ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಅಕ್ರಮ: ರಾಜ್ಯದಲ್ಲೂ ಸಿಬಿಐ ತನಿಖೆಗೆ ಶಿಫಾರಸು

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಬಳ್ಳಾರಿಯಲ್ಲಿ ಹೊಂದಿದ್ದ ಗಣಿಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿದೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಇಸಿ ಬುಧವಾರ ಸುಪ್ರೀಂಕೋರ್ಟ್‌ಗೆ 17 ಪುಟಗಳ ಮಹತ್ವದ ವರದಿಯನ್ನು ಸಲ್ಲಿಸಿದೆ.

ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಗಣಿ ಕಂಪೆನಿಯ (ಎಎಂಸಿ) ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂಬ ಶಿಫಾರಸು ವರದಿಯಲ್ಲಿದೆ.

ಮೂರು ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಕಾರ್ಯನಿರ್ವಾಹಕ ನಿದೇರ್ಶಕ ಎಸ್.ಆರ್.ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಇಸಿಗೆ ಆದೇಶಿಸಿತ್ತು. ಸಮಿತಿಯ ವರದಿಯ ಕುರಿತು ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ರೆಡ್ಡಿ ಮೇಲೆ ಗರಂ: ಎಎಂಸಿ ಗಣಿ ಗುತ್ತಿಗೆಯ ನವೀಕರಣದಲ್ಲೇ ಭಾರಿ ಅಕ್ರಮ ನಡೆದಿದೆ. 1996ರ ಮಾರ್ಚ್ 2ರಿಂದ 2000ನೇ ಇಸವಿಯ ಮಾರ್ಚ್ 23ರ ಅವಧಿಯಲ್ಲಿ ಈ ಗುತ್ತಿಗೆಗೆ ಮಾನ್ಯತೆಯೇ ಇರಲಿಲ್ಲ. ನಂತರ ಅಕ್ರಮವಾಗಿ ಗುತ್ತಿಗೆ ನವೀಕರಣ ನಡೆದಿದೆ. ಬಳಿಕ ಗುತ್ತಿಗೆಯ ಹಸ್ತಾಂತರದಲ್ಲೂ ಕಾನೂನು ಉಲ್ಲಂಘನೆ ನಡೆದಿದೆ. ಗುತ್ತಿಗೆ ನಕ್ಷೆಗೂ ವಾಸ್ತವಿಕವಾಗಿ ಗಣಿಯಲ್ಲಿನ ಗಡಿಗಳಿಗೂ ಬಹಳ ವ್ಯತ್ಯಾಸ ಕಂಡುಬಂದಿದೆ. ಗಣಿ ಪ್ರದೇಶದಲ್ಲಿನ ವಾಸ್ತವ ಚಿತ್ರಣಕ್ಕೂ, ಈ ಗಣಿಯಿಂದ ತೆಗೆಯಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಿರುವ ಅದಿರಿನ ಪ್ರಮಾಣಕ್ಕೂ ಹೋಲಿಕೆಯೇ ಆಗುವುದಿಲ್ಲ ಎಂದು ಸಿಇಸಿ ವರದಿ ತಿಳಿಸಿದೆ.

`ಜನಾರ್ದನ ರೆಡ್ಡಿ ಒಡೆತನದ ಎಎಂಸಿಯ 10.12 ಹೆಕ್ಟೇರ್ ವಿಸ್ತೀರ್ಣದ ಗಣಿಯಲ್ಲಿ 2009-10ರಲ್ಲಿ ಹತ್ತು ಲಕ್ಷ ಟನ್ ಅದಿರು ತೆಗೆಯಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ, ಗಣಿಯಲ್ಲಿನ ಚಿಕ್ಕ ಗುಂಡಿಗಳನ್ನು ನೋಡಿದರೆ ಅಷ್ಟೊಂದು ದೊಡ್ಡ ಪ್ರಮಾಣದ ಅದಿರು ತೆಗೆದಿಲ್ಲ ಎಂಬುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. ಈ ಅವಧಿಯಲ್ಲಿ ಹತ್ತು ಲಕ್ಷ ಟನ್ ಅದಿರಿನ ಸಾಗಾಣಿಕೆಗೆ ಎಎಂಸಿ ಪರವಾನಗಿಗಳನ್ನು ಪಡೆದಿದೆ. ನಿಗದಿತ ಅವಧಿಯಲ್ಲಿ ಈ ಪ್ರಮಾಣದ ಅದಿರಿನ ಸಾಗಾಣಿಕೆಯೂ ಸಾಧ್ಯವಲ್ಲ. ಎಎಂಸಿ ಹೆಸರಿನಲ್ಲಿ ಪಡೆದ ಅದಿರು ಸಾಗಾಣಿಕೆ ಪರವಾನಗಿಗಳನ್ನು ಅಕ್ರಮ ಗಣಿಗಾರಿಕೆ ಮೂಲಕ ಸಂಗ್ರಹಿಸಿದ ಅದಿರಿನ ಸಾಗಾಣಿಕೆಗೆ ಬಳಸಿರುವ ಸಾಧ್ಯತೆ ಇದೆ~ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಅಕ್ರಮ ವರ್ಗಾವಣೆ: ಕರ್ನಾಟಕದ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ 2009ರ ಆಗಸ್ಟ್ 1ರಂದು ಅಕ್ರಮವಾಗಿ ಎಎಂಸಿ ಗಣಿ ಗುತ್ತಿಗೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಕಂಪೆನಿಯ ಪಾಲುದಾರರಾಗಿ ಸೇರಿಕೊಂಡು, ಮೂಲ ಪಾಲುದಾರರನ್ನು ನಿವೃತ್ತಿಗೊಳಿಸುವ ಮೂಲಕ ಗಣಿ ಗುತ್ತಿಗೆಯ ಅಕ್ರಮ ವರ್ಗಾವಣೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲೋಕಾಯುಕ್ತರು ಜುಲೈ 27ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಎಎಂಸಿಯಲ್ಲಿನ ಅವ್ಯವಹಾರ ಕುರಿತು ಪ್ರಸ್ತಾಪಿಸಿರುವ ವಿಷಯಗಳನ್ನು ಸಿಇಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಅಡಕಗೊಳಿಸಿದೆ.

ಜನಾರ್ದನ ರೆಡ್ಡಿ ಸಚಿವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಎಎಂಸಿ ಮೂಲಕ ಅಕ್ರಮವಾಗಿ ಅದಿರು ಸಾಗಿಸಿದ್ದರು. ಗಣಿ ಗುತ್ತಿಗೆಯ ಅವಧಿ ಅಂತ್ಯಗೊಂಡ ಬಳಿಕವೂ ಪ್ರಭಾವ ಬಳಸಿ ಅದಿರು ಸಾಗಿಸಲಾಗಿತ್ತು.

ಜನಾರ್ದನ ರೆಡ್ಡಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸರ್ಕಾರದ ಅಧಿಕಾರಿಗಳು ಸಹಕಾರ ನೀಡಿದ್ದರು. ಅಕ್ರಮ ಗಣಿಗಾರಿಕೆಯ ಮೂಲಗಳಿಂದ ಎಎಂಸಿ ಖಾತೆಗೆ ಸಂದಾಯವಾದ ನೂರಾರು ಕೋಟಿ ಮೊತ್ತವನ್ನು ವಿವಿಧ ವ್ಯಕ್ತಿಗಳಿಗೆ ಸಂದಾಯ ಮಾಡಲಾಗಿತ್ತು ಎಂಬ ವಿವರವನ್ನು ವರದಿಯಲ್ಲಿ ಸೇರಿಸಲಾಗಿದೆ.

`ಸಿಬಿಐ ತನಿಖೆಯೇ ಸೂಕ್ತ~: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜನಾರ್ದನ ರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಅಸೋಸಿಯೇಟೆಡ್ ಗಣಿ ಕಂಪೆನಿಯೂ ಗಂಭೀರ ಸ್ವರೂಪದ ಅಕ್ರಮಗಳಲ್ಲಿ ಭಾಗಿಯಾಗಿದ್ದು, ಈ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸುವುದೇ ಸೂಕ್ತ ಎಂದು ಸಿಇಸಿ ಶಿಫಾರಸು ಮಾಡಿದೆ.

ಎನ್‌ಎಂಡಿಸಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಹೊಂದಿರುವ ಗಣಿ ಗುತ್ತಿಗೆ ಸಂಖ್ಯೆ 1111ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ. ನಿಗಮದ ಗಣಿ ಪ್ರದೇಶದಲ್ಲಿ ಬೇರೆ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ. ಈ ಗಣಿಯಲ್ಲೂ ಗಂಭೀರ ಸ್ವರೂಪದ ಅಕ್ರಮ ವ್ಯವಹಾರಗಳು ನಡೆದಿರುವುದರಿಂದ ಈ ಬಗ್ಗೆಯೂ ಸಿಬಿಐ ತನಿಖೆ ಅಗತ್ಯವಿದೆ ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

69 ಗಣಿಗಳಲ್ಲಿ ಅಕ್ರಮ: ಸುಪ್ರೀಂಕೋರ್ಟ್‌ನ ಆದೇಶದಂತೆ ಸಿಇಸಿ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕಾಯುಕ್ತ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳ ಸಮೀಕ್ಷೆ ನಡೆಸುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ 101 ಗಣಿಗಳ ಸಮೀಕ್ಷೆ ಪೂರ್ಣಗೊಂಡಿದ್ದು 69 ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. 14 ಗಣಿಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ. 18 ಗಣಿಗಳು ಸ್ಥಗಿತಗೊಂಡಿವೆ ಎಂದು ವರದಿ ಹೇಳಿದೆ. ಮೂರೂ ಜಿಲ್ಲೆಗಳ ಎಲ್ಲ ಗಣಿಗಳ ಸಮೀಕ್ಷೆಯನ್ನು ಜಂಟಿ ಸಮಿತಿ ನವೆಂಬರ್ 15ರೊಳಗೆ ಪೂರ್ಣಗೊಳಿಸಲಿದೆ ಎಂದು ಸಿಇಸಿ ಕೋರ್ಟ್‌ಗೆ ತಿಳಿಸಿದೆ.

ಇ-ಹರಾಜು ಕಡ್ಡಾಯ: ನ್ಯಾಯಾಲಯದ ಆದೇಶದಂತೆ ನಡೆಯುತ್ತಿರುವ ಅದಿರಿನ ಇ-ಹರಾಜು ಪ್ರಕ್ರಿಯೆಯ ಪ್ರಗತಿಯ ವಿವರವನ್ನು ವರದಿಯಲ್ಲಿ ನೀಡಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ತಡೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಖಾಸಗಿಯಾಗಿ ನಡೆಯುವ ಗಣಿಗಾರಿಕೆಯಲ್ಲಿ ದೊರೆಯುವ ಅದಿರನ್ನೂ ಇ-ಹರಾಜು ಮೂಲಕವೇ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ.

ಅಕ್ರಮ ಗಣಿಗಾರಿಕೆ ನಡೆಸಿರುವವರಿಗೆ ದಂಡ ವಿಧಿಸಬೇಕು. ಪರಿಸರ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯ ಕೈಗೊಳ್ಳುವವರೆಗೂ ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು.

ಜಂಟಿ ಸಮಿತಿಯ ಸಮೀಕ್ಷೆಗೆ ಸಂಬಂಧಿಸಿದಂತೆ ಗಣಿ ಮಾಲೀಕರು ಸಲ್ಲಿಸಿರುವ ಅಹವಾಲುಗಳ ಬಗ್ಗೆ ವಿಚಾರಣೆ ನಡೆಸಿ, ವಿಲೇವಾರಿ ಮಾಡಲು ಸಿಇಸಿಗೆ ಅವಕಾಶ ನೀಡಬೇಕು ಎಂಬ ಶಿಫಾರಸು ಕೂಡ ಈ ವರದಿಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT