ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವು ಮುಗಿದರೂ ಮುಗಿಯದ ವರ್ಗಾವಣೆ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಘೋಷಣೆಯ ಪ್ರಕಾರ ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ಅವಧಿ ಆಗಸ್ಟ್ 31ಕ್ಕೆ ಕೊನೆಗೊಂಡಿದೆ. ಆದರೆ, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು, ನೌಕರರ ವರ್ಗಾವಣೆ ಆದೇಶಗಳು ಇನ್ನೂ ಹೊರಬೀಳುತ್ತಲೇ ಇವೆ.

ಆಯಾ ಇಲಾಖೆಗಳಲ್ಲಿ ಇರುವ ಒಟ್ಟು ನೌಕರರಲ್ಲಿ ಶೇಕಡ 5ಕ್ಕಿಂತ ಕಡಿಮೆ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ಸಚಿವರಿಗೆ ನೀಡಿ ಜೂನ್ 7ರಂದು ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಜೂನ್ 11ರಿಂದ ಆರಂಭವಾದ ವರ್ಗಾವಣೆ ಪ್ರಕ್ರಿಯೆ ಜೂನ್ 30ರೊಳಗೆ ಪೂರ್ಣಗೊಳ್ಳಬೇಕಿತ್ತು.
 

ಆದರೆ, ಗಡುವು ವಿಸ್ತರಿಸುವಂತೆ ಹಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದರು. ಆಗ, ಜುಲೈ ಅಂತ್ಯದವರೆಗೂ ಅವಧಿ ವಿಸ್ತರಿಸಲಾಗಿತ್ತು. ನಂತರ ಸಚಿವರ ಜೊತೆ ಶಾಸಕರೂ ಸಾಮಾನ್ಯ ವರ್ಗಾವಣೆ ಅವಧಿ ವಿಸ್ತರಣೆಗೆ ಒತ್ತಾಯಿಸಿದ್ದರು. ಬಳಿಕ ಆಗಸ್ಟ್ 31ರವರೆಗೂ ಅವಧಿ ವಿಸ್ತರಿಸಿ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದರು. ಆದರೆ, ಇನ್ನೂ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ. ಬುಧವಾರ ಕೂಡ ಕೆಲವು ಇಲಾಖೆಗಳಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳು ಮತ್ತು ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕೆಲವು ಇಲಾಖೆಗಳಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಆದೇಶಕ್ಕೆ ಸಿದ್ಧವಾಗಿರುವ ನೂರಾರು ಕಡತಗಳು ಸಚಿವರ ಸಹಿಗೆ ಕಾದಿವೆ.

`ಕೆಲ ಸಚಿವರು ಪ್ರವಾಸದಲ್ಲಿದ್ದಾರೆ. ವರ್ಗಾವಣೆಗೆ ಸಂಬಂಧಿಸಿದಂತೆ ಸಿದ್ಧವಾಗಿರುವ ಕಡತಗಳಿಗೆ ಅವರು ಸಹಿ ಮಾಡಿಲ್ಲ. ಈ ಕಾರಣದಿಂದ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಇನ್ನೂ ಕೆಲವು ನೌಕರರನ್ನು ವರ್ಗಾವಣೆ ಮಾಡುವಂತೆ ಕೋರಿ ಹಲವು ಶಾಸಕರು ಬುಧವಾರವೂ ಸಚಿವರ ಕಚೇರಿಗಳಿಗೆ ಪತ್ರಗಳನ್ನು ನೀಡಿದ್ದಾರೆ. ಈಗಾಗಲೇ ಆಗಿರುವ ವರ್ಗಾವಣೆಗಳಲ್ಲಿ ಮಾರ್ಪಾಡು ಮಾಡುವಂತೆಯೂ ಕೋರಿ ಕೆಲವರು ಮನವಿ ಸಲ್ಲಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಶಾಸಕರ ಒತ್ತಡದ ಭಾರ: ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವರು ತಮ್ಮ ಪತ್ರಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಕೆಲವರು ಹರಿಹಾಯ್ದಿದ್ದರು. ಮುಖ್ಯಮಂತ್ರಿಯವರ ಮಧ್ಯಪ್ರವೇಶಕ್ಕೂ ಒತ್ತಾಯಿಸಿದ್ದರು. ಬಳಿಕ, ಸ್ಥಳೀಯ ಶಾಸಕರ ಶಿಫಾರಸನ್ನು ಮೀರಿ ಹೊರಡಿಸಿದ್ದ ಕೆಲವು ವರ್ಗಾವಣೆ ಆದೇಶಗಳನ್ನು ಹಿಂದಕ್ಕೆ ಪಡೆಯಲಾಗಿತ್ತು.

ಈಗ ಆ.31ರ ನಂತರವೂ ಶಾಸಕರು ವರ್ಗಾವಣೆಗೆ ಶಿಫಾರಸು ಪತ್ರಗಳನ್ನು ನೀಡುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಗಡುವು ಮುಗಿದ ಬಳಿಕವೂ ವರ್ಗಾವಣೆ ಆದೇಶ ಹೊರಡಿಸುತ್ತಿರುವುದನ್ನು ತಡೆಯಲಾಗದ ಸ್ಥಿತಿಯಲ್ಲಿ ಮುಖ್ಯಮಂತ್ರಿಯವರು ಒತ್ತಡಕ್ಕೆ ಸಿಲುಕಿದ್ದಾರೆ. ಮತ್ತೆ ಶಾಸಕರು ಸಿಟ್ಟಿಗೇಳಬಹುದು ಎಂಬ ಆತಂಕದಿಂದ ಅವರು ವರ್ಗಾವಣೆ ಸ್ಥಗಿತಕ್ಕೆ ಸೂಚನೆ ನೀಡುತ್ತಿಲ್ಲ ಎನ್ನುತ್ತವೆ ಮೂಲಗಳು.

ಮುಖ್ಯಮಂತ್ರಿಗೆ ಮನವಿ: ತಕ್ಷಣವೇ ಸರ್ಕಾರಿ ನೌಕರರ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಮಾಡಿ ಮನವಿ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಬೈರಪ್ಪ ತಿಳಿಸಿದ್ದಾರೆ.

`ಇನ್ನೂ ವರ್ಗಾವಣೆ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳು ಆರಂಭವಾದರೂ ಸಾಮಾನ್ಯ ವರ್ಗಾವಣೆ ಮುಂದುವರಿದಿರುವುದು ಸರಿಯಲ್ಲ. ಇದರಿಂದ ಸರ್ಕಾರದ ದಿನನಿತ್ಯದ ಕೆಲಸಗಳಿಗೂ ಅಡ್ಡಿಯಾಗುತ್ತದೆ. ನೌಕರರಿಗೂ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಲು ಕಷ್ಟವಾಗುತ್ತದೆ. ಆದ್ದರಿಂದ ತಕ್ಷಣವೇ ವರ್ಗಾವಣೆ ಸ್ಥಗಿತಕ್ಕೆ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ' ಎಂದು ಅವರು ತಿಳಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಎಂಜಿನಿಯರುಗಳನ್ನು ವರ್ಗಾವಣೆ ಮಾಡಲಾಗಿದೆ. ಪದವಿ ಕಾಲೇಜುಗಳ 300ಕ್ಕೂ ಹೆಚ್ಚು ಉಪನ್ಯಾಸಕರು, ಪಶು ಸಂಗೋಪನಾ ಇಲಾಖೆಯ 300 ನೌಕರರು, 530 ಭೂಮಾಪಕರು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ 250 ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೆ ಸಂಬಂಧಿಸಿದ ಇನ್ನೂ ಹಲವು ಕಡತಗಳು ಬಾಕಿ ಇವೆ ಎಂಬ ಮಾಹಿತಿ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT