ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡಿನಲ್ಲಿ ಜ್ಞಾನಪೀಠ ಗಾರುಡಿಗರ ದರ್ಶನ

Last Updated 9 ಜುಲೈ 2012, 7:40 IST
ಅಕ್ಷರ ಗಾತ್ರ

ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಹಾಗೂ ಸಗರ ನಾಡು ಸೇವಾ ಪ್ರತಿಷ್ಠಾನಗಳ ಆಶ್ರಯದಲ್ಲಿ ಗಡಿನಾಡಿನಲ್ಲಿ ಜ್ಞಾನಪೀಠ ಗಾರುಡಿಗರ ದರ್ಶನ ಕಾರ್ಯಕ್ರಮವನ್ನು ಜಿಲ್ಲೆಯ ಗಡಿಭಾಗದ ಗ್ರಾಮೀಣ ಪ್ರೌಢಶಾಲೆಗಳಲ್ಲಿ ಜು. 11ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಚೇರಿಯಲ್ಲಿ   ಭಾನುವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಸಾಹಿತಿಗಳು, ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಳೆದ ವರ್ಷ ಜುಲೈನಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಸುರಪುರದ ವಿವಿಧ ಪ್ರೌಢಶಾಲೆಗಳಲ್ಲಿ ಜ್ಞಾನಪೀಠ ದಿಗ್ಗಜರು ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ಗುರು       ಮಠಕಲ್ ಪಟ್ಟಣ ಹಾಗೂ ಸುತ್ತಲಿನ ಒಟ್ಟು 8 ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರಿಂದ - ಕಂಬಾರರವರೆಗೆ ಈ ಕಾರ್ಯಕ್ರಮಗಳು ನಡೆಯಲಿದ್ದು, ಗಡಿ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಬದುಕು ಬರಹ, ಅವರ ಸಾಹಿತ್ಯಿಕ, ಸಾಂಸ್ಕೃತಿಕ, ಸಾಧನೆ, ಗಡಿ ಭಾಗದಲ್ಲಿ ಕನ್ನಡದ ಜಾಗೃತಿ ಮೂಡಿಸಲಾಗುವುದು.

ಭಾಷಾಭಿಮಾನ ಬೆಳೆಸುವುದರ ಜೊತೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಜು.11 ರಂದು ಬೆಳಿಗ್ಗೆ 10.30 ಗಂಟೆಗೆ ಗುರುಮಠಕಲ್ ಖಾಸಾಮಠದ ಸಂಗಮೇಶ್ವರ ಸ್ವಾಮಿ ಸ್ಮೃತಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ  ಕುವೆಂಪು ಕುರಿತು, ಜು 13 ರಂದು ಬೆಳಿಗ್ಗೆ 10.30 ಕ್ಕೆ ಕೊಂಕಲ್‌ನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವರಕವಿ ಡಾ. ದ.ರಾ. ಬೇಂದ್ರೆ ಕುರಿತು, ಜು. 16 ರಂದು ಗುರುಮಠಕಲ್‌ನ ಶಾಂತವೀರ ಸ್ಮೃತಿ ಪ್ರೌಢಶಾಲೆಯಲ್ಲಿ ಕಡಲ ತೀರದ ಭಾರ್ಗವ  ಡಾ. ಶಿವರಾಮ ಕಾರಂತರ ಬಗ್ಗೆ,  ಜು. 20 ರಂದು ಮೋಟ್ನಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುರಿತು, ಜು. 25 ರಂದು ಗಾಜರಕೋಟ್ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ಸಿಂಧು ರಶ್ಮಿಯ  ವಿ.ಕೃ.ಗೋಕಾಕರ ಬಗ್ಗೆ, ಜು. 27 ರಂದು ಪುಟಪಾಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ಅವಲೋಕನ ಲೇಖಕ ಡಾ. ಯು.ಆರ್. ಅನಂತಮೂರ್ತಿ ಕುರಿತು, ಜು. 30 ರಂದು ಚಂಡ್ರಿಕಿ ಸರ್ಕಾರಿ ಪ್ರೌಢಶಾಲೆಯಲ್ಲಿ   ನಾಗಮಂಡಲದ ಗಿರೀಶ ಕಾರ್ನಾಡರ ಕುರಿತು, ಜುಲೈ 31 ರಂದು ಗುರುಮಠಕಲ್‌ನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಜಾನಪದ ಗಾರುಡಿಗ  ಡಾ. ಚಂದ್ರಶೇಖರ ಕಂಬಾರರ ಕುರಿತಾದ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಕರ್ಲಿ, ಮಾಜಿ ಅಧ್ಯಕ್ಷರಾದ ಅಯ್ಯಣ್ಣ ಹುಂಡೆಕಾರ, ವಿ.ಸಿ. ರಡ್ಡಿ, ಬಸವಂತ್ರಾಯಗೌಡ ಮಾಲಿಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT