ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಪ್ರದೇಶ ಅಭಿವೃದ್ಧಿ: ಸರ್ಕಾರ ಆದ್ಯತೆ ನೀಡಲಿ

Last Updated 25 ಜನವರಿ 2012, 9:50 IST
ಅಕ್ಷರ ಗಾತ್ರ

ಮುಳಬಾಗಲು: ಗಡಿ ಭಾಗದಲ್ಲಿರುವ ತಾಲ್ಲೂಕು ಮತ್ತು ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಅಭಿವೃದ್ಧಿಗೆ ಮೀಸಲಿರಿಸಿದ ಅನುದಾನ ಸದ್ಬಳಕೆ ಆಗಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಖಚಾಂಚಿ ಪುಂಡಲೀಕ ಹಾಲಂಬಿ ಅಭಿಪ್ರಾಯಪಟ್ಟರು.

ನಗರದ ಡಿ.ವಿ.ಜಿ. ರಂಗಮಂದಿರದಲ್ಲಿ ಪರಿಷತ್ತಿನ ತಾಲ್ಲೂಕು ಘಟಕ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಮೊದಲನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳು ಅವುಗಳ ವ್ಯಾಪ್ತಿಯಲ್ಲಿರುವ ಗಡಿ ಪ್ರದೇಶ, ಹಳ್ಳಿಗಳ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡುತ್ತವೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತವೆ. ಶಾಲೆ, ರಸ್ತೆ, ಸರ್ಕಾರಿ ಕಟ್ಟಡಗಳೂ ಸೇರಿದಂತೆ ಎಲ್ಲವನ್ನೂ ಅಭಿವೃದ್ಧಿಗೊಳಿಸುತ್ತವೆ. ಒಟ್ಟಾರೆಯಾಗಿ ರಾಜ್ಯದ ಜನ ಬೇರೆ ಕಡೆಗೆ ವಲಸೆ ಹೋಗದಂಥ ವಾತಾವರಣವನ್ನು ಸೃಷ್ಟಿಮಾಡುತ್ತವೆ. ಕರ್ನಾಟಕದಲ್ಲೂ ಇದೇ ಬಗೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.

ಮುಳಬಾಗಲು ಗಡಿ ತಾಲ್ಲೂಕು. ತೆಲುಗು ಸೇರಿದಂತೆ ಬೇರೆ ಭಾಷಿಕರ ಪ್ರಭಾವ ಒತ್ತಡಗಳು ಹೆಚ್ಚಿದೆ. ಈ ಜಾಗದಲ್ಲೆ ಕನ್ನಡವನ್ನು ಕಟ್ಟುವ ಕೆಲಸವೂ ನಡೆಯಬೇಕು. ಸಾಹಿತ್ಯ ಸಮ್ಮೇಳನಗಳು ಈ ಕೆಲಸವನ್ನು ಮಾಡಬಲ್ಲವು. ತಾಲ್ಲೂಕಿನ ಅಂಚಿನಲ್ಲಿರುವ  ಹಳ್ಳಿಗಳು ಉತ್ತಮ ಸ್ಥಿತಿಯಲ್ಲಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ವಿನಿಯೋಗವಾಗಿಲ್ಲ ಎಂದು ಆರೋಪಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ಅಮರೇಶ್ ಮಾತನಾಡಿ, ಸಮ್ಮೇಳನದಲ್ಲಿ ನೀಡಲಾಗುವ ಅಭಿವೃದ್ಧಿಪರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಸಾಹಿತ್ಯ ಸಂಪರ್ಕ: ವಿಶ್ವವೃಕ್ಷದ ಕೊಂಬೆಯಲ್ಲಿ ಹೂ- ಹಣ್ಣುಗಳು ಬೆಳೆಯಬೇಕಾದರೆ ಸಾಹಿತ್ಯ ಸಂಪರ್ಕ ಅನಿವಾರ್ಯವಾದದ್ದು ಎಂದು ಸಮ್ಮೇಳನಾಧ್ಯಕ್ಷ ಕೆ.ಆರ್.ನರಸಿಂಹನ್ ಹೇಳಿದರು. 

  ಸಾಹಿತ್ಯ ಸಮ್ಮೇಳನಗಳು ಜನ ಸಮುದಾಯದಲ್ಲಿ ನಂಬಿಕೆಯನ್ನು ಉಂಟು ಮಾಡಿ ಪ್ರಾಮಾಣಿಕ ಪ್ರಯತ್ನಗಳಿಗೆ ನಾಂದಿಯಾಗಬೇಕು ಎಂದು ಆಶಿಸಿದರು.

ಕನ್ನಡ ಭಾಷೆ- ಸಾಹಿತ್ಯ- ಸಂಸ್ಕೃತಿಯ ಏಳಿಗೆಗಾಗಿ ನಿರಂತರವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮುಳಬಾಗಲಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಮುಂದಿನ ದಿನಗಳಲ್ಲಿ ಕನ್ನಡ ನಾಡು ನುಡಿಗಳ ಪರಂಪರೆಗೆ ದಾರಿ ದೀಪವಾಗಿ ಬೆಳಗಲಿ ಎಂದು ಹಾರೈಸಿದರು.

ಮುಳಬಾಗಲಿನ ಚಾರಿತ್ರಿಕ ಮತ್ತು ಪೌರಾಣಿಕ, ಜಾನಪದ ಅಂಶಗಳ ಮಹತ್ವದ ಬಗ್ಗೆ ಗಮನ ಸೆಳೆದ ಅವರು, ಲೇಖರಾದ ಡಿವಿಜಿ, ಕೆ.ವಿ. ಅಯ್ಯರ್, ಉತ್ತನೂರು ರಾಜಮ್ಮ, ಚಂದ್ರಶೇಖರ ನಂಗಲಿ, ಎಚ್.ಎ.ಪುರುಷೋತ್ತಮರಾವ್, ಸ್ವಾತಂತ್ರ್ಯ ಹೋರಾಟಗಾರ ಮೋತಕಪಲ್ಲಿ ಎಂ. ಕೃಷ್ಣಪ್ಪ, ಹೆಬ್ಬಣಿ ನಾಗಪ್ಪ ಮೊದಲಾದವರನ್ನು ಉಲ್ಲೇಖಿಸಿದರು.

ಸಮ್ಮೇಳನದ ಗೌರವಾಧ್ಯಕ್ಷ ಯು.ವಿ. ನಾರಾಯಣಾಚಾರ್, ತಹಶೀಲ್ದಾರ್ ಪಿ. ಜಯಮಾಧವ, ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಚಾಂದ್‌ಪಾಷ, ಜೆಮಿನಿ ಡಾ.ರಮೇಶ್, ಎಂ.ಶಿವಣ್ಣ, ಮಂಜುಕನ್ನಿಕಾ, ರಾಮಮೂರ್ತಿ ನಾಯುಡು, ವಿ.ವಿ.ವೆಂಕಟೇಶಪ್ಪ, ಶಿವಶಂಕರರಾವ್, ಪಟೇಲ್‌ಪಾಂಡು, ಗೋಪಾಲ್, ಅಪ್ಪಿ, ವೆಂಕಟೇಗೌಡ, ಕಿಕ್ಕೇರಿ ಪ್ರಕಾಶ್ ವೇದಿಕೆಯಲ್ಲಿದ್ದರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯರು ನಾಡಗೀತೆ ಹಾಡಿದರು. ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿಯರು ಹಚ್ಚೇವು ಕನ್ನಡ ದೀಪ ಹಾಡನ್ನು ಹಾಡಿದರು.

ಬರೆದದ್ದೆಲ್ಲ ಕವಿತೆಯಲ್ಲ: ರಮೇಶ್
ಕಾವ್ಯದ ಹೆಸರಿನಲ್ಲಿ ಬರೆದದ್ದೆಲ್ಲ ಕವಿತೆಯಾಗುವುದಿಲ್ಲ ಎಂಬ ಎಚ್ಚರ ಇಂದು ಅತ್ಯಗತ್ಯ ಎಂದು ಸಹಪ್ರಾಧ್ಯಾಪಕ ಸಿ.ಎ.ರಮೇಶ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬರೆಯುವವರೂ ಹೆಚ್ಚಾಗುತ್ತಿದ್ದಾರೆ. ಆದರೆ ನಿಜವಾದ ಕಾವ್ಯಗುಣವುಳ್ಳ ರಚನೆಗಳು ವಿರಳವೆಂದೇ ಹೇಳಬೇಕಾಗಿದೆ ಎಂದರು.

ಕನ್ನಡ ಕಾವ್ಯ ಪರಂಪರೆಯಲ್ಲಿ ಹಲವು ಉತ್ತಮ ಕಾವ್ಯ ಕೃತಿಗಳಿವೆ. ಛಂದಸ್ಸಿನ ಚೌಕಟ್ಟಿನಲ್ಲಿಯೂ ಉತ್ತಮ ಕಾವ್ಯ ಬಂದಿದೆ. ಆಡು ಮಾತಿನಲ್ಲೆ ಅತ್ಯುತ್ತಮ ಕಾವ್ಯವನ್ನು ವಚನಕಾರರು ನೀಡಿದ್ದಾರೆ. ಅಂಥ ಪ್ರಯೋಗಶೀಲತೆಯನ್ನು ಇಂದಿನ ಕವಿಗಳು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾ.ವೆಂಕಟಕೃಷ್ಣಯ್ಯ, ಮಂಜುಕನ್ನಿಕಾ, ಸುಲೇಮಾನ್ ಖಾನ್, ಎ.ಪಿ.ರಾಜೇಶ್ವರಿ, ಡಾ.ಎಂ.ಎನ್.ಮೂರ್ತಿ, ಎಸ್.ಬಿ.ಆಚಾರ್, ರಾಧಿಕ, ಕವಿತ, ನಲ್ಲೂರು ಚಲಪತಿ, ರಾಧಪ್ರಕಾಶ್, ಕೇಶವಗಂಗಾಧರ ಮೂರ್ತಿ, ಗಂಗಪ್ಪ ತಳ್ವಾರ್, ಜನ್ನಘಟ್ಟ ನಾರಾಯಣಪ್ಪ, ಶ್ಯಾಮಲ, ವಿ.ಡಿ.ದೇಶಪಾಂಡೆ, ಕೆ.ಎಸ್.ಚಂದ್ರಶೇಖರಯ್ಯ, ಪಿ.ನಾರಾಯಣಪ್ಪ ಮತ್ತು ಕುಂತೂರು ಚಂದ್ರಪ್ಪ ಕವಿತೆ ಓದಿದರು. ಲೇಖಕಿ ಉತ್ತನೂರು ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಜೆ.ಜಿ.ನಾಗರಾಜ್, ಲೇಖಕಿ ಎಂ.ಕೆ.ವನಜಾಕ್ಷಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT