗೆ ದಿನಕ್ಕೆ 80 ಸಲ ಸಾರಿಗೆ ಬಸ್‌ಗಳು ಓಡಾಡುತ್ತವೆ. ಅದರಲ್ಲಿ ಸ್ಥಳೀಯ ಘಟಕದಿಂದ 80 ಸಾರಿಗೆ ಬಸ್‌ಗಳ ಓಡಾಟವಿದೆ. ಈ ಮಾರ್ಗವೊಂದರಿಂದಲೇ ನಿತ್ಯ ಸರಾಸರಿ 3 ಲಕ್ಷ ರೂಪಾಯಿ ಆದಾಯವಿದೆ.

ಸಾರಿಗೆ ಘಟಕಕ್ಕೆ ಸೌಕರ್ಯಗಳ ಅಗತ್ಯವಿದೆ. ನಿಲ್ದಾಣ ಮತ್ತು ಘಟಕ ವನ್ನು ಮೇಲ್ದರ್ಜೆಗೇರಿಸುವುದು. ಗದಗ, ಇಳಕಲ್ ರಸ್ತೆ ದುರಸ್ತಿ, ನೂತನ ಬಸ್‌ಗಳ ಪೂರೈಕೆ, ಅಗತ್ಯವಿರುವ ಸಿಬ್ಬಂದಿ ನೇಮಕವಾದಲ್ಲಿ ಘಟಕದ ಆದಾಯವು ಮತ್ತಷ್ಟು ಹೆಚ್ಚಾಗುತ್ತದೆ ಇದರಿಂದ ಘಟಕವು ಲಾಭದಲ್ಲಿ ನಡೆಯುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರಿಕರು. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT