ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿ ಉದ್ದೇಶವೇ ಬುಡಮೇಲು, ಸಂಕಷ್ಟಕ್ಕೆ ಸಫಾಯಿ ಕರ್ಮಚಾರಿಗಳು

ಮಾಹಿತಿ ಸಂಗ್ರಾಹಕರೂ ಇಲ್ಲದೆ, ಕ್ಷೇತ್ರ ಭೇಟಿಯನ್ನೂ ನಡೆಸದೆ ಮಲ ಹೊರುವವರ ಸಮೀಕ್ಷೆಯನ್ನು ಹೇಗೆ ಯಶಸ್ವಿಯಾಗಿ ಪೂರೈಸಲಾಯಿತು?
Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಮಲ ಹೊರುವ ಪದ್ಧತಿಯನ್ನು 1974ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ, ನಂತರ 1993ರಲ್ಲಿ ಭಾರತದಲ್ಲಿ ಕಾನೂನು ತರುವ ಮೂಲಕ ನಿಷೇಧ ಮಾಡಿದ್ದರೂ ಇಂದಿಗೂ ಇದು ಆಚರಣೆಯಲ್ಲಿರುವುದು ತಲೆ ತಗ್ಗಿಸಬೇಕಾದ ಸಂಗತಿ. ಇಡೀ ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ಮಲಹೊರುವವರು ಇದ್ದಾರೆ ಎಂಬುದನ್ನು 2011ರ ಜನಗಣತಿಯು, ಅಂಕಿಅಂಶಗಳ ಸಹಿತ ಖಚಿತಪಡಿಸಿದೆ.

ರಾಜ್ಯದ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಮಲ ಹೊರುವ ವೃತ್ತಿಯಲ್ಲಿರುವ ದಲಿತರ ಸ್ಥಿತಿಗತಿಯನ್ನು ರಾಷ್ಟ್ರೀಯ ವಾಹಿನಿಯೊಂದು ಸಾಕ್ಷಿ ಸಮೇತ ದೇಶದ ಮುಂದಿಟ್ಟ ಮೇಲೆ  ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಮಲ ಹೊರುವವರ ಪುನರ್‌ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆದೇಶ ನೀಡಿತು. ಇದರ ಫಲವಾಗಿ ದೇಶದ 3546 ನಗರ, ಪಟ್ಟಣಗಳಲ್ಲಿ ಪುನರ್ ಸಮೀಕ್ಷೆ ನಡೆಸಲು ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು  ಈ ವರ್ಷದ ಮೇ ತಿಂಗಳ 29ರೊಳಗೆ ಸಮೀಕ್ಷೆ  ಪೂರ್ಣಗೊಳಿಸಬೇಕೆಂಬ ಕಾಲಮಿತಿಯನ್ನೂ ನಿಗದಿಗೊಳಿಸಿತ್ತು. ಈ ಪ್ರಕಾರ, ರಾಜ್ಯದ ಪೌರಾಡಳಿತ ಸಚಿವಾಲಯ ಮತ್ತು ನಗರಾಭಿವೃದ್ಧಿ ಇಲಾಖೆಯ ಜಂಟಿ ನೇತೃತ್ವದಲ್ಲಿ ಈ ಸಮೀಕ್ಷೆಯು ರಾಜ್ಯದಲ್ಲಿ ನಡೆದಿದೆ.

ಮಲ ಹೊರುವವರು ಮತ್ತು ಅವರ ಅವಲಂಬಿತರನ್ನು ಗುರುತಿಸಿ ಪಟ್ಟಿ ಮಾಡುವುದು, ಆ ಕುಟುಂಬಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವುದು ಹಾಗೂ ಪರ್ಯಾಯ ಉದ್ಯೋಗ ಕೈಗೊಳ್ಳಲು ಪೂರಕವಾದ ಕೌಶಲಗಳನ್ನು ಗುರುತಿಸುವುದರ ಜತೆಗೆ ತೆರೆದ ಚರಂಡಿ ಮತ್ತು ಒಣ ಶೌಚಾಲಯಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ನಗರಾಡಳಿತ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಯಿತು. ಸಮೀಕ್ಷೆ ಸಿಬ್ಬಂದಿ ನೇಮಕ, ಜವಾಬ್ದಾರಿಗಳ ಹಂಚಿಕೆ, ಹಮ್ಮಿಕೊಳ್ಳಬೇಕಾದ ಪ್ರಚಾರತಂತ್ರ ಮತ್ತು ಅದಕ್ಕೆ ಬೇಕಾದ ಪ್ರಚಾರ ಸಾಮಗ್ರಿಗಳು ಮತ್ತು ಬಳಸುವ ವಿಧಾನಗಳನ್ನು ವಿವರಿಸಿ ಬೇಕಾದ ಹಣವನ್ನೂ ಮಂಜೂರು ಮಾಡಲಾಗಿದೆ. ಈ ಸಂಬಂಧ ಇಲಾಖೆಗಳು ರಚಿಸಿದ್ದ ತಜ್ಞರ ಸಮಿತಿಯಲ್ಲಿ ಮಲಹೊರುವ ಪದ್ಧತಿಯ ಸಾಮಾಜಿಕ ಆಯಾಮಗಳ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲದ ಎನ್‌ಜಿಓಗಳು ಮತ್ತು ಅಧಿಕಾರಿಗಳು ಮಾತ್ರ ಇದ್ದುದನ್ನು ಈ ಸಮಿತಿಯಲ್ಲಿದ್ದ ಮಹಿಳಾ ಸದಸ್ಯರೊಬ್ಬರೇ ಬಹಿರಂಗಪಡಿಸಿದ್ದರು.

ಮನೆಗಳ ಒಣಶೌಚಾಲಯ, ಮಲದಗುಂಡಿ ಅಥವಾ ತೆರೆದ ಚರಂಡಿ/ಗಟಾರದಲ್ಲಿನ ಸಂಸ್ಕರಿಸದ ಮಲ ಅಥವಾ ರೈಲ್ವೆ ಹಳಿಗಳ ಮೇಲಿನ ಸಂಸ್ಕರಿಸದ ಮಲ ಸ್ವಚ್ಛಗೊಳಿಸುವ ಅಥವಾ ವಿಲೇವಾರಿ ಮಾಡುವ ಅಥವಾ ಹೊತ್ತು ಹೊರಹಾಕುವ ಅಥವಾ ಬೇರಾವುದೇ ರೀತಿ ವಿಲೇವಾರಿಯಲ್ಲಿ ತೊಡಗಿರುವ ಅಥವಾ ಸ್ಥಳೀಯ ಸರ್ಕಾರಿ ಸಂಸ್ಥೆ/ಪ್ರಾಧಿಕಾರಗಳಿಂದ ನೇರ ಅಥವಾ ಗುತ್ತಿಗೆದಾರರ ಮೂಲಕ ನೇಮಕಗೊಂಡಿರುವ ಅಥವಾ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಇದೇ ಕೆಲಸದಲ್ಲಿ ನಿರತವಾಗಿರುವ ಅಥವಾ ಈ ಸಂಸ್ಥೆಗಳ ಮೂಲಕ ನಿಯೋಜಿತಗೊಂಡು ಮಲದ ವಿಲೇವಾರಿಯಲ್ಲಿ ತೊಡಗಿರುವವರು ಮಲ ಹೊರುವ ವೃತ್ತಿಯವರು ಎಂದು ಭಾರತ ಸರ್ಕಾರ ವ್ಯಾಖ್ಯಾನಿಸಿದೆ. ಈ ವ್ಯಾಖ್ಯಾನವನ್ನೇ ಅಲ್ಲಗಳೆಯುವಂತೆ ಸ್ಥಳೀಯಸಂಸ್ಥೆಗಳ ವ್ಯಾಪ್ತಿಗೆ ಬರುವ ನಗರಸಭೆ, ಪುರಸಭೆ ಮತ್ತು ಪಂಚಾಯ್ತಿಗಳು ತಮ್ಮದೇ ಸಂಸ್ಥೆಯಡಿಯಲ್ಲಿ ಗುತ್ತಿಗೆಕಾರ್ಮಿಕರಾಗಿದ್ದುಕೊಂಡು ಕಡಿಮೆ ಸಂಬಳದ ಕಾರಣಕ್ಕೆ ಮಲಬಳಿಯುವ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಮತ್ತು ನೈರ್ಮಲ್ಯಗಾರರನ್ನು ಸಮೀಕ್ಷೆಯಡಿ ತರಲು ಹಿಂದೇಟು ಹಾಕಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಪಾವಗಡದಲ್ಲಿ `ನಾವು ಮಲಹೊರುವ ಕೆಲಸ ಮಾಡುತ್ತಿದ್ದೇವೆ,  ನಮ್ಮನ್ನು ಸಮೀಕ್ಷೆಗೆ ಪರಿಗಣಿಸಿ' ಎಂದು 34 ಮಂದಿ ಗುತ್ತಿಗೆ ಪೌರಕಾರ್ಮಿಕರು  ಸ್ವಯಂಘೋಷಣೆ ಮಾಡಿಕೊಳ್ಳಲು ಮುಂದೆ ಬಂದಾಗಲೂ ಅವರನ್ನು ಸಮೀಕ್ಷೆಗೊಳಪಡಿಸಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ್ದಾರೆ. ಬೆಂಗಳೂರಿನ ಬಿಬಿಎಂಪಿ ನೇರವಾಗಿಯೇ ಸ್ವಘೋಷಣೆ ವ್ಯಾಪ್ತಿಗೆ ಗುತ್ತಿಗೆ ಪೌರಕಾರ್ಮಿಕರನ್ನು ಪರಿಗಣಿಸುವುದಿಲ್ಲ ಎಂದು ನಿರಾಕರಿಸಿದೆ. ಹೋಗಲಿ ಇವರಾದರೂ ಕ್ಷೇತ್ರ ಭೇಟಿ, ಪ್ರದೇಶ ಸಭೆಗಳನ್ನು ನಡೆಸಿ ಸಮೀಕ್ಷೆಗೆ ಮುಂದಾಗಿದ್ದಾರೆಯೇ ಎಂದರೆ ಅದೂ ಇಲ್ಲ. ಜಾಹೀರಾತು ಕೊಟ್ಟಿದ್ದಷ್ಟೇ ಸಮೀಕ್ಷೆ ಎಂದು ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಈ ಬಗ್ಗೆ ಯಾವೊಂದು ಸಣ್ಣ ಜವಾಬ್ದಾರಿಯನ್ನೂ ನಿರ್ವಹಿಸಿಲ್ಲ. ಸಮೀಕ್ಷೆಯು ನಡೆಯುತ್ತಿರುವಾಗಲೇ ಬಳ್ಳಾರಿಯ ಸರ್ಕಾರಿ ಆಸ್ಪತ್ರೆ ಕಿಮ್ಸನ ಮಲದ ಗುಂಡಿಯಲ್ಲಿಯೇ ಇಬ್ಬರು ಮಲಹೊರುವ ದಲಿತರ ಕೆಲಸವನ್ನು ಮಾಧ್ಯಮಗಳು ಸಾಕ್ಷಿ  ಸಹಿತ ಬಯಲಿಗೆಳೆದಿವೆ. ತಮಾಷೆಯೆಂದರೆ ಬಳ್ಳಾರಿಯ ಸಮೀಕ್ಷೆಯಲ್ಲಿ ಒಬ್ಬರೂ ಮಲಹೊರುವವರು ಪತ್ತೆಯಾಗಿಲ್ಲವಂತೆ !?    

ಮೊದಲ ಹಂತದಲ್ಲಿ ಸದರಿ ಸಮೀಕ್ಷೆಗಾಗಿ ರಾಜ್ಯ, ಜಿಲ್ಲೆ ಮತ್ತು ನಗರ-ಪಟ್ಟಣ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಅಧಿಕಾರೇತರರನ್ನು ಒಳಗೊಂಡ ಪ್ರತ್ಯೇಕ ಸಮಿತಿಗಳ್ನು ರಚಿಸಲು ಸೂಚಿಸಲಾಗಿತ್ತು. ರಾಜ್ಯದಲ್ಲಿ ಇಂತಹ ಯಾವುದೇ ಸಮಿತಿ ರಚಿಸಿದ ಆದೇಶವಾಗಲೀ, ಪತ್ರಿಕಾ ಪ್ರಕಟಣೆಗಳಾಗಲೀ ಲಭ್ಯವಿಲ್ಲ. ರಾಜ್ಯ ಸರ್ಕಾರದ ಯಾವುದೇ ಇಲಾಖೆ ವೆಬ್‌ಸೈಟ್‌ನಲ್ಲೂ ಸಹ ಅಂತಹ ದಾಖಲೆಗಳಿಲ್ಲದಿರುವುದು ಗಮನಾರ್ಹ. ಸಮಿತಿಯ ರಚನೆಯೇ ಆಗದೆ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸಮೀಕ್ಷೆಯನ್ನು ಹೇಗೆ ನಡೆಸಿದರು ಎಂಬುದು ಇಲ್ಲಿ ಪ್ರಶ್ನಾರ್ಹ. ಸಮೀಕ್ಷೆಯಲ್ಲಿ ಒಣಶೌಚಾಲಯಗಳನ್ನು ಪತ್ತೆ ಹಚ್ಚಬೇಕೆಂಬ ಆದೇಶವೂ ಇರುವುದರಿಂದ ಈ ಸಮೀಕ್ಷೆಯೂ ನಡೆಯಬೇಕಿತ್ತು. ಆದರೆ ಮಲಹೊರುವವರ ಗಣತಿಯ ಬಗ್ಗೆಯೇ ನಿರ್ಲಕ್ಷ್ಯ ತೋರಿದವರು ಒಣಶೌಚಾಲಯಗಳನ್ನು ಗಣತಿ ನಡೆಸಿಯಾರೇ? ಕ್ಷೇತ್ರ ಭೇಟಿಯನ್ನೇ ನಿರಾಕರಿಸಿ ಕಚೇರಿಯಲ್ಲೇ ಮೊಕ್ಕಾಂ ಹೂಡಿರುವ ಅಧಿಕಾರಿಗಳು ನೆಪಕ್ಕಾದರೂ ಒಂದು ಒಣಶೌಚಾಲಯವನ್ನೂ ಪತ್ತೆಹಚ್ಚಿಲ್ಲ, ಮಲ ಹೊರುವವರ ನೋಂದಣಿಯನ್ನೇ ತಿರಸ್ಕರಿಸಿದ ಪಾವಗಡ ಪುರಸಭೆ ವ್ಯಾಪ್ತಿಯ  ವೈ.ಎನ್. ಹೊಸಕೋಟೆಯಲ್ಲಿ ಗ್ರಾಮಪಂಚಾಯ್ತಿ ಅನುದಾನದಲ್ಲಿಯೇ ಕಾನೂನುಬಾಹಿರವಾಗಿ ಒಣಶೌಚಾಲಯಗಳನ್ನು ನಿರ್ಮಿಸಿ ಅಲ್ಲಿನ ದಿನಗೂಲಿ ಪೌರಕಾರ್ಮಿಕರಿಂದ ಈ ಶೌಚಾಲಯಗಳ ಮಲಮೂತ್ರಗಳನ್ನು ಬರಿಗೈಯಲ್ಲಿ ಅಕ್ರಮವಾಗಿ ಇವತ್ತಿಗೂ ಬಳಿಸಲಾಗುತ್ತಿದೆ.     

2011ರ ಜನಗಣತಿ ಅಂಕಿಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲು ಅನುಸರಿಸಬೇಕಾದ ಕ್ರಿಯೆಗಳ ಕುರಿತು ಮಾರ್ಗದರ್ಶಿಕೆ ಮತ್ತು ಆದೇಶಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ನಗರಾಡಳಿತ ಪ್ರಧಾನ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರದಿಂದ ರವಾನಿಸಲಾಗಿದೆ. ಈ ಮಾರ್ಗದರ್ಶಿಕೆ ಅನುಸಾರವಾಗಿ ಔಪಚಾರಿಕವಾಗಿ ಸಿದ್ಧಗೊಂಡಿರುವ ಕಿರುಹೊತ್ತಿಗೆ ಬಗ್ಗೆ ನಗರ, ಪಟ್ಟಣಗಳ ಮಟ್ಟದಲ್ಲಿ ಅಧಿಕಾರಿಗಳಿಗೇ ಮಾಹಿತಿಯಿಲ್ಲ. ಸ್ಥಳೀಯ ಭಾಷೆಯಲ್ಲಿ ಸಮೀಕ್ಷಾ ಮಾಹಿತಿ ಸಂಗ್ರಹ ಪ್ರಶ್ನಾವಳಿ ಸಿದ್ಧಪಡಿಸಬೇಕು. ದುರಂತವೆಂದರೆ ನಗರ ಪಟ್ಟಣ, ಗ್ರಾಮಮಟ್ಟದಲ್ಲಿ ಈ ಸಮೀಕ್ಷಾ ಪ್ರತಿಗಳು ಲಭ್ಯವೇ ಇಲ್ಲ. ಜೊತೆಗೆ ಮಾಹಿತಿ ಸಂಗ್ರಹಕಾರರ ನೇಮಕವೇ ನಡೆದಿಲ್ಲ. ಸಮೀಕ್ಷಾ ಪ್ರತಿಯೂ ಇಲ್ಲದೆ, ಮಾಹಿತಿ ಸಂಗ್ರಾಹಕರೂ ಇಲ್ಲದೆ, ಕ್ಷೇತ್ರ ಭೇಟಿಯನ್ನೂ ನಡೆಸದೆ ಸಮೀಕ್ಷೆಯನ್ನು ಹೇಗೆ ಯಶಸ್ವಿಯಾಗಿ ಮುಗಿಸಲಾಯಿತು ಎಂಬುದು ಮಿಲಿಯನ್ ಡಾಲರ್ ಯಕ್ಷಪ್ರಶ್ನೆ. 2011ರ ಜನಗಣತಿಯೇ ಅಧಿಕೃತವಾಗಿ ಹೇಳುವಂತೆ ರಾಜಧಾನಿ ಬೆಂಗಳೂರೊಂದರಲ್ಲೇ 56,000 ಮಂದಿ ಮಲಹೊರುವವರು ಇದ್ದಾರೆ. ಆದರೆ ಬೆಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳ ಸಮೀಕ್ಷೆಯಲ್ಲಿ ಒಬ್ಬ ಮಲಹೊರುವ ಕಾರ್ಮಿಕರೂ ಇದುವರೆಗೂ ಸಿಕ್ಕಿಲ್ಲ. ಹಾಗಾದರೆ 2011ರ ಜನಗಣತಿಯಲ್ಲಿ ಸಿಕ್ಕ ಈ 56 ಸಾವಿರ ಮಲಹೊರುವವರು ಎಲ್ಲಿ ಮಟಾಮಾಯವಾದರು ? ಕೇಂದ್ರ ಸರ್ಕಾರದ ಅಧಿಕೃತ ಜನಗಣತಿಯೇ ಇಲ್ಲಿ ಸುಳ್ಳೇ ?    

ಕೇಂದ್ರ ಸರ್ಕಾರದ ಸಮೀಕ್ಷಾ ಅನುಷ್ಠಾನದ ಮಾರ್ಗದರ್ಶಿಕೆ ಮುಖ್ಯಾಂಶಗಳ ಅನುಸಾರ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಬೇಕಿತ್ತು. ಅವುಗಳೆಂದರೆ ಪೂರ್ವಸಿದ್ಧತಾ ಹಂತ, ಮಾಹಿತಿ ಸಂಗ್ರಹಣ ಹಂತ ಮತ್ತು ಮಾಹಿತಿ ಕ್ರೋಡೀಕರಣ ಹಾಗೂ ವರದಿ ಸಿದ್ಧತೆ ಹಂತ. ರಾಜ್ಯದ ಎಲ್ಲಾ 200 ನಗರ ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗಿದೆಯೆಂದು ಅಧಿಕಾರಶಾಹಿಯು ಪ್ರತಿಪಾದಿಸುತ್ತಿದೆ. ಮುದ್ರಣ ಮತ್ತು ಟಿ.ವಿ ವಾಹಿನಿಗಳ ಜಾಹೀರಾತು, ಕರಪತ್ರ, ಭಿತ್ತಿಪತ್ರಗಳ ಮುಖಾಂತರ ಜಿಲ್ಲೆ, ಪಟ್ಟಣ ಮತ್ತು ರಾಜ್ಯಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕಿತ್ತು. ವ್ಯಾಪಕ ಪ್ರಚಾರದ ಪರಿಣಾಮವಾಗಿ ಮಲಹೊರುವವರು ಘೋಷಣಾ ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಕಾರರಿಗೆ ಮಾಹಿತಿ ನೀಡಿ ಘೋಷಿಸಿಕೊಳ್ಳಬೇಕು, ಒಂದು ವೇಳೆ ಮಲಹೊರುವವರು ಯಾರೂ ಸ್ವಯಂ ಘೋಷಣೆ ಮಾಡಿಕೊಳ್ಳಲು ಕೇಂದ್ರಕ್ಕೆ ಬಾರದೇ ಇದ್ದಲ್ಲಿ  ಅವರು ವಾಸಿಸುವ ಪ್ರದೇಶಗಳಿಗೇ ತೆರಳಿ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು.

ಮನೆಮನೆ ಭೇಟಿಯ ಸಮೀಕ್ಷೆಯನ್ನು ರಾಜ್ಯದ ಯಾವೊಂದು ಜಿಲ್ಲೆಯ ಯಾವೊಂದು ಊರಿನಲ್ಲಿಯೂ ಅಧಿಕಾರಿಗಳು ನಡೆಸಿಯೇ ಇಲ್ಲ. ಬದಲಾಗಿ ಮಲಹೊರುವವರನ್ನೇ ಬೆದರಿಸುವ ಕೆಲಸವನ್ನು ಮಾಡಿದ್ದಾರೆ. ಕೆಜಿಎಫ್ ನಗರದಲ್ಲಿ ಮಲ ಹೊರುವವರು ಸಿಕ್ಕರೆ ಜೈಲಿಗೆ ಹಾಕುತ್ತೇವೆಂದು ಆಟೋ ಪ್ರಚಾರ ನಡೆಸಿ ನಂತರ ಸಮೀಕ್ಷೆಗೆ ಮುಂದಾದಾಗ ಜೈಲು ಪಾಲಾಗುವ ಭಯದಿಂದ ಯಾರೊಬ್ಬರೂ ನೋಂದಣಿಯನ್ನೇ ಮಾಡಿಕೊಂಡಿಲ್ಲ. ಜೊತೆಗೆ ಚಿತ್ರದುರ್ಗ ನಗರದ ರಾಜೇಂದ್ರ ನಗರದಲ್ಲಿ ಮಲಹೊರುವ ಕೆಲಸ ಮಾಡಿದ ಮುರುಗೇಶ್, ರಂಗಪ್ಪ ಮತ್ತು ಮಹಂತೇಶ್ ಎಂಬ ಮೂವರು ದಲಿತರ ಮೇಲೆ ಮೊಕದ್ದಮೆ ದಾಖಲಾಗಿದೆ. ಸದ್ಯಕ್ಕೆ  ಇವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹೀಗೆ ಮೊದಲೇ ಜೈಲುಬಂಧನದ ಬೆದರಿಕೆ ಹಾಕಿ ನಂತರ ಸ್ವಯಂಘೋಷಣೆ ಜಾಹೀರಾತು ಕೊಟ್ಟರೆ ಯಾವ ಮಲ ಹೊರುವ ಕಾರ್ಮಿಕ ತಾನೇ ಸ್ವಯಂಘೋಷಣೆ ಮಾಡಿಕೊಳ್ಳಲು ಮುಂದೆ ಬರುತ್ತಾರೆ ?

ಇಷ್ಟೆಲ್ಲ ಅನಾಹುತಕಾರಿ ಶೈಲಿಯಲ್ಲಿ ಕುಂತ ಜಾಗದಲ್ಲಿಯೇ ಮಲಹೊರುವವರ ಸಮೀಕ್ಷೆ ನಡೆಸಿದ ಅಧಿಕಾರಿಗಳ ಪಡೆಯು ಇದೀಗ ರಾಜ್ಯದ ಎಲ್ಲಿಯೂ ಮಲ ಹೊರುವ ಪದ್ಧತಿಯಾಗಲೀ, ಕಾರ್ಮಿಕರಾಗಲೀ ಇಲ್ಲ ಎಂದು ಮಗದೊಮ್ಮೆ ಸುಳ್ಳು ಪ್ರಮಾಣಪತ್ರಗಳನ್ನು ಕೇಂದ್ರಕ್ಕೆ ಸಲ್ಲಿಸಲು ಸಿದ್ಧವಾಗಿದೆ. ಈ ಮೂಲಕ 2011ರ ಜನಗಣತಿಯೇ ದೃಢಪಡಿಸಿದ ರಾಜ್ಯದ ಲಕ್ಷಾಂತರ ಮಲಹೊರುವ ದಲಿತರ ಪುನರ್ವಸತಿಯ ಮೇಲೆ ಚಪ್ಪಡಿಯೆಳೆಯಲು ಮುಂದಾಗಿದೆ. ಆದರೆ  ದಾಖಲೆಗಳಲ್ಲಿ ಕಾಣೆಯಾಗಿರುವ ಮಲಹೊರುವವರನ್ನು,  ಸಫಾಯಿ ಕರ್ಮಚಾರಿಗಳ ಪುನರ್ವಸತಿ ಯೋಜನೆಯ ಕೋಟ್ಯಂತರ ರೂಪಾಯಿಗಳ ಅನುದಾನ ಆಧಾರಿತ ಯೋಜನೆಗಳ ಫಲಾನುಭವಿಗಳಾಗಿ ಇದ್ದಕ್ಕಿದ್ದಂತೆ ಹುಟ್ಟಿಸುವ ಬ್ರಹ್ಮವಿದ್ಯೆಯಲ್ಲಿ ಇದೇ ಅಧಿಕಾರಿಗಳು ಸಿದ್ಧಹಸ್ತರು. ಕೋಟಿಗಳ ಬಂಡವಾಳದ ಪುನರ್ವಸತಿ ಯೋಜನೆಗಳ ಅನುಷ್ಠಾನದಲ್ಲಿ ಮಲಹೊರುವವರನ್ನು ತೋರಿಸುವ ಅಧಿಕಾರಿಗಳು, ಸಮೀಕ್ಷೆಯ ವಿಷಯ ಬಂದಾಗ ಮಾತ್ರ ಅಂತಹವರು ಇಲ್ಲವೇ ಇಲ್ಲ ಎಂದು ಸುಳ್ಳು ದಾಖಲೆಗಳನ್ನು ಸಿದ್ಧಗೊಳಿಸುವುದು ಅವರಿಗಷ್ಟೇ ಇರುವ ಮಾಂತ್ರಿಕಶಕ್ತಿಗಷ್ಟೇ ಸಾಧ್ಯ. ಈ ರಾಜ್ಯಮಟ್ಟದ ಸಮೀಕ್ಷೆಯಲ್ಲಿ ಅಧಿಕಾರಿವರ್ಗವು ತೋರಿಸಿರುವ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ `ಸಫಾಯಿ ಕರ್ಮಚಾರಿ ವಾಚ್‌ಡಾಗ್' ಸಮಿತಿಯು ಪ್ರತಿಯೊಂದಕ್ಕೂ ಜಿಲ್ಲಾವಾರು ಸಾಕ್ಷಿಪುರಾವೆಗಳನ್ನು ಒದಗಿಸಲು ಸಿದ್ಧವಿದೆ. ಈ ಬಗ್ಗೆ ಗಮನಹರಿಸಿ ಸಮೀಕ್ಷೆಯನ್ನು ತಮ್ಮ ಇಲಾಖೆಯ ಅಧಿಕಾರಿಗಳ ಕಪಿಮುಷ್ಟಿಯಿಂದ ಬಿಡಿಸಿ ನ್ಯಾಯಯುತವಾಗಿ ಮತ್ತೊಮ್ಮೆ ನಡೆಸಲು ಸರ್ಕಾರ ಸಿದ್ಧವಿದೆಯೇ?

ಟಿ.ಕೆ. ದಯಾನಂದ
(ಸಂಶೋಧಕ, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರ,
ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT