ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಾಫಿ ಹತ್ಯೆ: ಸೇಡಿನ ಪ್ರತಿಜ್ಞೆ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೈರೊ, ಈಜಿಪ್ಟ್ (ಐಎಎನ್‌ಎಸ್/ರಿಯಾ ನೊವೊಸ್ತಿ):  ಹತ್ಯೆಗೀಡಾದ ಲಿಬಿಯಾ ನಾಯಕ ಮುಅಮ್ಮರ್ ಗಡಾಫಿಯ ಪುತ್ರರಲ್ಲಿ ಒಬ್ಬರಾದ ಸೈಫ್ ಅಲ್ ಇಸ್ಲಾಂ ಅವರು ತಮ್ಮ ತಂದೆಯನ್ನು ಹತ್ಯೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.

ಸಿರಿಯಾ ಮೂಲದ `ಅಲ್‌ರಾಯಿ~ ಟಿವಿ ಚಾನೆಲ್‌ನಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ ಸೈಫ್, ತಮ್ಮ ಬೆಂಬಲಿಗರಿಗೆ ಮನವಿ ಮಾಡಿ, `ನಾನಿನ್ನೂ ಬದುಕಿದ್ದೇನೆ ಮತ್ತು ಲಿಬಿಯಾದಲ್ಲೇ ವಾಸವಾಗಿದ್ದೇನೆ ಹಾಗೂ ಬಂಡುಕೋರರ ವಿರುದ್ಧ ಕೊನೆಯತನಕ ಹೋರಾಟ ನಡೆಸಲು ಬಯಸಿದ್ದೇನೆ~ ಎಂದು ತಿಳಿಸಿದ್ದಾರೆ.

ಗಡಾಫಿ ಅವರನ್ನು ಗುರುವಾರ ರಾಷ್ಟ್ರೀಯ ಸಂಧಿಕಾಲ ಮಂಡಳಿ (ಎನ್‌ಟಿಸಿ)ಯ ಯೋಧರು ಹತ್ಯೆ ಮಾಡಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಉದ್ದೇಶಿಸಿರುವುದಾಗಿ ತಮ್ಮ ಕುಟುಂಬಕ್ಕೆ ನಿಷ್ಠೆಯಿಂದ ಇರುವ ಅಲ್‌ರಾಯಿ ಚಾನೆಲ್‌ನಲ್ಲಿ ಸೈಫ್ ಹೇಳಿದ್ದಾರೆ.

ಗಡಾಫಿ ಬೆಂಬಲಿಗರ ವೆಬ್‌ಸೈಟ್‌ವೊಂದು ತನ್ನ ಪ್ರಕಟಣೆಯಲ್ಲಿ, ಲಿಬಿಯಾ ಸರ್ವಾಧಿಕಾರಿಯ ಉತ್ತರಾಧಿಕಾರಿಯಾಗಿ ಸೈಫ್ ಹೆಸರಿಸಲ್ಪಟ್ಟಿದ್ದು, ಗಡಾಫಿ ಪಡೆಗಳ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿತ್ತು.

ಈ ಮಧ್ಯೆ, ಗಡಾಫಿಯ ಶವವನ್ನು ಮಿಸ್ರತ್‌ನಲ್ಲಿರುವ ವ್ಯಾಪಾರ ಕೇಂದ್ರವೊಂದರ ಶೈತ್ಯಾಗಾರದಲ್ಲಿರಿಸಿದ್ದು, ಇದನ್ನು ವೀಕ್ಷಿಸಲು ಲಿಬಿಯಾ ಜನತೆ ಸರದಿಯಲ್ಲಿ ನಿಂತಿದ್ದು ಸಾಮಾನ್ಯ ದೃಶ್ಯವಾಗಿತ್ತು.

ತನಿಖೆಗೆ ಒತ್ತಾಯ (ಟ್ರಿಪೋಲಿ ವರದಿ): ಗಡಾಫಿ ಸಾವಿನ ನೈಜ ಸನ್ನಿವೇಶದ ಕುರಿತು ಎನ್‌ಟಿಸಿ ಸದಸ್ಯರೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ. `ಗಡಾಫಿಯನ್ನು ಸೆರೆ ಹಿಡಿದಿರುವುದು ಸ್ಪಷ್ಟವಿದ್ದು, ಆದರೆ ಅವರ ಸಾವು ಹೇಗಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕು~ ಎಂದು ವಾಹೀದ್ ಬುರ್ಷನ್ ಆಗ್ರಹಿಸಿರುವುದಾಗಿ `ಅಲ್ ಜಜೀರಾ~ ವರದಿ ಮಾಡಿದೆ.

ವಿಶ್ವಸಂಸ್ಥೆಯು ಗಡಾಫಿ ಸಾವಿನ ಬಗ್ಗೆ ತನಿಖೆ ಕೈಗೊಳ್ಳಲು ಒತ್ತಾಯಿಸಿದ ನಂತರ ಎನ್‌ಟಿಸಿ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ಮಹಮದ್ ಜಿಬ್ರಿಲ್ ಅವರು ಗಡಾಫಿ ಕಾಳಗದಲ್ಲಿ ಮೃತಪಟ್ಟಿರುವುದಾಗಿ ಹೇಳಿರುವುದಕ್ಕೆ ವ್ಯತಿರಿಕ್ತವಾಗಿ ವಾಹೀದ್ ಅಜ್ಞಾತ ಸ್ಥಳದಿಂದ ಈಗ ಹೇಳಿಕೆ ನೀಡಿರುವುದು ಹಲವು ಶಂಕೆಗೆ ಕಾರಣವಾಗಿದೆ.

ಗುಪ್ತಚರ ಮುಖ್ಯಸ್ಥ ನೈಜೀರಿಯಾದಲ್ಲಿ (ನಿಯಾಮಿ ವರದಿ): ಗಡಾಫಿ ಪಡೆಗಳ ಗುಪ್ತಚರ ಮುಖ್ಯಸ್ಥ ಅಬ್ದುಲ್ಲಾ ಸೆನೋಸ್ಸಿ ಅವರು ನೈಜೀರಿಯಾದಲ್ಲಿ ಆಶ್ರಯ ಪಡೆದಿರುವುದಾಗಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನೈಜೀರಿಯಾದ ವಿದೇಶಾಂಗ ಮತ್ತು ಸಹಕಾರ ವ್ಯವಹಾರಗಳ ರಾಜ್ಯ ಸಚಿವ ಬಜೋಮಿ ಮೊಹಮದ್ ಅವರು ಅಲ್ಜೀರಿಯಾ ಮತ್ತು ಲಿಬಿಯಾ ಗಡಿಗೆ ಹೊಂದಿಕೊಂಡಂತೆ ನೈಜೀರಿಯಾ ಪ್ರದೇಶದೊಳಗೆ ಅಬ್ದುಲ್ಲಾ ಕಾಣಿಸಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT