ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಂಚಿನ ಗ್ರಾಮ: ಸಮಸ್ಯೆ ಹತ್ತಾರು

Last Updated 24 ಸೆಪ್ಟೆಂಬರ್ 2013, 6:55 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಕಾಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜಿಲ್ಲೆಯ ಗಡಿಯಂಚಿನಲ್ಲಿರುವ ಯರಿ­ಗೋನಾಳ ಗ್ರಾಮದ ಪರಿಶಿಷ್ಟರ ಕಾಲೊನಿ­ಯಲ್ಲಿ ಶುದ್ಧ ಕುಡಿಯುವ ನೀರು, ಪರಿಸರ ನೈರ್ಮಲ್ಯ ಸೇರಿದಂತೆ ಇತರೆ ಯಾವುದೇ ಮೂಲಸೌ­ಕರ್ಯ­ಗಳಿಲ್ಲದೆ ನರಕಯಾತನೆ ಅನುಭವಿಸುತ್ತಿ­ದ್ದಾರೆ.

ಅನೇಕ ತಿಂಗಳುಗಳಿಂದಲೂ ಇಲ್ಲಿಯ ಸಮಸ್ಯೆಗಳ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ­ಗಳು, ಚುನಾಯಿತ ಪ್ರತಿನಿಧಿಗಳ ಗಮ­ನಕ್ಕೆ ತಂದರೂ ಯಾರೂ ಇತ್ತ ಗಮ­ನಹರಿಸಿಲ್ಲ ಎಂದು ಅಲ್ಲಿಯ ನಿವಾಸಿಗಳು  ಬುಧವಾರ ಇಲ್ಲಿ ದೂರಿದ್ದಾರೆ.

ಕಾಲೊನಿಯ ರಸ್ತೆಗಳು ಅಭಿವೃದ್ಧಿ­ಗೊಂಡಿಲ್ಲ. ಪಂಚಾಯಿತಿ ದಾಖಲೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಾ­ಗಿದ್ದರೂ ಕೆಸರು ಗದ್ದೆಯಂತಾಗಿವೆ. ಅಲ್ಲಲಿ ಗುಂಡಿಗಳು ಬಿದ್ದು ಜನರು, ಶಾಲಾ ಮಕ್ಕಳು, ವೃದ್ಧರು ಹಗಲು ಹೊತ್ತಿನಲ್ಲೇ ನಡೆದಾಡುವುದು ದುಸ್ತ­ರದ ಸಂಗತಿಯಾಗಿದೆ ಎಂದಿದ್ದಾರೆ.

ಪರಿಶಿಷ್ಟರ ಜನವಸತಿ ಪ್ರದೇಶದ ಸುತ್ತಲೂ ತಿಪ್ಪೆಗುಂಡಿಗಳು ಇದ್ದು ಕೊಳಚೆ ನೀರು ಮಡುಗಟ್ಟಿ ಸೊಳ್ಳೆಗಳ ಸಂತತಿ ಹೆಚ್ಚಿದೆ. ಪಕ್ಕದಲ್ಲೇ ಸಾಮೂಹಿಕ ಶೌಚಾಲಯ ಇದ್ದು ಮಳೆ ಬಂದರೆ ಅದರ ತ್ಯಾಜ್ಯವೆಲ್ಲ ಕಾಲೊನಿಗೆ ಹರಿ­ಯು­ತ್ತದೆ. ಸುತ್ತಲೂ ಜನ ಬಯ­ಲಿನಲ್ಲೇ ಮಲವಿಸರ್ಜನೆ ಮಾಡುತ್ತಿದ್ದರೆ ಮನೆಯಲ್ಲಿ ನಾವು ನೆಮ್ಮದಿಯಿಂದ ಊಟ ಮಾಡಲೂ ಸಾಧ್ಯವಿಲ್ಲದಂತಾ­ಗಿದೆ. ಇಡೀ ವಾತಾವರಣ ಮಲೀನ­ಗೊಂಡಿರುವುದರಿಂದ ಬದುಕು ಅಸಹನೀಯವಾಗಿದೆ ಎಂದು ಅಲ್ಲಿಯ ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ.

ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು ದೂರದ ಬಾಗಲ­ಕೋಟೆ ಜಿಲ್ಲೆಯ ನಾಗೂರು ಗ್ರಾಮಕ್ಕೆ ಹೋಗಿ ತರುವ ಅನಿವಾರ್ಯತೆ ಇದೆ. ಕಿರು ನೀರುಪೂರೈಕೆ ಇದ್ದರೂ ಟ್ಯಾಂಕ್‌­ನಲ್ಲಿ ಇಲಿ ಹಕ್ಕಿಗಳು ಬಿದ್ದು ಕೊಳೆತಿರು­ವುದರಿಂದ ಕುಡಿಯಲು ಯೋಗ್ಯವಾ­ಗಿಲ್ಲ. ಒಂದು ಕೈಪಂಪು ಇದ್ದರೂ ತುಕ್ಕು ಹಿಡಿದು ನೀರು ಬಳಕೆಗೂ ಬಾರದಂತಾ­ಗಿದೆ. ಊರಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿರುವುದರಿಂದ ನೀರಿಗಾಗಿ ಹೋದರೆ ಇತರೆ ಜನ ಅವಕಾಶ ನೀಡುವುದಿಲ್ಲ ಎಂದರು.

ಜನ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ­ಗಳನ್ನು ನೆರವೇರಿಸು­ವುದಕ್ಕೆ ಅವಶ್ಯವಾಗಿರುವ ಸಮು­ದಾಯ ಭವನ ಹಾಳಾಗಿವೆ, ಇತರೆ ಸರ್ಕಾರಿ ಕಟ್ಟಡಳು ದುರಸಿ್ತಯಾಗಿಲ್ಲ. ಯಾವುದೇ ಸೌಲಭ್ಯಗಳು ಇಲ್ಲದಿ­ರುವುನ್ನು ಗಮನಿಸಿದರೆ ನಮಗೆ ಇನ್ನೂ ಸ್ವಾತಂತ್ರ್ಯ ಲಭಿಸಿಲ್ಲ ಎಂಬಂತೆ ಭಾಸವಾಗುತ್ತದೆ ಎಂದು ನಿವಾಸಿಗಳು ಅಸಮಾಧಾನ ತೋಡಿಕೊಂಡರು.

ಇಂಥ ಸಮಸ್ಯೆಗಳನ್ನು ಮುಂದಿಟ್ಟು­ಕೊಂಡು ಆ.7ರಂದು ಕಾಟಾಪುರ ಗ್ರಾ.ಪಂ ಮುಂದೆ ಧರಣಿ ನಡೆಸಿದಾಗ ಅಲ್ಲಿಗೆ ಆಗಮಿಸಿದ್ದ ತಾ.ಪಂ ಕಾರ್ಯ­ನಿರ್ವಹಣಾಧಿಕಾರಿ ಒಂದು ವಾರ­ದೊಳಗೆ ಸಮಸ್ಯೆಗಳನ್ನು ಬಗೆಹರಿಸುವು­ದಾಗಿ ಹೇಳಿದ್ದರು. ಅಲ್ಲದೇ ಎಲ್ಲ ಬೇಡಿಕಗಳಿಗೆ ಸ್ಪಂದಿಸುವುದಾಗಿ ಅಭಿವೃದ್ಧಿ ಅಧಿಕಾರಿಯೂ ಹೇಳಿದ್ದರು. ಆದರೆ ಒಂದು ತಿಂಗಳಾದರೂ ನೀಡಿದ ಭರವಸೆಯನ್ನು ಅಧಿಕಾರಿಗಳು ಮರೆತಿದ್ದಾರೆ ಎಂದು ದೂರಿದರು.

ಕಾಲ ಬದಲಾಗಿದೆ, ಮನಃಸ್ಥಿತಿ  ಬದಲಾಗಿಲ್ಲ
ಪರಿಶಿಷ್ಟರ ಕಾಲೊನಿಯಲ್ಲಿ ನೀರಿಲ್ಲ ಎಂದು ಊರೊಳಗೆ ಹೋದರೆ ಅಲ್ಲಿಯ ಜನ ತಿರಸ್ಕಾರದಿಂದ ನೋಡುತ್ತಾರೆ, ಇಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಕಾಲ ಬದಲಾದರೂ ಜನ ಬದಲಾಗಿಲ್ಲ. ಗ್ರಾಮಸ್ಥರ ಮನಃಸಿ್ಥಿತಿ ಬದಲಾಗಿಲ್ಲ. - ನಾಗರಾಜ ವಜ್ರದ. ಗ್ರಾಮಸ್ಥ

ಮನಿ ಪಕ್ಕ ಹೊಲಸು
‘ನೋಡ್ರಿ ಮನ್ಯಾಗ ಉಣ್ಣಾಕ ಕುಂತ್ರ ಅಕ್ಕಪಕ್ಕ ಊರಾಗಿನ ಜನಾ ಬಂದು ಅಲ್ಲೇ ಹೊಲಸು ಮಾಡ್ತಾರ, ನಾವೂ ಮನುಷ್ಯರು ಹೌದೊ ಅಲ್ವೊ ನಮ್ಮ ಜೀವ್ನ ನರಕಾಗೇತ್ರಿ - ಶಿವಾನಂದ ಮಾದರ, ದುರಗಪ್ಪ ಹೊಸಮನಿ
ಕಾಲೊನಿ ನಿವಾಸಿಗಳು

ಅಗತ್ಯ ಕ್ರಮ ಕೈಗೊಳ್ಳುತ್ತೇವೆ
ಮೂಲಸೌಲಭ್ಯಗಳ ಕೊರತೆ ಬಗ್ಗೆ ಜನ ಪ್ರತಿಭಟಿಸಿದ್ದರು. ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಅಭಿವೃದ್ಧಿ ಅಧಿಕಾರಿಗೆ ಹೇಳಿದ್ದೆ. ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪಿಡಿಒರಿಂದ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. -
ಸಿ.ಬಿ.ಮ್ಯಾಗೇರಿ,
ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT