ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತರಾವ್‌ ಕದಂ ಹತ್ಯೆ: ಸಿಐಡಿ ತನಿಖೆ

ಬೆಳಗಾವಿ ವಿಧಾನಮಂಡಲ ಅಧಿವೇಶನ–2013
Last Updated 5 ಡಿಸೆಂಬರ್ 2013, 8:40 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಔರಾದ್ ತಾಲ್ಲೂಕಿನ ಕಮಲನಗರದ ಗಣಪತರಾವ್ ಕದಂ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರಿಗೆ ವರ್ಗಾವಣೆ ಮಾಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಬುಧವಾರ ವಿಧಾನ ಪರಿಷತ್‌ನಲ್ಲಿ ಪ್ರಕಟಿಸಿದರು.

ವಿರೋಧ ಪಕ್ಷದ ಉಪ ನಾಯಕ ಕೆ.ಬಿ.ಶಾಣಪ್ಪ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ‘ಸೆಪ್ಟೆಂಬರ್ 15ರಂದು ತೋಟದ ಮನೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕದಂ ಅವರ ಹತ್ಯೆ ನಡೆದಿದೆ. ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಹಣ ಅಥವಾ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುವ ಪ್ರಯತ್ನ ಕಂಡುಬಂದಿಲ್ಲ. ಈ ಹತ್ಯೆಯ ಹಿಂದೆ ಬೇರೆ ಕಾರಣಗಳು ಇರಬಹುದು ಎಂಬ ಅನುಮಾನವಿದೆ’ ಎಂದರು.

ಈ ಪ್ರಕರಣದಲ್ಲಿ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶ ಮೂಲದ ಬಾಡಿಗೆ ಹಂತಕರ ಕೈವಾಡ ಇರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ನೆರೆಯ ರಾಜ್ಯಗಳ ಪೊಲೀಸರ ಸಹಕಾರ ಪಡೆಯಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲಿದೆ ಎಂದು ಭರವಸೆ ನೀಡಿದರು.

ಆದರೆ ಗೃಹ ಸಚಿವರ ಭರವಸೆಯನ್ನು ಒಪ್ಪದ ಶಾಣಪ್ಪ, ‘ಕದಂ ಅವರು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದವರು. ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ನೀಡುತ್ತಿದ್ದರು. ಅವರ ಹತ್ಯೆಯ ಹಿಂದೆ ಪ್ರಭಾವಿಗಳ ಕೈವಾಡ ಇದ್ದಂತೆ ಕಾಣುತ್ತಿದೆ. ಘಟನೆ ನಡೆದು ಮೂರು ತಿಂಗಳಾದರೂ ಆರೋಪಿಗಳ ಸುಳಿವು ಪತ್ತೆ ಮಾಡಲು ಸಾಧ್ಯವಾಗದ ಸ್ಥಳೀಯ ಪೊಲೀಸರಿಂದ ಈ ಪ್ರಕರಣದ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಸಿಐಡಿ ತನಿಖೆಗೆ ಒಪ್ಪಿಸಿ’ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ, ಬಿಜೆಪಿ ಸದಸ್ಯರಾದ ರಘುನಾಥರಾವ್ ಮಲಕಾಪುರೆ, ಅಮರ ನಾಥ ಪಾಟೀಲ್, ಡಿ.ಎಸ್.ವೀರಯ್ಯ ಅವರು ಶಾಣಪ್ಪ ಅವರನ್ನು ಬೆಂಬಲಿಸಿದರು. ಬಳಿಕ ಗೃಹ ಸಚಿವರು ಸಿಐಡಿ ತನಿಖೆಯ ನಿರ್ಧಾರ ಪ್ರಕಟಿಸಿದರು.

ಉದ್ವೇಗಕ್ಕೊಳಗಾದ ಶಾಣಪ್ಪ: ಧನವಿನಿಯೋಗ ಮಸೂದೆ ಅಂಗೀಕಾರದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ತಿದ್ದುಪಡಿ ಮಸೂದೆ ಮಂಡಿಸಿದರು. ಈ ಕುರಿತು ಚರ್ಚೆ ನಡೆಯುತ್ತಿದ್ದಾಗ ಉದ್ವೇಗಕ್ಕೊಳಗಾದ ಶಾಣಪ್ಪ ಅವರು, ದಲಿತ ಮುಖಂಡನ ಹತ್ಯೆ ಪ್ರಕರಣದ ಪ್ರಸ್ತಾಪಕ್ಕೆ ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಬ್ಬ ದಲಿತನ ಹತ್ಯೆ ನಡೆದು ಮೂರು ತಿಂಗಳಾಗಿದೆ. ಆರೋಪಿಗಳ ಪತ್ತೆಯೇ ಆಗಿಲ್ಲ. ಮೂರು ದಿನದಿಂದ ಗಮನ ಸೆಳೆಯುವ ಸೂಚನೆ ಮಂಡನೆಗೆ ಅವಕಾಶಕ್ಕಾಗಿ ಕಾದಿದ್ದೇನೆ. ದಲಿತನ ಜೀವ ಹೋದುದಕ್ಕಿಂತ ಕೈಗಾರಿಕೆಗಳೇ ದೊಡ್ಡದಾ’ ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.

ವಿಷಯ ಪ್ರಸ್ತಾಪಕ್ಕೆ ಅವಕಾಶ ಕೋರಿ ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶಾಣಪ್ಪ ಅವರು ಮನವೊಲಿಕೆಗೆ ತೆರಳಿದವರ ವಿರುದ್ಧ ಹರಿಹಾಯ್ದರು. ಕೈಗಾರಿಕಾ ಸೌಲಭ್ಯ ಮಸೂದೆ ಬಗ್ಗೆ ಮಾತನಾಡಲು ಮುಂದಾದ ಬಿಜೆಪಿ ಸದಸ್ಯರ ಮೇಲೂ ಕೋಪ ಪ್ರದರ್ಶಿಸಿದರು.

ಗೃಹ ಸಚಿವರು ಸದನಕ್ಕೆ ಬಂದ ತಕ್ಷಣ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡುವುದಾಗಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮತ್ತು ಮುಖ್ಯಮಂತ್ರಿಯವರು ಸಮಾಧಾನಪಡಿಸಿದ ಬಳಿಕ ಆಸನಕ್ಕೆ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT