ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ದೂಳಿನೊಳಗಣ ರಾಜಕೀಯ ತಳಮಳ!

Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ):  ಬಳ್ಳಾರಿ ಜಿಲ್ಲೆಯ ರಾಜಕಾರಣ ಎಂದರೆ ಅದು ಗಣಿ ದೂಳಿನೊಂದಿಗೆ ತಳಕು ಹಾಕಿ­ಕೊಂಡಿದೆ. ಇಲ್ಲಿ ಯಾವುದೇ ಚುನಾವಣೆ­ಯಾದರೂ ಗಣಿ ವಿಷಯದ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿ­ಯಿಂದ ಶ್ರೀರಾಮುಲು ಸ್ಪರ್ಧೆ ಮಾಡಿ­ರು­ವುದು ಅದಕ್ಕೆ ಇನ್ನಷ್ಟು ಇಂಬು ಕೊಟ್ಟಿದೆ.

ಈಗ ಇಲ್ಲಿ ಗಣಿಗಾರಿಕೆಯ ಆರ್ಭಟ ಇಲ್ಲ. ಹೆಲಿಕಾಪ್ಟರ್‌ಗಳ ಓಡಾಟ ನಿಂತಿದೆ. ಹೊಸಪೇಟೆ, ಬಳ್ಳಾರಿಯಲ್ಲಿ ಹೆಲಿ­ಪ್ಯಾಡ್‌­ಗಳು ರೈತರ ಒಕ್ಕಲು ಕಣಗಳಾ­ಗಿವೆ. ಬಂಗಾರದಂಗಡಿಯಿಂದ ಹಿಡಿದು ಬಟ್ಟೆ ಅಂಗಡಿಗಳವರೆಗೆ ನೂಕು ನುಗ್ಗಲು ತಪ್ಪಿದೆ. ಬೈಕ್‌, ಕಾರುಗಳ ಕಾರುಬಾರು ಕಡಿಮೆ­ಯಾಗಿದೆ. ಹೊಸಪೇಟೆ, ರಾಮ­ಗಡ, ಸಂಡೂರು, ಬಳ್ಳಾರಿ ಸುತ್ತಲಿನ ಗ್ರಾಮಗಳಲ್ಲಿ ಲಾರಿಗಳ ಸಾಲು ಕರಗಿವೆ. ಆದರೂ ಈಗಲೂ ಗಣಿ ವಿಷಯವೇ ಪ್ರಧಾನವಾಗಿದೆ.

ಸಂಡೂರಿನ ಹೋಟೆಲ್‌ನಲ್ಲಿ ಕುಳಿತ ಸಂಡೂರು ತಾಲ್ಲೂಕು ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಎಂ.ಶಿವಶಂಕರ್‌,  ‘ಇಡೀ ಜಗತ್ತು ಬಳ್ಳಾರಿಯಲ್ಲಿ ಗಣಿ ಲೂಟಿ ನಿಂತು ಹೋಗಿದೆ ಎಂದೇ ಭಾವಿಸಿದೆ. ಆದರೆ ಅದು ಅರ್ಧ ಸತ್ಯ. ಈಗಲೂ ಗಣಿಗಾರಿಕೆ ನಡೆಯುತ್ತಲೇ ಇದೆ. ಆಗ ಸಂಗ್ರಹಿಸಿದ್ದ ಅದಿರನ್ನು ಈಗ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ರಾಜಕೀಯವೂ ಅದರ ಸುತ್ತಲೇ ಸುತ್ತುತ್ತಿದೆ’ ಎಂದರು.

ಅವರ ಮಾತನ್ನು ಪಕ್ಕದಲ್ಲಿಯೇ ಕುಳಿತಿದ್ದ ಶ್ರೀಶೈಲ ಸಮರ್ಥಿಸಿದರು. ‘ಆಗ ಗಣಿ ಲೂಟಿ ಮಾಡಿ ಹಣ ಮಾಡಿ­ಕೊಂಡವರು ಈಗ ಅದನ್ನು ಚೆಲ್ಲುತ್ತಾರೆ. ಆ

ಮೂಲಕವೇ ಚುನಾವಣೆಯನ್ನು ಗೆಲ್ಲುತ್ತಾರೆ’ ಎಂದು ವಾದ ಮಂಡಿಸಿದರು.

‘ಅಕ್ರಮ ಗಣಿಗಾರಿಕೆ ಮತ್ತು ಅದ­ರಿಂದ ಉಂಟಾದ ಹಾನಿಯೇ ಈಗಲೂ ಚುನಾವಣೆಯ ಪ್ರಧಾನ ವಿಷಯ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದ್ದೇವೆ’ ಎಂದರು ಅವರು.

ಹೊಸಪೇಟೆಯ ಸಹಕಾರಿ ಬ್ಯಾಂಕೊಂದರ ಅಧ್ಯಕ್ಷ ವಿಶ್ವನಾಥ್‌ ಹಿರೇಮಠ ಕೂಡ ಗಣಿಗಾರಿಕೆಯ ಪರಿ­ಣಾಮದ ಬಗ್ಗೆಯೇ ಮಾತನಾಡು­ತ್ತಾರೆ. ‘ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯ ಕೆಲವೇ ಕೆಲವು ಜನರಿಗೆ ಲಾಭವಾಗಿದೆ. ಅಕ್ರಮ ಗಣಿಗಾರಿಕೆ ನಡೆಸಿದ್ದು ಕೂಡ ಕೈಬೆರಳೆಣಿಕೆಯಷ್ಟು ಜನರು ಮಾತ್ರ. ಆದರೆ ಅವರಿಂದ ಇಡೀ ಜಿಲ್ಲೆಯ ಜನರಿಗೆ ಕೆಟ್ಟ ಹೆಸರು ಬಂತು. ಕರ್ನಾಟಕದ ಇತರ ಭಾಗದ ಜನರು ಹಾಗೂ ದೇಶದ ಇತರ ಭಾಗದ ಜನರು ಬಳ್ಳಾರಿಯ ಜನರನ್ನು ಕಳ್ಳರು, ದರೋಡೆಕೋರರಂತೆ ನೋಡುತ್ತಾರೆ ಎಂಬ ಕೀಳರಿಮೆ ಇಲ್ಲಿಯ ಜನರಲ್ಲಿ ಇದೆ’ ಎಂದರು.

‘ಇಂತಹ ಕೀಳರಿಮೆಯೇ ಶ್ರೀರಾಮುಲು ಜಯಕ್ಕೂ ಕಾರಣವಾಗ­ಬಹುದು’ ಎಂಬ ಮಾತನ್ನೂ ಅವರು ಸೇರಿಸಿದರು.

‘ಹೌದು ನಮ್ಮ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಆದರೆ ಗಣಿಯಿಂದ ಬಂದ ಹಣದಿಂದ ಎಷ್ಟೋ ಮಂದಿ ಉದ್ಧಾರ ಆಗಿದ್ದಾರೆ. ಜಿಲ್ಲೆ ಅಭಿವೃದ್ಧಿಯನ್ನು ಕಂಡಿದೆ. ಇಲ್ಲಿನ ಜನರ ಜೀವನಮಟ್ಟ ಸುಧಾರಿಸಿದೆ. ಅವರು ಎಲ್ಲಿಯೋ ಗಣಿಗಾರಿಕೆ ನಡೆಸಿದರೆ ನಾವು ಯಾಕೆ ಕೊರಗಬೇಕು? ಅವರು ನಮಗೇನೂ ತೊಂದರೆ ಕೊಟ್ಟಿಲ್ಲವಲ್ಲ’ ಎಂದು ರಾಗಡದ ಸೋಮಶೇಖರ ಹೇಳಿದರು.

ಈ ಚುನಾವಣೆಯ ರಾಜಕೀಯ ಇರೋದೆ ಇಲ್ಲಿ ನೋಡಿ’ ಎಂದು ಮಾತು ಆರಂಭಿಸಿ­ದರು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಮಾಳಗಿ ಶಿವಕುಮಾರ್‌.
2006­ರಿಂದ ಪತ್ರಕರ್ತರಾಗಿ ದುಡಿ-­ಯು­ತ್ತಿದ್ದ ಶಿವಕುಮಾರ್‌್‌ ಗಣಿ ಹಣದ ರುದ್ರ ನರ್ತನ­ದಿಂದ ಅಸಹ್ಯಕ್ಕೆ ಒಳಗಾಗಿ ಅದನ್ನು ಗುಡಿಸಿ ಸ್ವಚ್ಛ ಮಾಡುವುದ­ಕ್ಕಾಗಿಯೇ ಕಸಬರಿಗೆ ಹಿಡಿದಿದ್ದಾರೆ.

‘ಅವರು ಎಲ್ಲಿಯೋ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಜನರ ಭಾವನೆಯೇ ತಪ್ಪು. ಅವರು ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಭೂಮಿ ನಮ್ಮದು. ಅವರು ಕದಿಯುತ್ತಿರುವುದು ನಮ್ಮದೇ ನೈಸರ್ಗಿಕ ಸಂಪತ್ತನ್ನು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿಯೇ ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ. ಜನ ಬೆಂಬಲ ಇದ್ದರೆ ಗಣಿ ಹಣದ ಮದವನ್ನೂ ಎದುರಿಸಬಲ್ಲೆ’ ಎಂಬ ವಿಶ್ವಾಸ ಅವರದ್ದು.

ಬಳ್ಳಾರಿಗೆ ಗಣಿಗಾರಿಕೆ ಹೊಸದೇನೂ ಅಲ್ಲ. ಈ ಜಿಲ್ಲೆಯಲ್ಲಿ ಮೊದಲು ಗಣಿ­ಗಾರಿಕೆ ಆರಂಭಿಸಿದ್ದು ಟಿಪ್ಪೂ ಸುಲ್ತಾನ್‌. ಸುಗ್ಗಲಮ್ಮಗುಡ್ಡದಲ್ಲಿ ಟಿಪ್ಪೂ ಗಣಿ­ಗಾರಿಕೆ ನಡೆಸಿದ್ದ. ನಂತರ 1900ರಲ್ಲಿ ಬೆಲ್ಜಿಯಂ ಕಂಪೆನಿ ಮ್ಯಾಂಗನೀಸ್‌ ಗಣಿ­ಗಾರಿಕೆ ಆರಂಭಿಸಿತು. ಅವರೆಲ್ಲಾ ಇಷ್ಟೊಂದು ದೌಲತ್‌ ಮಾಡಿರಲಿಲ್ಲ ಎಂದು ವಿವರಿಸಿದರು.

ಅಕ್ರಮ ಗಣಿಗಾರಿಕೆಯ ವಿರುದ್ಧ ಎಸ್‌.ಆರ್‌.ಹಿರೇಮಠ ಅವರೊಂದಿಗೆ ಹೋರಾಟ ನಡೆಸಿದ ಶಿವಕುಮಾರ್‌ ಅವರಿಗೂ ಬಳ್ಳಾರಿ ಜನರನ್ನು ಇತರರು ಕಳ್ಳರಂತೆ ನೋಡಿದ ಅನುಭವ­ವಾಗಿದೆ­ಯಂತೆ.

‘ಅಕ್ರಮ ಗಣಿಗಾರಿಕೆ ಹಣದಿಂದ ಆದ ಬಹುದೊಡ್ಡ ದುರಂತ ಎಂದರೆ ಇಲ್ಲಿನ ಜನರಿಗೆ ಉತ್ತರದಾಯಿತ್ವವೇ ಇಲ್ಲ­ದಂತಾ­ಯಿತು. ಸಂವಿಧಾನದತ್ತವಾಗಿ ಸಾಮಾನ್ಯ ಜನರಿಗೆ ನೀಡಿದ ಹಕ್ಕನ್ನು ಕಸಿದು­ಕೊಳ್ಳುವುದು ಕೂಡ ಭ್ರಷ್ಟಾ­ಚಾರ. ಇಂತಹ ವಿಷಯಗಳನ್ನು ಇಟ್ಟು­ಕೊಂಡು ನಾನು ರಾಜಕೀಯ ಆರಂಭಿಸಿ­ದ್ದೇನೆ. ನಾನು ನನ್ನ ಗುರಿಯನ್ನು ಮುಟ್ಟಿಯೇ ಮುಟ್ಟುತ್ತೇನೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

‘ಔರಂಗಜೇಬನ ಕಾಟ ಹೆಚ್ಚಾದಾಗ ಜನರು ಶಿವಾಜಿಗೆ ಕಾದಿದ್ದರಂತೆ. ಆದರೆ ಬಹಳಷ್ಟು ಮಂದಿ ಶಿವಾಜಿ ನಮ್ಮ ಮನೆ­ಯಲ್ಲಿ ಹುಟ್ಟುವುದು ಬೇಡ. ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದು ಬಯಸು­ತ್ತಿದ್ದರಂತೆ. ಬಳ್ಳಾರಿ ಜನತೆಯ ಸ್ಥಿತಿಯೂ ಅದೇ ಆಗಿದೆ. ಗಣಿ ಮಾಲೀಕರ ವಿರುದ್ಧ ಹೋರಾಡಲೇ ಬೇಕು ಎಂಬ ಭಾವನೆ ಜನರಲ್ಲಿ ಇದೆ. ಆದರೆ ಯಾರೂ ಮುಖಂಡತ್ವ ವಹಿಸಲು ಸಿದ್ಧರಿಲ್ಲ. ನನ್ನ ವಯಸ್ಸು ಚಿಕ್ಕದಾದರೂ ನಾನು ನೀರಿಗೆ ಇಳಿದಿದ್ದೇನೆ’ ಎಂದರು ಅವರು.

‘2009ರಲ್ಲಿ ಗಣಿಗಾರಿಕೆ ಬೂಮ್‌ ಆರಂಭವಾಯಿತು. ಪರಿಸ್ಥಿತಿ ಎಷ್ಟು ಹದಗೆಟ್ಟು ಹೋಯಿತು ಎಂದರೆ ಬಳ್ಳಾರಿಯ ಸಾಮಾನ್ಯ ಜನರೂ ಆಕಾಶದಲ್ಲಿಯೇ ಹಾರಾಡುತ್ತಿದ್ದರು. ಹಳ್ಳಿ ಹಳ್ಳಿಯಲ್ಲಿಯೂ ಪ್ರತಿ ಗಂಟೆಗೆ ಒಂದು ಹೊಸ ಬೈಕ್‌, ಪ್ರತಿ 24 ಗಂಟೆಗೆ ಒಂದು ಹೊಸ ಕಾರ್‌ ಬರುತ್ತಿತ್ತು. ಈಗ ಎಲ್ಲ ಭರಾಟೆ ನಿಂತಿದೆ. ಆದರೆ ಹಣ ಮಾತ್ರ ಈಗಲೂ ನೀರಿನಂತೆ ವೆಚ್ಚವಾಗುತ್ತದೆ’ ಎಂದರು ಶ್ರೀಕಾಂತ್‌ ಗೌಡ.

‘ಈ ಬಾರಿ ಗಣಿ ವಿಚಾರ ಚುನಾ­ವಣೆಯ ವಿಷಯವೇ ಅಲ್ಲ. ಗಣಿ ವಿಷಯ ಮುಗಿದು ಹೋಗಿದೆ. ಈಗ ಇಲ್ಲಿ ಗಣಿ­ಗಾರಿಕೆಯೇ ಇಲ್ಲ’ ಎಂದರು ಕಾಂಗ್ರೆಸ್‌ ಅಭ್ಯರ್ಥಿ ಎನ್‌.ವೈ.ಹನುಮಂತಪ್ಪ.

ಗಣಿ ವಿಷಯ ಇಲ್ಲವಾದರೂ ಗಣಿ ಹಣದ ಪ್ರಭಾವ ಇದ್ದೇ ಇದೆಯಲ್ಲ ಎಂದರೆ ‘ಹಣದ ಪ್ರಭಾವ ಇರುತ್ತದೆ. ಅದನ್ನು ಎದುರಿಸಬೇಕು’ ಎಂದರು. ಚುನಾವಣಾ ಆಯೋಗ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಇರುವಾಗ ಹಣ ಹಂಚುವುದು ಸುಲಭವೇ ಎಂದು ಕೇಳಿದರೆ ‘ಅಯ್ಯೋ ಹಣ ಹಂಚುವವರು ರಂಗೋಲಿ ಕೆಳಗೆ ನುಸುಳುತ್ತಾರೆ’ ಎಂದರು.

‘ಗಣಿ ಮಾಲೀಕರು ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷದಲ್ಲಿದ್ದಾರೆ. ಪಕ್ಷ ಬೇರೆ ಬೇರೆಯಾದರೂ ವ್ಯವಹಾರದಲ್ಲಿ ಅವರೆಲ್ಲಾ ಒಂದೆ. ಸುಮ್‌ಸುಮ್ಮನೆ ಬೇರೆ ಬೇರೆ ಪಕ್ಷದಲ್ಲಿರುತ್ತಾರೆ ಅಷ್ಟೆ. ಗಣಿ ಮಾಲೀಕರ ಆರ್ಭಟ ಕಡಿಮೆ­ಯಾಗುವ ತನಕ ಬಳ್ಳಾರಿ ಅಭಿವೃದ್ಧಿ­ಯಾಗಲ್ಲ. ಗಣಿ ಮಸಿಯನ್ನು ಅಳಿಸಿ ಹಾಕಲು, ಗುಡಿಸಿ ಹಾಕಲು ಜನರೆಲ್ಲಾ ಕಾಯು­ತ್ತಿದ್ದಾರೆ. ಮತದಾನದ ಮೊದಲಿನ ಎರಡು ದಿನ ಜನರ ತಲೆ ತಿರುಗಿಸುವುದನ್ನು ಯಾರಾದರೂ ತಡೆದರೆ ಗಣಿ ದೂಳು ಮಾಯ­ವಾಗುತ್ತದೆ’ ಎಂಬ ವಿಶ್ವಾಸ ಟಿ.ಎಂ.ಶಿವಶಂಕರ ಅವರದ್ದು. ಅವರೂ ಕಸಬರಿಕೆಗೆ ಕಾಯುತ್ತಿದ್ದಾರೆ.

ಭಿಕ್ಷುಕರೇ ಮೇಲು!

ಚುನಾವಣೆಯಲ್ಲಿ ಹಣ ಪಡೆದು ಮತದಾನ ಮಾಡುವ ಜನರಿಗಿಂತ ಭಿಕ್ಷೆ ಬೇಡುವವರೇ ಮೇಲು ಎಂಬ ಸಿದ್ಧಾಂತ ಸಂಡೂರು ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಶ್ರೀಶೈಲ ಅವರದ್ದು. ಇದಕ್ಕೆ ಅವರು ಸಮರ್ಥನೆಯನ್ನೂ ನೀಡುತ್ತಾರೆ.

ಮತ ಹಾಕಲು ಒಬ್ಬ ವ್ಯಕ್ತಿ 500 ರೂಪಾಯಿ ಪಡೆದ ಎಂದುಕೊಳ್ಳಿ. ಆತನಿಗೆ ಹಣ ಸಿಕ್ಕಿದ್ದು 5 ವರ್ಷದಲ್ಲಿ ಅದೊಂದೇ ದಿನ. ಅಂದರೆ ಆತ 1825 ದಿನಕ್ಕೆ ಪಡೆದ ಹಣ ಅದು. ಅಂದರೆ ಆತ ದಿನಕ್ಕೆ ಪಡೆದಿದ್ದು 27.39 ಪೈಸೆ. ಈಗ 27 ಪೈಸೆಗೆ ಏನು ಬರುತ್ತದೆ. ಭಿಕ್ಷುಕ ಕೂಡ ನಾಲ್ಕಾಣೆ ನೀಡಿದರೆ ತೆಗೆದುಕೊಳ್ಳುವುದಿಲ್ಲ. ಹಣ ಪಡೆದು ಮತ ಚಲಾಯಿಸುವವರು ಭಿಕ್ಷುಕರಿಗಿಂತ ಕಡೆ ಅಲ್ಲದೆ ಇನ್ನೇನು? ಸ್ವಾಭಿಮಾನದಿಂದ ಪ್ರತಿ ದಿನ 27 ಪೈಸೆ ಗಳಿಸದಷ್ಟು ಹೀನರೆ ನಾವು?

ಹೊಲದತ್ತ ರೈತರು!

ಅಕ್ರಮ ಗಣಿಗಾರಿಕೆಗೆ ತಡೆ ಬಿದ್ದ ಮೇಲೆ ರೈತರು ಮತ್ತೆ ಹೊಲದತ್ತ ಹೋಗುತ್ತಿದ್ದಾರೆ ಎಂದು ಹೇಳುತ್ತಾರೆ ನಾಗಭೂಷಣ.
ಗಣಿಗಾರಿಕೆ ಜೋರಾಗಿದ್ದ ಸಂದರ್ಭದಲ್ಲಿ ಗುಡ್ಡ ಬೆಟ್ಟದ ಬಳಿಯ ಜಮೀನುಗಳನ್ನು ಹೊಂದಿದ ರೈತರು ಬೇಸಾಯ ಮಾಡುತ್ತಲೇ ಇರಲಿಲ್ಲ. ಬೆಟ್ಟದಿಂದ ಹರಿದು ಬರುವ ಅದಿರನ್ನು ಒಟ್ಟು ಮಾಡಿ ಮಾರಿ ಬದುಕುತ್ತಿದ್ದರು. ಅದಿರು ಲಾರಿ ಸಾಗುವಾಗ ಅದರಿಂದ ಉದುರಿ ಬೀಳುವ ಅದಿರನ್ನು ಹೆಕ್ಕಿ ನೆಮ್ಮದಿಯ ಬದುಕನ್ನು ಕಾಣುತ್ತಿದ್ದರು. ಈಗ ಅದಿರು ಲಾರಿಯೂ ಇಲ್ಲ. ರಸ್ತೆಯ ಮೇಲೆ ಅದಿರು ಉದುರುವುದಿಲ್ಲ. ಬೆಟ್ಟದಿಂದ ಅದಿರು ಹರಿದು ಬರುವುದಿಲ್ಲ. ಅದಕ್ಕೆ ರೈತರು ಮತ್ತೆ ಬೇಸಾಯದತ್ತ ಮುಖ ಮಾಡುತ್ತಿದ್ದಾರೆ. ಹೊಲಗಳಲ್ಲಿ ಈಗ ಮತ್ತೆ ಈರುಳ್ಳಿ, ಮೆಕ್ಕೆಜೋಳ, ಸೂರ್ಯಕಾಂತಿ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT