ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗಟ್ಟಿ ಮನೋಬಲದವರಿಗೇ ಜಯ'

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೈಸೂರು: “ಗಂಗೋತ್ರಿ ಗ್ಲೇಡ್ಸ್‌ನ ಅಂಗಳದಲ್ಲಿ ಗಟ್ಟಿಯಾದ ಮನೋಬಲ ಇರುವ ತಂಡಕ್ಕೆ ಮಾತ್ರ ಜಯ ಒಲಿಯುತ್ತದೆ”
-ಕರ್ನಾಟಕದ ತರಬೇತುದಾರ ಜೆ. ಅರುಣಕುಮಾರ್ ಅವರ ಸ್ಪಷ್ಟ ನುಡಿಯಿದು. ಶುಕ್ರವಾರ ತಂಡದ ಅಭ್ಯಾಸದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, `ಗಂಗೋತ್ರಿ ಗ್ಲೇಡ್ಸ್‌ನ ಅಂಗಳವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮನಾದ ಅವಕಾಶ          ನೀಡುವಂತೆ ಕಾಣುತ್ತಿದೆ.

ಸಹನೆ, ಆತ್ಮವಿಶ್ವಾಸ ಮತ್ತು ಚತುರತೆಯಿಂದ ಆಡುವವರಿಗೆ ಮಾತ್ರ ಇಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹೊರಾಂಗಣ ಕೂಡ ಚೆನ್ನಾಗಿದೆ. ಎಲ್ಲ ಸೌಲಭ್ಯಗಳೂ ಉತ್ತಮವಾಗಿವೆ' ಎಂದು ಹೇಳಿದರು.`ಆರ್.ವಿನಯಕುಮಾರ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ತಂಡದ ಹುಡುಗರ ಹುಮ್ಮಸ್ಸು ಹೆಚ್ಚಿಸಿದೆ.

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬ ಸಂದೇಶ ಅವರಿಗೆ ಸಿಕ್ಕಿದೆ. ದೆಹಲಿ ವಿರುದ್ಧದ ಪಂದ್ಯದ ಗೆಲುವಿನಿಂದಲೂ ಆತ್ಮವಿಶ್ವಾಸ ಹೆಚ್ಚಿದ್ದು, ರಾಬಿನ್, ಮನೀಶ್, ಗೌತಮ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕ್ಷೇತ್ರರಕ್ಷಣೆ ಕೂಡ ಬಹಳಷ್ಟು ಸುಧಾರಣೆಯಾಗಿದೆ. ಕಳೆದ ಪಂದ್ಯದಲ್ಲಿ ಫೀಲ್ಡರ್‌ಗಳು ಪಡೆದ ಕ್ಯಾಚ್‌ಗಳೇ ಗೆಲುವಿಗೆ ಕಾರಣವಾಗಿದ್ದವು. ಎಲ್ಲ ಪಂದ್ಯಗಳನ್ನು ಗೆಲ್ಲುವುದೇ ನಮ್ಮ ಗುರಿ.

ಮುಂದಿನ ಪಂದ್ಯಗಳ ಬಗ್ಗೆ ಚಿಂತಿಸಿಲ್ಲ. ಮೊದಲು ಈ ಪಂದ್ಯವನ್ನು ನಿಭಾಯಿಸುತ್ತೇವೆ' ಎಂದರು.`ವಿದರ್ಭ ತಂಡದಲ್ಲಿಯೂ ಅನುಭವಿಗಳಿದ್ದಾರೆ. ಉತ್ತಮ ಯುವ ಬೌಲರ್‌ಗಳಿದ್ದಾರೆ. ನಮ್ಮಲ್ಲಿ ಒಂದು ಉತ್ತಮ ಪಂದ್ಯವಂತೂ ಇಲ್ಲಿ ನಡೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇಗಿಗಳಿಗೆ ನೆರವಾಗುವ ನಿರೀಕ್ಷೆ: ಸಾಯಿರಾಜ್
ನಮ್ಮ ವೇಗದ ಬೌಲರ್‌ಗಳಾದ ಶ್ರೀಕಾಂತ್ ವಾಘ್ ಮತ್ತು ಸಂದೀಪ್ ಸಿಂಗ್ ಈ ಪಿಚ್‌ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಬಲ್ಲರು. ಮೊದಲ ಅವಧಿಯಲ್ಲಿ ಬೌಲಿಂಗ್‌ಗೆ ಹೆಚ್ಚು ಅವಕಾಶ ನೀಡುವಂತೆ ಕಾಣುತ್ತಿದೆ ಎಂದು ವಿದರ್ಭ ತಂಡದ ನಾಯಕ ಸಾಯಿರಾಜ್ ಬಹುತುಳೆ ಹೇಳಿದರು.

`ಮೊದಲ ಬಾರಿಗೆ ಇಲ್ಲಿ ಆಡುತ್ತಿದ್ದೇವೆ. ಮೇಲ್ನೋಟಕ್ಕೆ ಪಿಚ್ ಚೆನ್ನಾಗಿ ಕಾಣುತ್ತಿದೆ. ವಾತಾವರಣವೂ ಅಹ್ಲಾದಕರವಾಗಿದೆ. ಕರ್ನಾಟಕಕ್ಕೆ ತವರು ನೆಲದಲ್ಲಿ ಆಡುತ್ತಿರುವ ಪ್ಲಸ್ ಪಾಯಿಂಟ್ ಇದೆ. ಅಲ್ಲದೇ ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಬಲ ಇದೆ. ಅದನ್ನು ಎದುರಿಸಲು ನಮ್ಮ ತಂಡದ ಆಟಗಾರರೂ ಕಠಿಣ ಅಭ್ಯಾಸ ನಡೆಸಿದ್ದಾರೆ' ಎಂದು ಹೇಳಿದರು.

ಮನೋಬಲ ಗಟ್ಟಿಯಾಗಿದೆ: ವಿನಯ್
ದೆಹಲಿ ವಿರುದ್ಧದ ಪಂದ್ಯ ಗೆದ್ದಿರುವುದು ತಂಡದ ಮನೋಬಲ ಹೆಚ್ಚಿಸಿದೆ. ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಕಂಡುಬಂದಿದೆ ಎಂದು ಕರ್ನಾಟಕದ ನಾಯಕ ಆರ್. ವಿನಯಕುಮಾರ್ ತಮ್ಮ ಸಹ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

`ಗಂಗೋತ್ರಿಯ ಪಿಚ್ ಯಾವಾಗಲೂ ಉತ್ತಮವಾಗಿಯೇ ಇದೆ. ಯಾವ ರೀತಿ ಆಡುತ್ತೇವೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗುತ್ತದೆ' ಎಂದು ಹೇಳಿದರು.`ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಹೆಮ್ಮೆಯ ವಿಷಯ. ಗಾಯದ ಸಮಸ್ಯೆಯಿಂದಲೂ ಹೊರಬಂದಿದ್ದೇನೆ. ಉತ್ತಮ ಪ್ರದರ್ಶನ ನೀಡುವತ್ತ ಮಾತ್ರ ನನ್ನ ಗಮನ ಇದೆ' ಎಂದು ಹೇಳಿದರು.

ಗಂಗೋತ್ರಿ ಬಗ್ಗೆ ಒಂದಿಷ್ಟು
ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಮೊದಲ ರಣಜಿ ಪಂದ್ಯ 2007ರಲ್ಲಿ ನಡೆಯಿತು. 2009-10ನೇ ಋತುವಿನಲ್ಲಿ ಕರ್ನಾಟಕ ಮತ್ತು ಪಂಜಾಬ್ ನಡುವೆ ಕ್ವಾರ್ಟರ್ ಫೈನಲ್ ನಡೆಯಿತು. ಅದರಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಅದೇ ಋತುವಿನ ಫೈನಲ್ ಪಂದ್ಯ ಇಲ್ಲಿಯೇ ನಡೆದಿತ್ತು. ಮುಂಬೈ ವಿರುದ್ಧ ಕರ್ನಾಟಕ ಸೋಲನುಭವಿಸಿತ್ತು. 2010-11ನೇ ಋತುವಿನಲ್ಲಿ ಬರೋಡಾ -ಕರ್ನಾಟಕ ಲೀಗ್ ಪಂದ್ಯ ಸಮ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT