ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವಕ್ಕೆ ಮೆರುಗು ತಂದ ಶಾಲಾ ಮಕ್ಕಳು

Last Updated 27 ಜನವರಿ 2012, 10:15 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ 496 ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು. 

ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಒಟ್ಟು ರೂ 24.37 ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈಗಾಗಲೇ 324 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅದಕ್ಕೆ 5.10 ಕೋಟಿ ರೂಪಾಯಿ ವೆಚ್ಚದಲ್ಲಿ ಪಂಪ್-ಮೋಟರ್‌ಗಳನ್ನು ಅಳವ ಡಿಸಲಾಗಿದೆ ಎಂದು ತಿಳಿಸಿದರು.

ಯರಗೋಳು ಯೋಜನೆ ಜೊತೆಗೆ ರಾಜ್ಯ ಸರ್ಕಾರವೇ ಎತ್ತಿನಹೊಳೆ ನೀರು ಪೂರೈಕೆಗಾಗಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರ ಜೊತೆಗೆ ಭದ್ರಾ ನದಿ ನೀರು ಸೇರಿದಂತೆ ಕೋಲಾರಕ್ಕೆ ಯಾವುದಾರೂ ಮೂಲದಿಂದ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಕುಡಿಯುವ ನೀರು ಪೂರೈಕೆಗಾಗಿ 660 ನಳ ನೀರು ಸರಬರಾಜು ಮತ್ತು 1543 ಕಿರು ನೀರು ಸರಬರಾಜು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅದಕ್ಕೆ 15.15 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಕೆರೆಗಳು: ಜಿಲ್ಲೆಯಲ್ಲಿ ಒಟ್ಟು 2055 ಕೆರೆಗಳಿವೆ. ಉತ್ತಮ ಮಳೆಯಾಗಿ ಕೆರೆಗಳು ತುಂಬಿದರೆ ಕುಡಿಯುವ ನೀರಿಗೆ ತೊಂದರೆ ಇರುವುದಿಲ್ಲ. ಮಾಲೂರು ತಾಲ್ಲೂಕಿನಲ್ಲಿ 40 ಕೋಟಿ ವೆಚ್ಚದಲ್ಲಿ ಮಾರ್ಕಂಡೇಯ ಜಲಾಶಯ ಯೋಜನೆಯನ್ನು ಕೈಗೊಳ್ಳಲಾಗಿದ್ದು 84 ಗ್ರಾಮಗಳಿಗೆ ನೀರು ದೊರಕುತ್ತದೆ. ಶ್ರೀನಿವಾಸಪುರ ತಾಲ್ಲೂಕಿನ ಜಾಲ ಗೊಂಡನಹಳ್ಳಿ ಜಲಾಶಯದಿಂದ 72 ಗ್ರಾಮಗಳಿಗೆ ನೀರು ಪೂರೈಸುವ 11 ಕೋಟಿ ವೆಚ್ಚದ ಯೋಜನೆ ಮತ್ತು ಕೋಲಾರ ತಾಲ್ಲೂಕಿನ ಎಸ್.ಅಗ್ರಹಾರ ಕೆರೆಯಿಂದ 42 ಗ್ರಾಮಗಳಿಗೆ ನೀರು ಪೂರೈಸುವ 10 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಆಕರ್ಷಕ ಪಥಸಂಚಲನ: ಉತ್ಸವದ ಪ್ರಯುಕ್ತ ನಡೆದ ಆಕರ್ಷಕ ಪಥಸಂಚಲನದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ಪಡೆ, ಸುವರ್ಣ ಸೆಂಟ್ರಲ್ ಶಾಲೆ, ಆರ್.ವಿ. ಇಂಟರ್‌ನ್ಯಾಷನಲ್ ಶಾಲೆ, ಪ್ರೆಸಿಡೆನ್ಸಿ ಶಾಲೆ, ಆನಂದಮೂರ್ತಿ ಶಾಲೆ, ಇಲಾಹಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಹಿಳಾ ಸಮಾಜ ಶಾಲೆ, ಚಿನ್ಮಯ ಶಾಲೆ, ಸಮೈಖ್ಯ ಪ್ರೌಢಶಾಲೆ, ಅಂತರಗಂಗೆ ಅಂಗವಿಕಲರ ಶಾಲೆ ಸೇರಿದಂತೆ ಹಲವು ತಂಡಗಳು ಪಾಲ್ಗೊಂಡವು.

ನುಡಿ ತೇರು: ಪಥಸಂಚಲನದ ಬಳಿಕ ನುಡಿತೇರು ಕಾರ್ಯಕ್ರಮದ ಜಾನಪದ ಕಲಾವಿದರ ತಂಡಗಳೂ ಪ್ರದರ್ಶನ ನೀಡಿದ್ದು ಗಮನ ಸೆಳೆಯಿತು.

ಭಾರತೀಯಂ: ವೇದಿಕೆಯ ಎದುರಿನ ಮೆಟ್ಟಿಲುಗಳಲ್ಲಿ ಹಸಿರು ಮತ್ತು ಕಿತ್ತಳೆ ಬಣ್ಣದ ಪ್ಲೆಕಾರ್ಡ್‌ಗಳನ್ನು ಹಿಡಿದು ಕುಳಿತಿದ್ದ ನಗರದ ಆಲ್ ಅಮೀನ್ ಶಾಲೆಯ ವಿದ್ಯಾರ್ಥಿಗಳು ಭಾರತೀಯಂ ಪರಿಕಲ್ಪನೆ ಅಡಿಯಲ್ಲಿ ವಿವಿಧ ಸಂಕೇತಗಳನ್ನು ಪ್ರದರ್ಶಿಸಿದ್ದು ವಿಶೇಷ ಗಮನ ಸೆಳೆಯಿತು. ಸಾಮೂಹಿಕ ವ್ಯಾಯಾಮ (ಮಾಸ್ ಪಿ.ಟಿ) ಕಾರ್ಯಕ್ರಮದಲ್ಲಿ ಎವಿಎಸ್ ಶಾಲೆಯ ಅತಿ ಕಡಿಮೆ ಎತ್ತರದ ಮೂವರು ಸಹೋದರರು ಪಾಲ್ಗೊಂಡು ಅಚ್ಚರಿ ಮೂಡಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ, ಉಪ ವಿಭಾಗಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ತಹಶೀಲ್ದಾರ್ ಮುನಿರಾಮಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಿ.ವಿ.ಹರೀಶ್, ನಗರಸಭೆ ಆಯುಕ್ತೆ   ಆರ್.ಶಾಲಿನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಎಚ್.ಡಿ.ಗೋವಿಂದಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ಶ್ರೀರಾಂ, ಅರ್ಬನ್ ಬ್ಯಾಂಕ್ ಅಧ್ಯಕ್ಷ    ಎನ್.ರಾಜಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಗೋಕುಲ ಪ್ರೌಢಶಾಲೆ:  ನಗರದ ಗೋಕುಲ ಪ್ರೌಢ ಶಾಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ಧ್ವಜಾರೋಹಣ ಮಾಡಿದರು. ಮಕ್ಕಳು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಅಂತೆಯೇ ಪ್ರತಿ ನಾಗರೀಕನೂ ತನ್ನ ಹಕ್ಕು ಮತ್ತು ಕರ್ತವ್ಯದ ಬಗ್ಗೆ ತಿಳಿದುಕೊಂಡರೆ ಸಂವಿಧಾನದ ಆಶಯ ಈಡೇರಿದಂತೆ ಎಂದರು. ಗೋಕುಲ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ನಾಗರಾಜ್ ಅತಿಥಿಯಾಗಿದ್ದರು. ಉಪಪ್ರಾಂಶುಪಾಲ ಎಚ್.ಬಿ.ಮಹೇಶ್, ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು. ಕಾವ್ಯ ಮತ್ತು ತಂಡ ಪ್ರಾರ್ಥಿಸಿ, ಸಂತೋಷ್ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT