ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯ ವ್ಯವಸ್ಥೆ: ಘನತ್ಯಾಜ್ಯದ ದುರವಸ್ಥೆ...?

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಮತ್ತೊಮ್ಮೆ ತ್ರಿವರ್ಣ ಬಾವುಟ ನೀಲ ಗಗನದಲ್ಲಿ ಪಟಪಟ ಹಾರುವಾಗ ನಾವು ಭಾವುಕರಾಗುತ್ತೇವೆ. ‘ಮಾ ತುಝೇ ಸಲಾಮ್....’, ‘ಯೇ ಮೇರೆ ವತನ್‌ಕೇ ಲೋಗೋಂ ಜರಾ ಆಂಖ್‌ಮೆ ಭರಲೊ ಪಾನಿ....’, ‘ವಂದೇಮಾತರಂ.....’, ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ....’ ಮುಂತಾದ ಹಾಡುಗಳನ್ನು ಕೇಳುವಾಗ ಅದೆಂಥದೋ ತಲ್ಲಣ.

ಆದರೆ, ರಜೆ ಎಂಬುದೊಂದನ್ನು ಬಿಟ್ಟರೆ, ಬೇರೇನಿದೆ ಈ ದಿನ ಬದಲಾವಣೆ? ಮತ್ತದೇ ಮುತ್ತಿಕ್ಕುವ ನಿತ್ಯದ ಬವಣೆ! ‘ರಾಷ್ಟ್ರೀಯ ಹಬ್ಬ’ ಎಂಬ ಸಡಗರವಾಗಲೀ, ಸಂತಸವಾಗಲೀ ಇಲ್ಲ. 61 ನೇಯದ್ದೋ, 62 ನೇಯದ್ದೋ ಎಂಬ ದ್ವಂದ್ವದ ನಡುವೆಯೇ ಕಾಟಾಚಾರದ ಕಾರ್ಯಕ್ರಮ ನಡೆಸಿ ಕೈ ತೊಳೆದುಕೊಳ್ಳುತ್ತೇವೆ. ತಟ್ಟನೆ ನೆನಪಾಗುವ ಕೆಲವೊಂದು ಹೆಸರುಗಳನ್ನು ಬಡಬಡಿಸಿ, ಗಾಂಧಿಯನ್ನಂತೂ ಮೊದಲಲ್ಲೇ ಸ್ಮರಿಸಿ, ಸಂತಸ- ಸಂಕಟಗಳ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಿ, ಚರ್ಚೆಯನ್ನೋ, ಭಾಷಣವನ್ನೋ ಮುಗಿಸಿದರಾಯಿತು. ಸಂವಿಧಾನದ ಧ್ಯಾನವೂ ಬರಿಯ ಅಧ್ವಾನ.

ಪ್ರತಿವರ್ಷದಂತೆ, ಶಾಲಾ ಮಕ್ಕಳು ಸಮವಸ್ತ್ರ ಧರಿಸಿಕೊಂಡು ಬಂದು, ಬಿಸಿಲಲ್ಲಿ ಶಿಸ್ತಾಗಿ, ಸುಸ್ತಾಗಿ ನಿಲ್ಲುತ್ತಾರೆ ಮತ್ತು ಮುಖ್ಯ ಅತಿಥಿಗಳು ಹೆಚ್ಚು ದೀರ್ಘ ಭಾಷಣ ಮಾಡದಿರಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಪ್ರಾಯೋಜಕರು ನೀಡಿದ ಪೆಪ್ಪರ್‌ಮೆಂಟನ್ನು ಚಪ್ಪರಿಸುತ್ತಾ ಮನೆ ಸೇರುವಾಗ, ಟಿವಿಯಲ್ಲಿ ದೆಹಲಿಯ ಪೆರೇಡ್ ನೋಡಿ ದಣಿದ ಪಾಲಕರು, ದೇಶದ ದುರವಸ್ಥೆ ಬಗ್ಗೆ ದೇಶಾವರಿ ಹರಟೆಯಲ್ಲಿ ತೊಡಗಿರುತ್ತಾರೆ. ಮುಂದೇನು? ಟಿವಿ ಸಿನೆಮಾ? ಸಿಡಿ ಸಿನೆಮಾ? ಅಥವಾ ಥಿಯೇಟರ್‌ನತ್ತ ದೌಡು? ರಾತ್ರಿ ಮನೆ ಊಟವೂ ಡೌಟು! ಹೊರಗೆಲ್ಲಾದರೂ ಪಾನಿಪುರಿ, ಗೋಬಿ ಮಂಚೂರಿ ಚಪ್ಪರಿಸಿದರಾಯಿತು. ‘ರಿಪಬ್ಲಿಕ್ ಡೆ’ಯಂದು ಪಬ್ಲಿಕ್‌ನಲ್ಲೇ ಖಾನಾ ಬಜಾನಾ...

ಜಾಗತಿಕ ವಿದ್ಯಮಾನಗಳ ಬಗ್ಗೆ, ರಾಷ್ಟ್ರೀಯ ಘಟನಾವಳಿಗಳ ಬಗ್ಗೆ, ನಾವು ನಾಲಗೆಯನ್ನು ಹರಿಯಬಿಡುತ್ತೇವೆಯೇ ಹೊರತು, ನಾಗರಿಕನ ಕರ್ತವ್ಯಗಳನ್ನು ನೆನಪಿಸಿಕೊಳ್ಳುವುದೂ ಇಲ್ಲ. ಪಾಲಿಸುವುದಂತೂ ಮೊದಲೇ ಇಲ್ಲ. ಹಾಗಾಗಬೇಕು, ಹೀಗಾಗಬೇಕು, ಭ್ರಷ್ಟಾಚಾರ ಎಂಬ ಬ್ರಹ್ಮರಾಕ್ಷಸ ಸಾಯಬೇಕು, ಕಾಮನ್‌ವೆಲ್ತ್ ಸ್ಕ್ಯಾಮ್ ಬಯಲಾಗಬೇಕು, ಆದರ್ಶ ಅಪಾರ್ಟ್‌ಮೆಂಟ್ ನೆಲಕ್ಕುರುಳಬೇಕು, ಭೂಕಬಳಿಕೆ ನಿಲ್ಲಬೇಕು, 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು... ಥೊಥೊಥೊ... ಎಲ್ಲಾ ಓಕೆ, ಆದರೆ ಆಗುತ್ತಿಲ್ಲ ಯಾಕೆ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಹೆಗ್ಗಣಗಳ ದರ್ಬಾರು ಜೋರು! ಯಾರು ಕರೆಕ್ಟ್?.... ಯಾರು ಕರಪ್ಟ್?

ನಾವೇನೋ ಗಣರಾಜ್ಯ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಆದರೆ ಜನಸಾಮಾನ್ಯರು ‘ಘನತಾಜ್ಯ’ ದಂತಾಗಿ, ದುರವಸ್ಥೆಯಲ್ಲಿ ತೊಳಲಾಡುತ್ತಿರುವುದನ್ನು ಒಪ್ಪಿಕೊಳ್ಳದಿರಲಾಗದು. ಯಾರಿಗೂ ಬೇಡದ ಘನತ್ಯಾಜ್ಯವನ್ನು ದೂರಕ್ಕೆ ರವಾನಿಸುವುದು, ಹೊರಗೆ ಹಾಕುವುದು ದೊಡ್ಡ ಸಮಸ್ಯೆಯಾಗಿರುವುದೇನೋ ಸರಿಯೇ. ಈ ದೇಶದ ಬಡ ಪ್ರಜೆ ಕೂಡ, ನೂರೆಂಟು ವ್ಯಾಜ್ಯಗಳ ನಡುವೆ ಘನತ್ಯಾಜ್ಯದಂತಾಗಿರುವುದು ಗಣತಂತ್ರದ ವಿಡಂಬನೆ. ದೆಹಲಿಯಲ್ಲಿ ಸಂಸತ್ ಕಲಾಪಕ್ಕೆ ತಡೆ. ರಾಜ್ಯದಲ್ಲಿ ವಿಧಾನಸಭಾ ಕಲಾಪಕ್ಕೆ ಬ್ರೇಕ್. ಇವರೆಲ್ಲರ ಪ್ರಲಾಪ, ಪ್ರತಾಪಗಳ ನಡುವೆ, ಮತದಾರ ಪ್ರಭುವಿನ ಕನಸುಗಳು ಸಾಯುತ್ತಿರುವುದು ಸುಳ್ಳೇ? ಸೆನ್ಸಿಟಿವಿಟಿ ಇಲ್ಲದ ಸೈತಾನರು ‘ಬಹುಮತ’ ಇದ್ದ ಮಾತ್ರಕ್ಕೆ ‘ಜನಮತ’ವನ್ನು, 110 ಕೋಟಿ ಜನತೆಯ ಆಶಯಗಳನ್ನು, ತುಳಿಯುವುದು ನ್ಯಾಯವೆ? ಮತದಾನ ಸರಿ; ಮತಿದಾನ? ಜಾಗತೀಕರಣ ಇರಲಿ; ಜಾಗೃತೀಕರಣ ಬೇಡವೆ?

‘ಜನ-ಗಣ-ಮನ ಅಧಿನಾಯಕ ಜಯಹೇ’ ಎಂಬುದಾಗಿ ದನಿ ಎತ್ತರಿಸಿ ಹಾಡುವಾಗ ಎದೆಯಲ್ಲಿ ಅದೆಂಥ ಕಂಪನ, ಅದೆಷ್ಟು ತಲ್ಲಣ, ಅದೆಂಥ ರೋಮಾಂಚನ! ಆದರೆ, ಜನಪ್ರತಿನಿಧಿಗಳ ವಾಕ್ಸಮರ, ತೋಳ್ಸಮರ, ತಣ್ಣನೆಯ ಕ್ರೌರ್ಯದ ಅಬ್ಬರ, ಪೊಲೀಸ್ ಜೀಪ್ ಏರುವಾಗಿನ ಉಬ್ಬರ, ಕಂಬಿ ಎಣಿಸುವಾಗಲೂ ಗೋಚರಿಸದ ಮುಜುಗರ. ಅದೆಷ್ಟು ಅಸಹ್ಯ! ಇದರಿಂದಾಗಿ ನಮ್ಮ ಕಿರಿಯರಿಗೆ ತಪ್ಪು ಸಂದೇಶದ ರವಾನೆಯಾಗುತ್ತಿಲ್ಲವೆ? ನಾಳೆ ಇವರನ್ನೇ ‘ರೋಲ್ ಮಾಡೆಲ್’ ಆಗಿ ಒಪ್ಪಿಕೊಂಡು ಬಿಟ್ಟರೆ ದೇಶದ ಗತಿ ಏನು? ಸಂವಿಧಾನ ಶಿಲ್ಪಿಗಳ, ಸ್ವಾತಂತ್ರ್ಯ ಸೇನಾನಿಗಳ, ಹುತಾತ್ಮರಾದ ಮಹಾಪುರುಷರ ಆತ್ಮಕ್ಕೆ(?) ಶಾಂತಿ ಸಿಗುವುದಾದರೂ ಹೇಗೆ?

ಸರ್ಕಾರ ಉಳಿಯುವುದು, ಉರುಳುವುದು ಮಹತ್ವದ್ದಲ್ಲ. ಮಾನವೀಯತೆ, ದೇಶಾಭಿಮಾನ, ಸ್ವಾತಂತ್ರ್ಯ, ಸಂವೇದನಾಶೀಲತೆಗಳು ಉಳಿಯುವುದು, ಮೆರೆಯುವುದು ಮುಖ್ಯ. ಯಾವುದನ್ನೂ ವೈಭವೀಕರಿಸಬಾರದು, ನಿಜ. ಕೆಲವೊಂದು ಮೀಡಿಯಾ-ಐಡಿಯಾಗಳು ಅತಿರಂಜಿತ ಎಂಬುದೂ ನಿಜ. ಹಾಗೆಂದು, ಮೂರು ಮಂಗಗಳಂತೆ, ‘ಕೆಟ್ಟದ್ದನ್ನು ಕೇಳುವುದಿಲ್ಲ, ನೋಡುವುದಿಲ್ಲ, ಮಾತಾಡುವುದಿಲ್ಲ’ ಎಂಬ ಸೋಗಲಾಡಿತನ ಸಹ್ಯವೆ? ಪ್ರತಿಭಟನೆಯ ಸೊಲ್ಲು ಬೇಡವೆ? ರಾಷ್ಟ್ರ ಭಾರತದಲ್ಲಿ ಸಜ್ಜನರ ತಳಿ (ಪ್ರಭೇದ) ಕ್ಷೀಣಿಸುತ್ತಿರುವುದು ಅಪಾಯಕಾರಿ. ಗಣರಾಜ್ಯೋತ್ಸವದಂದು ತೊಡುವ ಪಣ ಕೃತಿಗಿಳಿಯಲಿ. ಜಡತ್ವ ಅಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT