ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಭರ್ಜರಿ ಮೇಳ

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು, ಧಾರವಾಡ ಮತ್ತು ಪುಣೆಗಳಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ಕೃಷಿ ಮೇಳ ಗಡಿನಾಡಿನ ಕೃಷಿಕರ ಮನೆಯಂಗಳಕ್ಕೂ ಬಂದಿದೆ. ಕೃಷಿ ಇಲಾಖೆ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆಯ ಕೇರೂರ ಗ್ರಾಮದ ವ್ಯಾಪ್ತಿಯಲ್ಲಿ ಚಿಕ್ಕೋಡಿಯ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆಯೋಜಿಸಿದ್ದ ಮೂರು ದಿನಗಳ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಮಟ್ಟದ ಭವ್ಯ ಕೃಷಿ ಮೇಳ ಈ ಭಾಗದ ರೈತರಲ್ಲಿ ಪ್ರಗತಿಪರ ಚಿಂತನೆಗೆ ಪ್ರೇರಣೆ ನೀಡಿತು.

ಕೃಷಿಕರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಕುರಿತು ಅಗತ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ  ಮೇಳದಲ್ಲಿ ದೇಶ ವಿದೇಶದ ನಾನಾ ಕಂಪೆನಿಗಳ ಅತ್ಯಾಧುನಿಕ ತಾಂತ್ರಿಕತೆಯ ಕೃಷಿ ಉಪಕರಣಗಳು, ಬಿತ್ತನೆ ಬೀಜಗಳು, ಸೌರಶಕ್ತಿ ಆಧಾರಿತ ಕೃಷಿ ಸಾಧನಗಳು, ಗೃಹೋಪಯೋಗಿ ವಸ್ತುಗಳು ಸಾರ್ವಜನಿಕರನ್ನು ಬಹುವಾಗಿ ಆಕರ್ಷಿಸಿದವು. ಬಗೆಬಗೆಯ ಫಲಪುಷ್ಪ ಪ್ರದರ್ಶನ ಮಳಿಗೆಗಳು ಕೃಷಿಕರಿಗೆ ಹೆಚ್ಚಿನ ಮಾಹಿತಿ ನೀಡಿದವು.

ಮೇಳದಲ್ಲಿ ಕಬ್ಬು ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿಗಳು, ಕಬ್ಬು ಬೆಳೆಗೆ ಪರ್ಯಾಯವಾಗಿ ಅರಿಶಿಣ, ದ್ರಾಕ್ಷಿ ಹಾಗೂ ಇತರ ತೋಟಗಾರಿಕೆ ಬೆಳೆ ಬೆಳೆಯುವ ಮಾಹಿತಿ, ಸವಳು-ಜವಳು ಭೂಮಿ ನಿರ್ವಹಣೆ, ಕಟಾವು ನಂತರದ ತಂತ್ರಜ್ಞಾನ, ಕಡಿಮೆ ಖರ್ಚಿನ ಕೃಷಿ ತಾಂತ್ರಿಕತೆ, ಆಹಾರ ಸಂಸ್ಕರಣ ಪದ್ಧತಿ, ಜೈವಿಕ ತಂತ್ರಜ್ಞಾನಗಳ ಕುರಿತು ಕೃಷಿ ತಜ್ಞರು ಮತ್ತು ಸಾಧಕರೊಂದಿಗೆ ಚಿಂತನ-ಮಂಥನ ನಡೆಯಿತು. 30ಕ್ಕೂ ಹೆಚ್ಚು ಬ್ಯಾಂಕುಗಳು, ಸಹಕಾರಿ ಸಂಘ ಸಂಸ್ಥೆಗಳು ತಮ್ಮಲ್ಲಿನ ರೈತಪರ ಯೋಜನೆಗಳ ಕುರಿತು ಮಾಹಿತಿ ನೀಡಿದವು. ವಿಮೆ ಕಂಪೆನಿಗಳೂ ಭಾಗವಹಿಸಿದ್ದವು.

ಕೆಎಲ್‌ಇ ವೈದ್ಯ ಕಾಲೇಜಿನ 100ಕ್ಕೂ ಹೆಚ್ಚು ವೈದ್ಯರ ತಂಡ ಮೂರೂ ದಿನ 10 ಸಾವಿರಕ್ಕೂ ಹೆಚ್ಚು ಕೃಷಿಕರ ಉಚಿತ ಆರೋಗ್ಯ ತಪಾಸಣೆ ನಡೆಸಿ, ಐದು ಲಕ್ಷ ರೂ.ಗಳ ಮೌಲ್ಯದ ಔಷಧಿಯನ್ನೂ ಉಚಿತವಾಗಿ ವಿತರಿಸಿತು. ಇದಲ್ಲದೆ ಕೃಷಿಕರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣದ ಕುರಿತು ಅಗತ್ಯ ಮಾರ್ಗದರ್ಶನ ನೀಡಲಾಯಿತು. ಮೇಳದಲ್ಲಿ ನಡೆದ ಜಾನುವಾರುಗಳ ಜಾತ್ರೆಯಲ್ಲಿ ನಾನಾ ತಳಿಯ ಹೋರಿ, ಕುದುರೆ, ಹೋತ, ಮೇಕೆ, ನಾಯಿಗಳು ಪ್ರದರ್ಶನಗೊಂಡು ರೈತರ ಗಮನ ಸೆಳೆದವು.
 
ಮೂರು ದಿನ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಿದವು.ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನ ಪಾಲ್ಗೊಂಡರು. ಎರಡು ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಯಿತು ಎಂದು ಅಂದಾಜು.

`ಪ್ರಥಮ ಮೇಳದಲ್ಲಿಯೇ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆ ದೊರೆತಿರುವುದರಿಂದ ಖುಷಿಯಾಗಿದೆ. ಮುಂಬರುವ ವರ್ಷಗಳಲ್ಲಿ ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಮೇಳವನ್ನು ಸಂಘಟಿಸುತ್ತೇವೆ~ ಎಂದವರು ಕಾರ್ಖಾನೆ ಅಧ್ಯಕ್ಷ, ಮಹಾಂತೇಶ ಕವಟಗಿಮಠ ಮತ್ತು ನಿರ್ದೇಶಕ ಅಮೀತ ಕೋರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT