ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಸಿದ್ಧತೆ: 10 ಸಾವಿರ ಆಸನ ವ್ಯವಸ್ಥೆ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾಣೆಕ್ ಶಾ ಪೆರೇಡ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಭಾರಿ ಭದ್ರತೆ ಏರ್ಪಡಿಸಲಾಗಿದ್ದು, 50 ತುಕಡಿಗಳು ಪಥ ಸಂಚಲನ ನಡೆಸಲಿವೆ.

ಮೈದಾನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, `ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಗಣ್ಯರು ಹಾಗೂ ಸಾರ್ವಜನಿಕರಿಗೆ ಒಟ್ಟು 10,000 ಆಸನ ವ್ಯವಸ್ಥೆ ಮಾಡಲಾಗಿದೆ~ ಎಂದರು.

`ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳದ ವತಿಯಿಂದ ಪಥ ಸಂಚಲನ ನಡೆಯಲಿದೆ. ವಿವಿಧ ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ~ ಎಂದು ಮಾಹಿತಿ ನೀಡಿದರು.

`ಬೆಳಿಗ್ಗೆ 9ಕ್ಕೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಗೌರವ ರಕ್ಷೆ ಸ್ವೀಕರಿಸಿ ನಂತರ ರಾಜ್ಯಪಾಲರು, ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2,100 ಮಕ್ಕಳು ಭಾಗವಹಿಸಲಿದ್ದಾರೆ~ ಎಂದು ತಿಳಿಸಿದರು.

`ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ತುರ್ತು ಸೇವೆಗೆಂದು 12 ಅಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. 50  ವೈದ್ಯರು ಮತ್ತು 100 ಮಂದಿ ಶುಶ್ರೂಕಿಯರನ್ನು ನೇಮಿಸಲಾಗಿದೆ. ಮೈದಾನದ ಸುತ್ತಮುತ್ತಲಿನ 25 ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 1,200 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ~ ಎಂದು ಹೇಳಿದರು.

ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ, `ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ಭಾಗಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈದಾನದ ಸುತ್ತ 1,500 ಪೊಲೀಸರನ್ನು ನಿಯೋಜಿಸಲಾಗುವುದು. ಸುಮಾರು 500 ಹಿರಿಯ ಅಧಿಕಾರಿಗಳು ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ~ ಎಂದು ವಿವರಿಸಿದರು.

ರಾಜಭವನ ರಸ್ತೆಯ ಜಿ 1 ದ್ವಾರದ ಮೂಲಕ  ಗಣ್ಯವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಇದೇ ರಸ್ತೆಯ ಜಿ 2 ಮೂಲಕ ಅತಿಗಣ್ಯ ವ್ಯಕ್ತಿಗಳಿಗೆ, ಕಾಮರಾಜರಸ್ತೆಯ ಜಿ 3 ದ್ವಾರದ ಮೂಲಕ ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್‌ಎಫ್ ಅಧಿಕಾರಿಗಳು ಮತ್ತು ಇದೇ ರಸ್ತೆಯ ಜಿ 4 ದ್ವಾರದ ಮೂಲಕ ಸಾರ್ವಜನಿಕರು ಪ್ರವೇಶಿಸಬಹುದು.

ಸಾರ್ವಜನಿಕರು ಸಮಾರಂಭ ಆರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ 8.30 ಕ್ಕೆ ಆಸೀನರಾಗಿರಬೇಕು. ಸಾರ್ವಜನಿಕರು ಯಾವುದೇ ಕೈಚೀಲ ಅಥವಾ ಪ್ಲಾಸ್ಟಿಕ್ ಚೀಲಗಳನ್ನು ತರುವಂತಿಲ್ಲ. ಪಾಸ್ ಇರುವವರಿಗೆ ಮಾತ್ರ ಆಸನ ವ್ಯವಸ್ಥೆಯಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT