ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ಗೋಳು ಆಲಿಸುವವರು ಯಾರು?

ಧಡ್ಕ ಧಡಕ್ ಸದ್ದು ಬಂದ್ರೆ ಅದು ಕರ್ನಾಟಕ
Last Updated 12 ಡಿಸೆಂಬರ್ 2013, 9:39 IST
ಅಕ್ಷರ ಗಾತ್ರ

ಪಾವಗಡ: ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದವರು ಮಡಕಶಿರಾ ತಾಲ್ಲೂಕು ದಾಟಿ ಪಾವಗಡ ಪ್ರವೇಶಿಸಿದ ತಕ್ಷಣ ಬೆಚ್ಚಿಬಿದ್ದು ಎದ್ದು ಕೂರುತ್ತಾರೆ. ವಾಹನದ ವೇಗ ಕಡಿಮೆಯಾಗುತ್ತದೆ, ಧಡ್ಕ ಧಡಕ್ ಸದ್ದಿನೊಂದಿಗೆ ವಿಚಿತ್ರ ನಾಟ್ಯ ಶುರುವಾಗುತ್ತದೆ. ‘ಓಹ್ ಕರ್ನಾಟಕ ಬಂತು’ ಎಂದು ಪ್ರಯಾಣಿಕರು ಬೇಸರದ ಉದ್ಗಾರ ತೆಗೆಯುತ್ತಾರೆ.

ಪಾವಗಡ ತಾಲ್ಲೂಕಿನ ಹದಗೆಟ್ಟ ರಸ್ತೆಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾಗಿವೆ. ಹಲವು ರಾಜಕಾರಿಣಿಗಳು, ಹಿರಿಯ ಅಧಿಕಾರಿಗಳು ‘ರಸ್ತೆಗೊಂದು ಗತಿ ಕಾಣಿಸ್ರಿ, ಜನರ ಪ್ರಾಣ ತೆಗೀಬೇಡ್ರೀ’ ಎಂದು ಬೊಬ್ಬೆ ಹಾಕಿದ್ದರೂ ಪ್ರಯೋಜನವಾಗಿಲ್ಲ.

ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಶ್ರೀನಿವಾಸ್‌ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ  ಶೇ 90ರಷ್ಟು ಮಂದಿ ಪಟ್ಟಣದ ರಸ್ತೆ ಸೇರಿದಂತೆ ತಾಲ್ಲೂಕಿನ ಹದಗೆಟ್ಟ ರಸ್ತೆಗಳ ಬಗ್ಗೆಯೇ ದೂರಿದರು.

‘ಪುರಸಭೆ, ಲೋಕೋಪಯೋಗಿ ಇಲಾಖೆಗಳು ಪರಸ್ಪರ ಬೊಟ್ಟು ತೋರಿಸುತ್ತಾ ಕಾಲ ತಳ್ಳದೆ ತಕ್ಷಣ ಕಾರ್ಯತತ್ಪರರಾಗಿ ಪಟ್ಟಣದ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಲೋಕಾಯುಕ್ತ ಡಿವೈಎಸ್‌ಪಿ ಸೂಚಿಸಿದ್ದರು. ಸಭೆಯಲ್ಲಿದ್ದ ಅಧಿಕಾರಿಗಳು, ‘ಸರಿ ಸಾರ್, ಮಾಡ್ತೀವಿ’ ಎಂದು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿಲ್ಲ.

ದುಪ್ಪಟ್ಟು ಸಮಯ: ರಸ್ತೆ ಹದಗೆಟ್ಟಿರುವ ಕಾರಣ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ತುಮಕೂರು ಮತ್ತು ಬೆಂಗಳೂರಿಗೆ ತಲುಪಲು ತೆಗೆದುಕೊಳ್ಳುತ್ತಿರುವ ಸಮಯ ದುಪ್ಪಟ್ಟಾಗುತ್ತಿದೆ. ಗಂಭೀರ ಸ್ವರೂಪದ ದೇಹಸ್ಥಿತಿಯ ಅದೆಷ್ಟೋ ರೋಗಿಗಳು ಸಕಾಲದಲ್ಲಿ ಬೆಂಗಳೂರು, ತುಮಕೂರಿನಲ್ಲಿರುವ ಆಸ್ಪತ್ರೆ ತಲುಪಲಾಗದೆ ಮಾರ್ಗಮಧ್ಯದಲ್ಲಿಯೇ ಅಸುನೀಗಿರುವುದು ಪರಿಸ್ಥಿತಿಯ  ತೀವ್ರತೆಯ ನಿದರ್ಶನವಾಗಿದೆ.

ಜನಪ್ರತಿನಿಧಿಗಳು, ಶ್ರೀಮಂತರು ಸ್ವಂತ ವಾಹನಗಳಲ್ಲಿ ತಾಲ್ಲೂಕಿನಿಂದ ಪೆನುಗೊಂಡ ಮೂಲಕ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ಹಾದು ಉತ್ತಮ ರಸ್ತೆ ಮೂಲಕ ಬೆಂಗಳೂರಿಗೆ ತೆರಳುತ್ತಾರೆ. ಬಡ ಜನತೆ ನೇರ ಮಾರ್ಗವಾದ ಮಧುಗಿರಿ ಅಥವಾ ಹಿಂದೂಪುರ ರಸ್ತೆ ಮೂಲಕ ಬೆಂಗಳೂರಿಗೆ ತೆರಳಬೇಕಿದೆ. ತುಮಕೂರು, ಕೊರಟಗೆರೆ, ಮಧುಗಿರಿ, ಶಿರಾದಿಂದ ತಾಲ್ಲೂಕಿಗೆ ಪ್ರತಿ ನಿತ್ಯ ಸಂಚರಿಸುವ ನೌಕರರು ಇಲ್ಲಿನ ರಸ್ತೆ ದುಸ್ಥಿತಿಗೆ ಹೆದರಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಪಟ್ಟಣದಲ್ಲೂ ಗುಂಡಿ: ಪಟ್ಟಣದ ರಸ್ತೆಗಳಲ್ಲೂ ಹೆಜ್ಜೆಗೊಂದು ಗುಂಡಿ ಸಿಗುತ್ತದೆ. ತಹಶೀಲ್ದಾರ್ ಕಚೇರಿ, ಶನಿ ದೇಗುಲದ ವೃತ್ತ, ಬಸ್ ನಿಲ್ದಾಣ, ಚಳ್ಳಕೆರೆ ಕ್ರಾಸ್ ರಸ್ತೆ ಸೇರಿದಂತೆ ಎಲ್ಲ ಆಯಕಟ್ಟಿನ ಪ್ರದೇಶದಲ್ಲೂ ಕಾರಿನ ಛಾಸಿ ನೆಲಕ್ಕೆ ತಗಲುವಂಥ ಗುಂಡಿಗಳಿವೆ. ವಾಹನ ಓಡಿಸುವವರು ಗುಂಡಿಗಳನ್ನೇ ಧ್ಯಾನಿಸಿ ವಾಹನ ಓಡಿಸುವುದರಿಂದ ಅಪಘಾತಗಳು ನಿತ್ಯದ ಮಾತಾಗಿದೆ.

ದೂಳೇ ದೂಳು: ವಾಹನ ಸಂಚಾರ ಹೆಚ್ಚಳದ ಜೊತೆ ಜೊತೆಯಲ್ಲಿಯೇ ರಸ್ತೆಯ ಆಜುಬಾಜಿನ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೂ ದೂಳಿನ ಬೇನೆ ಕಾಡುತ್ತಿದೆ. ಅಂಗಡಿ ಮುಗ್ಗಟ್ಟುಗಳನ್ನು ಶುಚಿಗೊಳಿಸಿದ ಕಲವೇ ನಿಮಿಷಗಳಲ್ಲಿ ದೂಳು ತುಂಬಿಕೊಳ್ಳುತ್ತಿದೆ. ಇದರೊಟ್ಟಿಗೆ ಜನರಿಗೆ ಅಲರ್ಜಿ ಮತ್ತಿತರ ಆರೋಗ್ಯ ಸಮಸ್ಯೆಗಳು ಸಾಮಾನ್ಯ ಎನ್ನುವಂತಾಗಿದೆ.

ಜೀವ ಭೀತಿಯಲ್ಲಿ ಸಂಚಾರ
ಈ ಹಿಂದೆ ಪಟ್ಟಣದ ರಸ್ತೆಗಳಲ್ಲಿದ್ದ ಮಣ್ಣನ್ನು ಪುರಸಭೆಯವರು ಎತ್ತಿ ಹಾಕುತ್ತಿದ್ದರು. ಆದರೆ ಈಚೆಗೆ ರಸ್ತೆಗಳ ತುಂಬಾ ಮಣ್ಣು ತುಂಬಿದ್ದು, ಪುರಸಭೆಯವರು ಏನೂ ಮಾಡಲೂ ತೋಚದೆ ಸುಮ್ಮನಾಗಿದ್ದಾರೆ. ಚಿನ್ನ ಬೆಳ್ಳಿ ವ್ಯಾಪಾರಿಗಳು ಅಂಗಡಿಯ ದೂಳು ಒರೆಸಲು ಒಬ್ಬ ನೌಕರನನ್ನು ನೇಮಿಸುವ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಅನಗತ್ಯ ವೆಚ್ಚಗಳು ಅಧಿಖವಾಗುತ್ತಿವೆ.
-ನವೀನ್, ತಾಲ್ಲೂಕು ಎಲೆಕ್ಟ್ರಿಕಲ್ ಮತ್ತು ಹಾರ್ಡ್‌ವೇರ್‌ ಅಸೋಸಿಯೇಷನ್‌ ಖಜಾಂಚಿ


ದೂಳಿನ ಗೋಳು
ದ್ವಿ ಚಕ್ರ ವಾಹನ ಸವಾರರು ದೂಳಿನಿಂದ ರಕ್ಷಿಸಿಕೊಳ್ಳಲು ಅರ್ಧ ತೆರೆದ ಕಣ್ಣುಗಳಿಂದ ಕರವಸ್ತ್ರ ಹಿಡಿದು ಗಾಡಿ ಓಡಿಸಬೇಕಿದೆ. ಗುಂಡಿ ಬಿದ್ದ ರಸ್ತೆಗಳಿಗಿಂತಲೂ ಫುಟ್‌ಪಾತ್‌ ಮೇಲು ಎಂದು ವಾಹನ ಸವಾರರು ತೀರ್ಮಾನಿಸಿರುವುದರಿಂದ ಪಾದಚಾರಿಗಳು ಜೀವ ಕೈಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
- ಎನ್.ಜಿ.ಶೇಷಾದ್ರಿ, ಪಾವಗಡ ನಿವಾಸಿ


ಅನುದಾನ ಲಭ್ಯವಿಲ್ಲ
ಪಟ್ಟಣ ವ್ಯಾಪ್ತಿಯ ರಸ್ತೆಗಳು ದುರಸ್ತಿಪಡಿಸಲು ಅಸಾಧ್ಯ ಎನಿಸುವ ಮಟ್ಟಕ್ಕೆ ಹದಗೆಟ್ಟಿವೆ. ಆದರೆ ಲೋಕೋಪಯೋಗಿ ಇಲಾಖೆಯವರು ಪುರಸಭೆಯೇ ರಸ್ತೆ ದುರಸ್ತಿ ಕಾಮಗಾರಿ ನಿರ್ವಹಿಸಬೇಕು ಎಂದು ಪತ್ರ ಬರೆದಿದೆ. ಅನುದಾನದ ಕೊರತೆಯಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿದೆ.
- ರಂಗಸ್ವಾಮಿ, ಪುರಸಭೆ ಮುಖ್ಯಾಧಿಕಾರಿ


ಮೇಲಧಿಕಾರಿಗೆ ಪತ್ರ
ಸರ್ಕಾರದ ಆದೇಶದ ಪ್ರಕಾರ ಪುರಸಭೆಯವರು ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿ ಮಾಡಬೇಕು. ಆದರೆ ಅನುದಾನದ ಕೊರತೆ ಇದೆ ಎಂದು ಪುರಸಭೆ ಅಧಿಕಾರಿ ಹೇಳುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ದುರಸ್ತಿ ಕಾರ್ಯಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಆಂಧ್ರದ ಗಡಿಯಿಂದ ಪಟ್ಟಣದವೆರೆಗಿನ ರಸ್ತೆಯ ಗುಂಡಿ ಮುಚ್ಚುವ ಕೆಲಸ ಈಗಾಗಲೇ ಪ್ರಾರಂಭಿಸಲಾಗಿದೆ.
- ಲೋಕೇಶ್ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT