ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಮೀರಿದ ಅನುಬಂಧ...

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಇದು ಗಡಿ ಮೀರಿದ ಸಂಬಂಧ, ದೇಶ ದೇಶಗಳ ನಡುವಿನ ಹಗೆತನಕ್ಕೂ ಈ `ವಾತ್ಸಲ್ಯ ಬಂಧ~ಕ್ಕೆ ಚ್ಯುತಿ ತರಲು ಸಾಧ್ಯವಾಗಿಲ್ಲ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಮೊಹಮ್ಮದ್ ಜಿಯಾ ಉಲ್ ಹಕ್ ಅವರ ಪುತ್ರಿ ಝೈನ್ ಜಿಯಾ ಮತ್ತು ಬಾಲಿವುಡ್ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ನಡುವಿನ ಈ `ಅಣ್ಣ- ತಂಗಿ~ ಸಂಬಂಧ ಇಂದು ನಿನ್ನೆಯದಲ್ಲ, 25 ವರ್ಷಗಳಷ್ಟು ಹಳೆಯದು.

ಜನರಲ್ ಜಿಯಾ ಅವರು ಬದುಕಿದ್ದಾಗ ಆರಂಭವಾದ ಈ ಮಾನಸಿಕ ಬಾಂಧವ್ಯವನ್ನು ಉಭಯ ದೇಶಗಳ ನಡುವಿನ ಸಂಬಂಧದ ಏಳುಬೀಳುಗಳ ನಡುವೆಯೂ ಯಾವುದೇ ಕುಂದಿಲ್ಲದಂತೆ ಇಬ್ಬರೂ ಕಾಯ್ದುಕೊಂಡು ಬಂದಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಭಾರತದ ಸಂಸದರ ನಿಯೋಗದಲ್ಲಿ ಒಬ್ಬರಾಗಿರುವ ಶತ್ರುಘ್ನ, ಬಿಡುವು ಮಾಡಿಕೊಂಡು ಬುಧವಾರ ಝೈನ್ ಅವರ ಮನೆಗೆ ಭೇಟಿ ನೀಡಿದ್ದರು.

ಸಹೋದ್ಯೋಗಿಗಳಾದ ಯಶವಂತ ಸಿನ್ಹಾ, ಸೈಯದ್ ಶಾ ನವಾಜ್ ಹುಸೇನ್ ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರೊಂದಿಗೆ ಮನೆಗೆ ಬಂದ `ಅಣ್ಣ~ನನ್ನು ಝೈನ್ ಅತ್ಯಂತ ಆಪ್ತವಾಗಿ ಬರಮಾಡಿಕೊಂಡರು. ಝೈನ್ ಅವರ ಸಹೋದರ ಹಾಗೂ ಪಾಕಿಸ್ತಾನದ ಮಾಜಿ ಸಚಿವ ಇಜಾಜ್ ಉಲ್ ಹಕ್ ಮತ್ತು ಅವರ ಕುಟುಂಬವೂ ಈ ಸಂದರ್ಭದಲ್ಲಿ ಹಾಜರಿತ್ತು.

`ನನ್ನನ್ನು ನೋಡಿ ಆಕೆಗೆ ಅತ್ಯಂತ ಸಂತೋಷವಾಯಿತು. ಅವಳು ನನ್ನ ಮುದ್ದಿನ ತಂಗಿ~ ಎಂದು ಶತ್ರುಘ್ನ ಸುದ್ದಿಸಂಸ್ಥೆಗೆ ತಿಳಿಸಿದರು.

`ಖುದ್ದಾಗಿ ತಯಾರಿಸಿದ ಬಿರಿಯಾನಿ, ಹುರಿದ ಮೀನು, ಬಗೆಬಗೆಯ ಸಸ್ಯಾಹಾರಿ ಅಡುಗೆಗಳನ್ನು ಝೈನ್ ನಮಗೆ ಉಣಬಡಿಸಿದಳು. ನನ್ನ ಪತ್ನಿ ಪೂನಂ ಸಿನ್ಹಾ ಬಗ್ಗೆ ವಿಚಾರಿಸಿಕೊಂಡಳು. ಮಗಳು ಸೋನಾಕ್ಷಿ ನಟಿಸಿರುವ `ದಬಾಂಗ್~ ಚಿತ್ರವನ್ನು ತಮ್ಮ ಕುಟುಂಬ ಸಾಕಷ್ಟು ಬಾರಿ ನೋಡಿ ಸಂತಸಪಟ್ಟಿದ್ದಾಗಿ ತಿಳಿಸಿದಳು~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT