ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಗಡಿ:ದಾಖಲೆ ಪರಿಶೀಲಿಸಿದ ಸಿಇಸಿ

Last Updated 27 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ:  ‘ಒಬ್ಬರಿಗೆ ಗಣಿ ಗುತ್ತಿಗೆ ದೊರೆಯಬೇಕಿರುವ ಪ್ರದೇಶವನ್ನು ಇನ್ನೊಬ್ಬರು ಒತ್ತುವರಿ ಮಾಡಿ ಅಕ್ರಮವಾಗಿ ಗಣಿಗಾರಿಕೆ ನಡೆಸುವುದು. ಗಣಿಯ ಗಡಿ ಗುರುತನ್ನೇ ನಾಶ ಮಾಡಿ, ಲಕ್ಷಾಂತರ ಟನ್‌ಗಳಷ್ಟು ಅದಿರನ್ನು ಲೂಟಿ ಹೊಡೆದು, ರಾಜ್ಯ ಸರಕಾರಕ್ಕೆ ರಾಜಸ್ವ ವಂಚಿಸುವುದು, ತಮಗೆ ಸಂಬಂಧಪಡದ ಗಡಿಯಾಚೆಗೂ ಗಣಿಗಾರಿಕೆ ನಡೆಸುವುದು’.
ಇಂಥವೇ ಹಲವು ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸಪೇಟೆ ಬಳಿಯ ಭರತರಾಯನ ಹರಿವು ಪ್ರದೇಶದ ವಿವಿಧ ಗಣಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸದಸ್ಯರು, ಗಣಿ ಗಡಿಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ, ನಕ್ಷೆಗಳನ್ನೂ ಪರಿಶೀಲಿಸಿದರು.
 
ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ನಡೆಸಿರುವ ಜಂಟಿ ಸರ್ವೆ ಸಮರ್ಪಕವಾಗಿಲ್ಲ ಎಂದು ಅವರು ನೇರವಾಗಿ ಅಭಿಪ್ರಾಯಪಟ್ಟರು. ಭರತರಾಯನ ಹರಿವು ಪ್ರದೇಶದಲ್ಲಿ (ಈ ಭಾಗದಲ್ಲಿ ಇದನ್ನು ನಾರ್ತ್ ಈಸ್ಟರ್ನ್ ಬೌಂಡರಿ ಅಥವಾ ಈಶಾನ್ಯ ಗಡಿ ಎಂದೇ ಕರೆಯಲಾಗುತ್ತದೆ) ದಾಲ್ಮಿಯಾ ಮೈನ್ಸ್ ಕಂಪೆನಿಯು ಕೈಬಿಟ್ಟಿದ್ದ 819 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೋರಿ, ಅರಣ್ಯ ಹಾಗೂ ಪರಿಸರ ಇಲಾಖೆಗಳಿಂದ ‘ಕ್ಲಿಯರೆನ್ಸ್’ ಪಡೆದಿರುವ ಎಂಎಸ್‌ಪಿಎಲ್ ಒಡೆತನದ ರಾಮಗಡ ಮೈನ್ಸ್ ಅಂಡ್ ಮಿನರಲ್ಸ್ ಕಂಪೆನಿಯು, ಆ ಜಾಗೆ ಒತ್ತುವರಿಯಾಗಿ ಒಟ್ಟು ರೂ 2400 ಕೋಟಿ ಮೌಲ್ಯದ 40 ಲಕ್ಷ ಟನ್ ಅದಿರು ಕಣ್ಮರೆಯಾಗಿದ್ದನ್ನು ವಿರೋಧಿಸಿ ಸಿಇಸಿಗೇ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಪರಿಶೀಲನೆಯನ್ನು ಸಿಇಸಿ ಸದಸ್ಯರು ನಡೆಸಿದರು.

ಟ್ರೈಡೆಂಟ್, ವೀಯೆಮ್ ಹಾಗೂ ಎಸ್.ಬಿ. ಮಿನರಲ್ಸ್ ಕಂಪೆನಿಯವರು ಮೂರು ದಿಕ್ಕುಗಳಿಂದ ಒಟ್ಟು 190 ಮೀಟರ್ ವ್ಯಾಪ್ತಿಯಷ್ಟು ಜಾಗವನ್ನು ಅತಿಕ್ರಮ ಪ್ರವೇಶಿಸಿ ಗಣಿಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಕುರಿತು ಸ್ಥಳ ಪರಿಶೀಲನೆ ನಡೆಸಿದ ಸಮಿತಿಯ ಅಧ್ಯಕ್ಷ ಪಿ.ವಿ. ಜಯಕೃಷ್ಣನ್ ಹಾಗೂ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವರಾಜ್ಕ, ‘ಜಂಟಿ ಸರ್ವೆ ನಡೆಸಿರುವ ಪದ್ಧತಿ  ಸರಿಯಿಲ್ಲ. ಈ ಸರ್ವೆ ಸಂಪೂರ್ಣ ತಪ್ಪಾಗಿದೆ’ ಎಂದು ಅಭಿಪ್ರಾಯಪಟ್ಟು ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕೂಡಲೇ ಸಮರ್ಪಕವಾದ ಸರ್ವೆ ನಡೆಸುವಂತೆಯೂ ಸೂಚಿಸಿದರು.

ಅದಿರು ತೆಗೆದ ನಂತರ ಅನುಮತಿ: ಕರಡಿಕೊಳ್ಳ ಐರನ್ ಓರ್ ಮೈನ್‌ಗೆ ಸಂಬಂಧಿಸಿದ ಲಕ್ಷ್ಮಿನಾರಾಯಣ ಮೈನಿಂಗ್ ಕಂಪೆನಿಯು ತನ್ನ ಗಣಿ ಪ್ರದೇಶದ ಪಕ್ಕದ 70 ಎಕರೆಯಷ್ಟು ಪ್ರದೇಶವನ್ನು ಒತ್ತುವರಿ ಮಾಡಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದಲ್ಲದೆ, ಇದೀಗ ಅದೇ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ಸಿಇಸಿ, ಈ ಕ್ರಮವನ್ನೂ ಗಂಭೀರವಾಗಿ ಪರಿಗಣಿಸುವಂತೆ ಕಂಡುಬಂತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಕ್ಷೆ, ದಾಖಲೆಗಳನ್ನು ತಾಳೆ ಮಾಡಿ ನೋಡಿದ ಸಿಇಸಿ ಮುಖ್ಯಸ್ಥರು, ಮೊದಲು ಗಣಿಗಾರಿಕೆ ನಡೆಸಿ ನಂತರ ಅನುಮತಿ ಕೋರಿರುವ ಅಪರೂಪದ ಬೆಳವಣಿಗೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.ತಮಗೆ ಸೂಚಿಸಿರುವ ಗಡಿಯನ್ನು ಧಿಕ್ಕರಿಸಿ ಆಚೆಯೂ ಗಣಿಗಾರಿಕೆ ನಡೆಸಿರುವ ಆರೋಪ ಎದುರಿಸುತ್ತಿರುವ ಎಸ್.ಬಿ. ಮಿನರಲ್ಸ್‌ಗೆ ಸೇರಿದ ಗಣಿ ಪ್ರದೇಶದ ಮೂಲೆಮೂಲೆಯನ್ನೂ ಅವಲೋಕಿಸಿದ ಸಿಇಸಿ, ಈ ಗಣಿ ಗಡಿಯನ್ನು ಏಕೆ ಸ್ಪಷ್ಟವಾಗಿ ಗುರುತಿಸಿಲ್ಲ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲೆಗೆ ಆಗಮಿಸಿರುವ ಸಿಇಸಿ ಮುಖ್ಯಸ್ಥರು ಸಂಜೆ ಹೊಸಪೇಟೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT