ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿಯಾಗಬೇಕಾದ ದಾರಿಯಲ್ಲಿ...

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಕವಯತ್ರಿ ಸವಿತಾ ನಾಗಭೂಷಣ ಅವರ ಆಯ್ದ ಕವನಗಳ ಸಂಗ್ರಹ `ಹಳ್ಳಿಯ ದಾರಿ~ಯನ್ನು ಇತ್ತೀಚೆಗೆ ಸಂಪಾದಿಸಿರುವ ವಿಮರ್ಶಕ ಡಿ.ಎಸ್. ನಾಗಭೂಷಣ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೀಗೊಂದು ಕಾವ್ಯತಾತ್ವಿಕತೆಯನ್ನು ಮುಂದಿಡುತ್ತಾರೆ:

`ಆಧುನಿಕ ದೃಷ್ಟಿಕೋನವೇ ಏಕೈಕ ಬದುಕಿನ ತತ್ವವಾಗಿ ಹೇರಲ್ಪಡುತ್ತಿದ್ದು, ಸರಳತೆ ಮತ್ತು ಮುಗ್ಧತೆ ಆಧುನಿಕ ಕಾವ್ಯಮೀಮಾಂಸೆಯಲ್ಲಿ ಮಿತಿಗಳ ಪಟ್ಟಿಯಲ್ಲಿ ಸೇರಿಹೋಗಿವೆ. ಇವು ಬದುಕಿನ ಮೌಲ್ಯಗಳು ಹೇಗೋ, ಕಾವ್ಯದ ಮೌಲ್ಯಗಳೂ ಆಗಬಲ್ಲವು ಎಂಬ ಅರಿವೇ ಮರೆಯಾಗಿದೆ.
 
ಸಂಕೀರ್ಣತೆ, ಅದಕ್ಕೆ ತಕ್ಕುನಾದ ಜಟಿಲ ವಿನ್ಯಾಸದ ಶೋಧನೆಗಳಷ್ಟೇ ಕಾವ್ಯವಿಮರ್ಶೆಯ ಮಾನದಂಡಗಳಾಗಿಬಿಟ್ಟಿವೆ. ಸದ್ಯ ಇವು ಇನ್ನೂ ಕನ್ನಡ ಸಹೃದಯತೆಯ ಮಾನದಂಡಗಳಾಗಿಲ್ಲವಲ್ಲ ಎಂಬುದೇ ಸಮಾಧಾನ!...~.

ಸರಳತೆ, ಮುಗ್ಧತೆಯ ಕಾವ್ಯಸ್ವರೂಪಕ್ಕೆ ನ್ಯಾಯ ಒದಗಿಸುವಂತೆ ಕಾಣುವ ಈ ಮಾತುಗಳ ಹೊಸ ತಾತ್ವಿಕತೆಯ ಆಧಾರದ ಮೇಲೆಯೇ ಕವಯತ್ರಿ ಜ್ಯೋತಿ ಗುರುಪ್ರಸಾದ್ ಅವರ `ವರನಂದಿ ಪ್ರತಿಮೆ~ಯ ಕವಿತೆಗಳನ್ನು ಪರಿಶೀಲಿಸಿ ನೋಡಬಹುದೆನ್ನಿಸುತ್ತದೆ.

ಆದರೆ ಹಾಗೆ ನೋಡುತ್ತಾ ಹೋದಂತೆಲ್ಲ ಈ ಬಗೆಯ ಸರಳ, ಮುಗ್ಧ ರಚನೆಗಳು ತಲುಪುವ ಏಕತಾನತೆಯ ಮಾರ್ಗಗಳು ಕಾವ್ಯಸಂವೇದನೆಯನ್ನು ಎಷ್ಟು ನೀರಸಗೊಳಿಸುತ್ತವೆ, ಜೊಳ್ಳಾಗಿಸುತ್ತವೆ, ಸಡಿಲ ಜನಪ್ರಿಯ ಮಾದರಿಗಳಿಗೆ ತಳ್ಳಿಬಿಡುತ್ತವೆ ಎಂಬುದು ಅರಿವಿಗೆ ಬರುತ್ತದೆ.

ನಾವು ರೂಪಿಸಬಯಸುವ ಮೀಮಾಂಸೆಯ ಮಾದರಿಗಳನ್ನೇ ಕೆಲವು ಸೃಜನಶೀಲ ಆಕೃತಿಗಳು ಒಮ್ಮಮ್ಮೆ ಹೇಗೆ ಒಡೆದುಹಾಕಬಲ್ಲವು ಎಂಬ ವೈರುಧ್ಯಕ್ಕೆ ಇದು ಉದಾಹರಣೆಯಂತಿದೆ.

ಜ್ಯೋತಿ ಗುರುಪ್ರಸಾದ್ ಅವರ ರಚನೆಗಳ ಬಹುಮುಖ್ಯ ಭಿತ್ತಿ ಕವಿತೆ ಮತ್ತು ಪ್ರೀತಿ. ಈ ಎರಡು ವಿಚಾರಗಳತ್ತಲೇ ಅವರ ಎಲ್ಲ ರಚನೆಗಳೂ ತುಡಿಯುತ್ತವೆ. ಇಲ್ಲಿನ ಮುಕ್ಕಾಲುಪಾಲು ಕವಿತೆಗಳಲ್ಲಿ ಕಾಣಿಸಿಕೊಳ್ಳುವ ಪ್ರೇಮ ಮತ್ತು ಕಾವ್ಯದ ಆಶಯ ಇವೆರಡನ್ನೂ ಎಡೆಬಿಡದಂತೆ ಆವರಿಸಿಕೊಂಡಿದೆ.

ಇದನ್ನು ಒಂದು ದೋಷವೆಂಬಂತೆ ನೋಡಬೇಕಾಗಿಯೂ ಇಲ್ಲ. ಕವಿಮನಸ್ಸಿಗೆ ನಿರಂತರವಾಗಿ ಕಾಡಿದ ವಸ್ತು ಅಥವಾ ವಿಷಯಾನುಭವಗಳು ನಿರಂತರವಾಗಿ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ವ್ಯಕ್ತಗೊಳ್ಳಬಾರದೆಂದೇನೂ ಇಲ್ಲ. ಆದರೆ ಹಾಗೆ ತುಡಿಯುವ ವಸ್ತು, ವಿಷಯಗಳು ಕಾವ್ಯದ ವಿವಿಧ ಸಾಧ್ಯತೆ, ಭಾಷೆ, ರೂಪಕಶಕ್ತಿಗಳೊಂದಿಗೆ ಮೈದಳೆಯಬೇಕಷ್ಟೆ. ಹಾಗಿಲ್ಲದಿದ್ದರೆ ಕವಿತೆ ಹೇಳಿದ್ದನ್ನೇ ಹೇಳುವ ಏಕತಾನತೆಗೆ ಈಡಾಗಬೇಕಾಗುತ್ತದೆ.

ಇಂತಹ ಎಚ್ಚರ ಜ್ಯೋತಿಯವರ ಕಾವ್ಯದಲ್ಲೂ ಆಗಾಗ್ಗೆ ಕಾಣಿಸಿಕೊಳ್ಳುವುದಿದೆ. ಹೆಣ್ತನ, ತಾಯ್ತನ, ಸಂಗಾತಿಯ ಪ್ರೇಮ ಎಲ್ಲವನ್ನೂ ಏಕೀಭವಿಸಿ ನೋಡುವ-

ಹೆರಿಗೆಯ ಆ ಸುಯೋಗಕ್ಕೆ
ನೀ ನನ್ನ ಸೂಲಗಿತ್ತಿಯಾಗಬೇಕಿದೆ
ನಿನ್ನ ಪ್ರೇಮಸಿಕ್ತ ಕೈಗಳಿಂದ
ನನ್ನ ತುಂಬಿದ ಒಡಲನ್ನು ತಡವುತ್ತ ತಡವುತ್ತ
ನನಗೆ ನೋವು ಬರಿಸಬೇಕಿದೆ
(ನೋವು ಕೊಡು ನನಗೆ)

ಎಂಬ ಸಾಲುಗಳಲ್ಲಿ ಅವರ ಕಾವ್ಯ ಹೊಸತನಕ್ಕೆ ತುಡಿಯುತ್ತದೆ. ಇನ್ನುಳಿದಂತೆ `ಬೀಜಾಕ್ಷರ~, `ಮುಗುಳ್ನಗೆ~, `ಆಳ~, `ಸಂಚಲನ~, `ಧ್ಯಾನ~,  `ಜೀವನೋತ್ಸಾಹ~, `ಪ್ರಾಮಾಣಿಕತೆ~, `ಹೊಸ ಕವಿತೆ~, `ಒಂದೇ ಒಂದು ಮಾತು~, `ವ್ಯಾಕುಲಚಿತ್ತ~, `ಭಾವಚಿತ್ರ~, `ಮೈತ್ರಿ~ ಮುಂತಾದ ರಚನೆಗಳೆಲ್ಲವೂ ಪ್ರೇಮ, ಕಾವ್ಯ ಇತ್ಯಾದಿಯನ್ನು ಕಾಡುವ ಸಾಲುಗಳ ಹಾಗೆ, ಕಾವ್ಯದ ಸಾಲುಗಳ ಹಾಗೆ ಕಟ್ಟಿಕೊಡುವಲ್ಲಿ ಸೋಲುತ್ತವೆ; ಬದಲಿಗೆ ವಾಚ್ಯರೂಪದ ಸರಳತೆಯಲ್ಲೇ ನಿಂತುಬಿಡುತ್ತವೆ. ಹಾಗಾಗಿ ಕವಯತ್ರಿ ಹೇಳಿದ್ದನ್ನೇ ಹೇಳಿ `ಶಬ್ದಾಯಾಸ~ವನ್ನು ಅನುಭವಿಸುತ್ತಿದ್ದಾರೇನೋ ಅನ್ನಿಸುವಂತಾಗುತ್ತದೆ.

ಇಂತಹ ಏಕತಾನತೆಯಿಂದ ಬಿಡುಗಡೆ ಪಡೆಯಲೆಂಬಂತೆ ರೂಪು ತಳೆದಿರುವ `ಸಿನಿಮಾ ಮತ್ತು ವಾಸ್ತವ~, `ಪಾತಾಳಗರುಡಿ~,  `ರೂಪಾಂತರದ ಗಳಿಗೆ~, `ವರನಂದಿ ಪ್ರತಿಮೆ~ ಕವಿತೆಗಳು ಇರುವವುಗಳಲ್ಲಿ ಭಿನ್ನ ರಚನೆಗಳಂತೆ ತೋರುತ್ತವೆ. ಪ್ರೇಮ ಮತ್ತು ಕವಿತೆಯ ವಸ್ತುಗಳಿಂದಾಚೆ ಕವಯತ್ರಿ ಯೋಚಿಸಿದಾಗ ಹುಟ್ಟಿರಬಹುದಾದ ಕವಿತೆಗಳಿವು.

`ಸಿನಿಮಾ ಮತ್ತು ವಾಸ್ತವ~ ಕವಿತೆಯಲ್ಲಿ ಸಿನಿಮಾ ಎಂಬುದನ್ನು ಕವಯತ್ರಿ ಭಾವಿಸುವ ಬಗೆ, ಸಿನಿಮಾದೊಂದಿಗಿನ ಸಂಬಂಧವನ್ನು ಹೇಳುವುದು ಸಹಜವಾಗಿ ಪ್ರಕಟಗೊಂಡಿದ್ದರೂ ಕವಿತೆಯ ಕೊನೆಯ ಸಾಲುಗಳಲ್ಲಿ ಬಂದುಬಿಡುವ ಪ್ರೀತಿಯ ಅನಗತ್ಯ ಪ್ರಸ್ತಾಪ ಕವಿತೆಯಿಂದ ಬೇರ್ಪಟ್ಟು ನಿಂತಂತೆ ಭಾಸವಾಗುತ್ತದೆ.

ಪ್ರೇಮವನ್ನು, ಕಾವ್ಯವನ್ನು ತನ್ನ ಪ್ರಧಾನ ಕಾಳಜಿಯೆಂದು ಹಟಪೂರ್ವಕವಾಗಿ ನಂಬಿಸಹೊರಟಂತಿರುವ ಕವಯತ್ರಿಯ ಗೀಳಿನಿಂದಾಗಿಯೇ-

ಪದ್ಯ ಬರೆಯುವುದೇ ನನ್ನ ಕಾಯಕ
ಆತ್ಮಕ್ಕೆ ಸಮ್ಮೋನದ ದ್ಯೋತಕ
(ಕಾಯಕ)

ಎಂಬ ಸಾಲುಗಳು ಕೃತಕ, ಭಾರವಾದ ಸಾಲುಗಳೆನ್ನಿಸಿಬಿಡುತ್ತವೆ.
ಪುರಾಣದ ಪ್ರತಿಮೆಗಳ ವಿಶ್ಲೇಷಣೆ ಮಾಡಲು ಯತ್ನಿಸಿರುವ `ರೂಪಾಂತರದ ಗಳಿಗೆ~ ಕವಿತೆಯು ಕುಂತಿ, ಅಹಲ್ಯೆಯರನ್ನು ದಿಟ್ಟವಾಗಿ ಬದುಕಬೇಕಿತ್ತೆನ್ನುವ ಸ್ತ್ರೀಪರ ನಿಲುವಿನಲ್ಲಿ ನೋಡುವ ಆರೋಗ್ಯಕರ ದೃಷ್ಟಿಯನ್ನೊಳಗೊಂಡಿದೆ.

ಆದರೆ ಕವಯತ್ರಿ ಈ ನಿಲುವನ್ನು ಕಾವ್ಯವಾಗಿ ದಾಟಿಸುವಲ್ಲಿ ಅಷ್ಟಾಗಿ ಯಶಸ್ವಿಯಾದಂತಿಲ್ಲ. ಇದೇ ಬಗೆಯ ಸಮಸ್ಯೆಯನ್ನು ಅನುಭವಿಸಿರುವ `ವರನಂದಿ ಪ್ರತಿಮೆ~ ಬೇರೆ ಧಾಟಿಯ ರಚನೆಯಾಗಿ ಕಂಡರೂ ಚೆಲುವನಾರಾಯಣನ ಮೇಲಿನ ವರನಂದಿಯ ಪ್ರೇಮವನ್ನು ಕೇವಲ ವಾಚ್ಯವಾಗಿ ನಿರೂಪಿಸುತ್ತದೆಯಷ್ಟೆ.
 
ವರನಂದಿಯು ಚೆಲುವನಾರಾಯಣನ ಪ್ರತಿಮೆಯನ್ನು ಮೋಹಿಸುವ ಐತಿಹ್ಯವನ್ನು ಕಥನಕಾವ್ಯದ ಹಾಗೆ ಬಹುಮುಖಿ ರೂಪಗಳಲ್ಲಿ ಬೆಳೆಸುವ ಸಾಧ್ಯತೆಯಿದ್ದರೂ ಕವಯತ್ರಿ ತಾವು ಇನ್ನಾರಿಂದಲೋ ಕೇಳಿದ ಈ ಐತಿಹ್ಯವನ್ನು ಹಾಗೆಯೇ ನಿರೂಪಿಸಿ ಸುಮ್ಮನಾಗುತ್ತಾರೆ.
 
ಅಲ್ಲದೆ ಕವಿತೆಯ ಕೊನೆಯಲ್ಲಿ ಕೊಡಲಾಗಿರುವ ಟಿಪ್ಪಣಿಯಲ್ಲಿ, `ಪ್ರೇಮದ ಅಲೌಕಿಕ ಶಕ್ತಿ ಮತ್ತು ಕವಿತೆಯ ಹುಟ್ಟಿನ ವಿಸ್ಮಯ ಈ ಪದ್ಯದ ಆಶಯ~ ಎಂಬ ಮಾತು ಹಿಂದೆ ಹೇಳಿದ ರೂಪಾಂತರದ ಗಳಿಗೆ ಕವಿತೆಯ ಲೌಕಿಕ ಆಶಯಗಳಿಗೆ ವಿರುದ್ಧವಾಗಿದೆ!

ಮಾಯಾಮೃಗವನ್ನು ಮೋಹಿಸುವ ಸೀತೆಯ ಸಾಮಾನ್ಯ ಆಸೆಯನ್ನೂ ತಪ್ಪೆಂದು ವ್ಯಾಖ್ಯಾನಿಸುವ `ಭೂಗರ್ಭ~ ಕವಿತೆಯಲ್ಲೂ ಇದೇ ವೈರುಧ್ಯ ವ್ಯಕ್ತವಾಗಿದೆ. ಹೀಗೆ ಜ್ಯೋತಿಯವರ ಕಾವ್ಯದ ವಿವಿಧ ಸಾಲುಗಳು ತಮ್ಮದೇ ದ್ವಂದ್ವಗಳಲ್ಲಿ ಸಿಕ್ಕಿ ಹಾಕಿಕೊಂಡಂತೆ ಕಾಣಿಸುತ್ತವೆ.

ಕಾವ್ಯರಚನೆ ಸಲೀಸಾದಂತೆ ಕಾವ್ಯ ಕಟ್ಟುವ ಕಸುಬು ಅಷ್ಟು ಸಲೀಸಾದುದಲ್ಲ ಎಂಬ ನಿರಂತರ ಎಚ್ಚರ, ಧ್ಯಾನ ಮತ್ತು ಅಧ್ಯಯನ ರೂಢಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಅರಿವಿಗೆ ಬರುವುದು ಇಂತಹ ಸಂದರ್ಭಗಳಲ್ಲಿಯೆ. ಈಗಾಗಲೇ ಕೆಲವು ಕವನ ಸಂಕಲನಗಳನ್ನು ಹೊರತಂದಿರುವ ಜ್ಯೋತಿಯವರ ಕಾವ್ಯಾಸಕ್ತ ಮನಸ್ಸು ಇದನ್ನೆಲ್ಲ ಗಮನಿಸಬೇಕೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT