ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿ, ಅಭಿವೃದ್ಧಿ ಯೋಜನೆಗಳಿಗೆ ಮೈಲುಗಲ್ಲು

Last Updated 7 ಜನವರಿ 2012, 10:00 IST
ಅಕ್ಷರ ಗಾತ್ರ

ಹನುಮಸಾಗರ: ಭಾರತದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ನಾಡತಸೀಲ್ದಾರ ವೇದವ್ಯಾಸ ಹೇಳಿದರು.

ಗುರುವಾರ ಇಲ್ಲಿನ ಶಾದಿಮಹಲ್‌ನಲ್ಲಿ ನಡೆದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರ ಅಂತಿಮ ಹಂತದ ಆರ್ಥಿಕ ಮತ್ತು ಜಾತಿ ಗಣತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಗಣತಿದಾರರಿಗೆ ಗಣತಿ ಕಿಟ್ ವಿತರಿಸಿ ಮಾತನಾಡಿದರು.

ಈಗಾಗಲೇ ಗಣತಿ ಕಾರ್ಯ ಆರಂಭವಾಗಬೇಕಾಗಿತ್ತು ಆದರೆ ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿಯಲ್ಲಿ ಸ್ವಲ್ಪು ವಿಳಂಬವಾಗಿದ್ದರಿಂದ ತಡವಾಗಿದೆ. ರಾಷ್ಟ್ರದಮಟ್ಟದಲ್ಲಿಯೇ ನಡೆಯುತ್ತಿರುವ ಈ ಗಣತಿಯಲ್ಲಿ ಪ್ರತಿಯೊಂದು ಕುಟುಂಬಗಳ, ಮನೆಗಳ ಗಣತಿ ಕಾರ್ಯ ನಡೆಯುತ್ತದೆ, ಈ ಹಿಂದೆ ಮಾಡಲಾಗಿದ್ದ ಸಂಕ್ಷಿಪ್ತ ಮನೆ ಪಟ್ಟಿ ಹಾಗೂ ಜನಸಂಖ್ಯಾ ರಿಜಿಸ್ಟರ್ ಮಾಹಿತಿಯನ್ನು ಯಥಾವತ್ತಾಗಿ ಟ್ಯಾಬಲೆಟ್ ಪಿ.ಸಿಯಲ್ಲಿ ದಾಖಲಿಸಲಾಗಿದೆ, ಈಗಿರುವ ಮಾಹಿತಿ ಜೊತೆಗೆ ಜಾತಿ ಹಾಗೂ ಸದ್ಯದ ಕುಟುಂಬದ ಆರ್ಥಿಕ ಸ್ಥಾನಮಾನದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಸಾರ್ವಜನಿಕರು ಸರಿಯಾದ ಮಾಹಿತಿಯನ್ನು ನೀಡಿದರೆ ಭಾರತ ಸರ್ಕಾರ ಹಾಕಿಕೊಂಡಿರುವ ಈ ಯೋಜನೆ ಯಶಸ್ವಿಯಾದಂತಾಗುತ್ತದೆ. ಈ ಬಾರಿ ಗಣತಿದಾರರ ಜೊತೆ ಒಬ್ಬ ದತ್ತಾಂಶ ನಮೂದಕರು ಬರುತ್ತಿದ್ದು ಅವರ ಬಳಿ ಇರುವ ಅಂಗೈ ಅಗಲದ ಟ್ಯಾಬ್ಲೆಟ್ ಪಿ.ಸಿ ಉಪಕರಣದಲ್ಲಿ ಗಣತಿ ಮಾಡುವ ಸ್ಥಳದಲ್ಲಿಯೇ ನಮೂದು ಮಾಡುವ ತಂತ್ರಜ್ಞಾನ ಈ ಬಾರಿಯ ಗಣತಿಯಲ್ಲಿ ಬಳಕೆ ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೆ ಗಣತಿಗೆ ಬೇಕಾಗುವ ಸಲಕರಣೆಗಳನ್ನು ನೀಡಲಾಗಿದ್ದು ಅವಶ್ಯ ಕಂಡುಬಂದಿಲ್ಲಿ ಮೇಲ್ವಿಚಾರಕರ ಮೂಲಕ ನಮ್ಮ ಗಮನಕ್ಕೆ ತಂದರೆ ಕೂಡಲೆ ಒದಗಿಸಲಾಗುವುದು, ಗಣತಿದಾರರ ಹಾಗೂ ಮೇಲ್ವಿಚಾರಕರ ಸಮರ್ಪಕ ನೇಮಕಾತಿ ಹಾಗೂ ತರಬೇತಿ ಮುಗಿದಿರುವುದರಿಂದ ಇಷ್ಟರಲ್ಲಿಯೇ ಗಣತಿ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.

ತರಬೇತಿ ಸಂಪನ್ಮೂಲ ವ್ಯಕ್ತಿ ಕಿಶನರಾವ್ ಕುಲಕರ್ಣಿ ಮಾತನಾಡಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯಲ್ಲಿ ಈ ಬಾರಿ ವಿಶೇಷ ಮಾಹಿತಿ ಸಂಗ್ರಹವಾಗಲಿದ್ದು ವಿವಿಧ ಯೋಜನೆಗಳಿಗೆ ಇದು ಬಳಕೆಯಾಗಲಿದೆ.

ಅಲ್ಲದೆ ಇಲ್ಲಿ ಸಂಗ್ರಹವಾಗುವ ಮಾಹಿತಿಯಿಂದ ತಾವು ಪಡೆಯುತ್ತಿರುವ ಸೌಲಭ್ಯಗಳಿಗಾಗಿಯಾಗಲಿ ಹಾಗೂ ಆಸ್ತಿಗಳಿಗಾಗಲಿ ಏನೂ ತೊಂದರೆ ಇಲ್ಲದ ಪ್ರಯುಕ್ತ ಗಣತಿದಾರರು ತಮ್ಮಮನೆಗೆ ಬಂದಾಗ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ತರಬೇತಿಯಲ್ಲಿ ಹನುಮನಾಳ ಹಾಗೂ ಹನುಮಸಾಗರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರೌಢ ಶಾಲಾ ಶಿಕ್ಷಕರು ಹಾಜರಾಗಿದ್ದರು.

ಕಂದಾಯ ನಿರೀಕ್ಷಕರಾದ ಮಹಮ್ಮದ್ ಮುಸ್ತಾಫ್ ಹಾಗೂ ಸೋಮಶೇಖರಯ್ಯ, ಪ್ರಸನ್ನ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಪ್ರಶಾಂತ ನೆಲ್ಲೂರ, ಬಿ.ಎ.ಸಜ್ಜನ, ಗ್ರಾಮ ಲೆಕ್ಕಾಧಿಕಾರಿಗಳಾದ ಕೃಷ್ಣಮೂರ್ತಿ ದೇಸಾಯಿ, ವಾದಿರಾಜ ಕಮಲದಿನ್ನಿ, ಮಹಮ್ಮದ್ ಗೌಸ್, ಶಿವಲೀಲಾ, ಅನಿತಾ, ವೀರೇಶ, ಸಂದೇಶ ಇದ್ದರು.

ಚಂದಾಲಿಂಗಪ್ಪ ಹಳ್ಳೂರ ಸ್ವಾಗತಿಸಿದರು. ಪ್ರಶಾಂತ ನೆಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಸಿದ್ದಪ್ಪ ಹಕ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT