ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಪುನಶ್ಚೇತನ ಅನುಷ್ಠಾನ ಚುರುಕು

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಆರೋಪದ ಉರುಳು ಸುತ್ತಿಕೊಂಡಿರುವ ಗಣಿ ಕಂಪೆನಿಗಳು ಮತ್ತೆ ಗಣಿಗಾರಿಕೆ ಆರಂಭಿಸಲು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕಿರುವ ಗಣಿ ಪ್ರದೇಶದ ಪುನಶ್ಚೇತನ ಮತ್ತು ಪುನರುಜ್ಜೀವನ (ಆರ್ ಅಂಡ್ ಆರ್) ಪ್ರಕ್ರಿಯೆಗೆ ಜಿಲ್ಲೆಯ ಅನೇಕ ಗಣಿ ಮಾಲೀಕರು ಚಾಲನೆ ನೀಡಿದ್ದಾರೆ.

ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಗಳಿಂದ ಪ್ರಮಾಣಪತ್ರ ಪಡೆದೂ, ನಿಯಮ- ನಿಬಂಧನೆಗಳನ್ನು ಉಲ್ಲಂಘಿಸಿರುವುದೇ ಅಕ್ರಮದ ಉರುಳಿಗೆ ಸಿಲುಕಿಕೊಳ್ಳಲು ಕಾರಣವಾಗಿದ್ದರಿಂದ, ಇದೀಗ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ಪಡೆಯಲು `ಆರ್‌ಅಂಡ್‌ಆರ್' ಅನುಷ್ಠಾನಕ್ಕೆ ಒತ್ತು ನೀಡಲೇಬೇಕಿದೆ.

ಏನಿದು ಆರ್‌ಅಂಡ್‌ಆರ್?: ಗಣಿಗಾರಿಕೆಗೆ ಪರವಾನಗಿ ಪಡೆಯುವವರಿಗೆ ಭಾರತೀಯ ಗಣಿ ಮಂಡಳಿ (ಐಬಿಎಂ) ನಿಯಮಗಳ ಪ್ರಕಾರ ಹತ್ತಾರು ನಿಬಂಧನೆಗಳನ್ನು ವಿಧಿಸಲಾಗುತ್ತದೆ. ಅವುಗಳಲ್ಲಿ ಅರಣ್ಯ ಸಂಪತ್ತಿನ ರಕ್ಷಣೆ ಪ್ರಮುಖವಾಗಿದೆ.

ಅತ್ಯಮೂಲ್ಯವಾದ ಕಬ್ಬಿಣದ ಅದಿರಿನ ಸಂಪತ್ತನ್ನು ಹೊಂದಿರುವ ಗಣಿ ಪ್ರದೇಶ  ಸರ್ಕಾರದ ಒಡೆತನದ ಅರಣ್ಯ ಭೂಮಿಯಲ್ಲಿ ಇರುವುದರಿಂದ ಅಲ್ಲಿ ಸದಾ ಹಸಿರಿರಬೇಕು. ಗಣಿ ದೂಳು ಅರಣ್ಯ ಪ್ರದೇಶದಲ್ಲಿನ ಗಿಡ- ಮರಗಳಿಗೆ ಅಡ್ಡಿಪಡಿಸದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ಗಣಿತ್ಯಾಜ್ಯ ಮಳೆ ನೀರಿನೊಂದಿಗೆ ಹರಿದುಕೊಂಡು ಮುಂದಕ್ಕೆ ಹೋಗದಂತೆ ತಡೆಯಬೇಕು.  ಅರಣ್ಯದಲ್ಲಿ ವಾಸಿಸುವ ವನ್ಯಮೃಗಗಳು, ಪಕ್ಷಿ ಸಂಕುಲಕ್ಕೆ ಗಣಿಗಾರಿಕೆಯಿಂದ ಉಂಟಾಗುವ ಮಾಲಿನ್ಯದಿಂದ ಯಾವುದೇ ಅಡ್ಡಿ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಅದಿರನ್ನು ಸಾಗಿಸುವ ಮಾರ್ಗದಗುಂಟ ಇರುವ ಹೊಲ- ಗದ್ದೆಗಳಲ್ಲಿನ ಬೆಳೆಗಳಿಗೂ ವ್ಯತಿರಿಕ್ತ ಪರಿಣಾಮ ಅಗಬಾರದು ಎಂಬೆಲ್ಲ ನಿಯಮಗಳು ಜಾರಿಯಲ್ಲಿವೆ. 10 ವರ್ಷಗಳ ಅವಧಿಯಲ್ಲಿ ಈ ನಿಯಮಗಳನ್ನು ಪಾಲಿಸದೆ, ಮನಬಂದಂತೆ ಗಣಿಗಾರಿಕೆ ಮಾಡಿ, ನಿಬಂಧನೆಗಳ ಉಲ್ಲಂಘನೆ ಮಾಡಿರುವುದರಿಂದ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಹಾಗೂ ಭಾರತೀಯ ಅರಣ್ಯ ಸಂಶೋಧನಾ ಶಿಕ್ಷಣ ಮಂಡಳಿಯ (ಐಸಿಎಫಾರ್‌ಇ) ನಿಯೋಗ ಈ ಗಣಿ ಪ್ರದೇಶಗಳ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಿ ಆರ್ ಅಂಡ್ ಆರ್ ಅನುಷ್ಠಾನಕ್ಕೆ ಶಿಫಾರಸು ಮಾಡಿವೆ.

ಮುಖ್ಯವಾಗಿ, ಅರಣ್ಯೀಕರಣಕ್ಕೆ ಆದ್ಯತೆ ಹಾಗೂ ಅರಣ್ಯಕ್ಕೆ ಹಾನಿಯಾಗದ ಕ್ರಮಗಳ ಕುರಿತು `ಐಸಿಎಫ್‌ಆರ್‌ಇ' ಸಲಹೆ- ಸೂಚನೆ ನೀಡಿದ್ದು, ಗಣಿ ಪ್ರದೇಶದ ಅಂಚಿನಲ್ಲಿರುವ ಹಳ್ಳ- ತೊರೆಗಳಿಗೆ ಚೆಕ್ ಡ್ಯಾಂ ಮತ್ತು ಚಿಕ್ಕಚಿಕ್ಕ `ಗಲ್ಲಿ ಚೆಕ್ಸ್' ನಿರ್ಮಿಸಬೇಕು ಎಂದು ಹೇಳಿದೆ. ಗಣಿ ತ್ಯಾಜ್ಯ ಶೇಖರಿಸುವ (ಡಂಪ್ ಯಾರ್ಡ್) ಕೆಳಗಿರುವ ಇಳಿಜಾರು ಜಾಗೆಯಲ್ಲಿ ತಡೆಗೋಡೆ (ರಿಟೇನಿಂಗ್ ವಾಲ್) ನಿರ್ಮಿಸಿ ಸವಕಳಿ ತ್ಯಾಜ್ಯ ಸುಲಭವಾಗಿ ಹಳ್ಳದ ಮೂಲಕ ಹರಿದು ಹೋಗದಂತೆ ನೋಡಿಕೊಳ್ಳುವುದು, ಗಣಿ ತ್ಯಾಜ್ಯವಿರುವ ಪ್ರದೇಶದಲ್ಲೂ ಮಣ್ಣು ಕೊಚ್ಚಿ ಹೋಗಿ ಗಿಡ- ಮರಗಳಿಗೆ ಅಡ್ಡಿಪಡಿಸುವುದನ್ನು ತಡೆಯಲು ದೊಡ್ಡ ಜಲ್ಲಿಗಳಿಂದ ತೆರೆದ ಚರಂಡಿ ನಿರ್ಮಿಸುವುದು, ಹಳೆಯ ತ್ಯಾಜ್ಯದ ಮೇಲೆ ಹುಲ್ಲು ಹಾಸನ್ನು (ಜಿಯೋ ಟೆಕ್ಸ್ ಟೈಲಿಂಗ್) ಬೆಳೆಸುವುದು, ಇದೇ ಜಾಗೆಯಲ್ಲಿ ಸಸಿ ನೆಡುವುದು, ಗಣಿ ಪ್ರದೇಶಕ್ಕೆ ಸಂಬಂಧಿಸಿದ ಜಾಗೆಯಲ್ಲಿ ಅಲ್ಲಲ್ಲಿ ಹಣ್ಣಿನ ಗಿಡ ನೆಟ್ಟು ಪೋಷಿಸುವ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ.

ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ಕೋರಿರುವ ಜಿಲ್ಲೆಯಲ್ಲಿನ `ಎ', `ಎ- ಪ್ಲಸ್' ಮತ್ತು `ಬಿ' ವರ್ಗಕ್ಕೆ ಸೇರಿರುವ 40ಕ್ಕೂ ಹೆಚ್ಚು ಗಣಿಗಳಲ್ಲಿ ಆರ್ ಅಂಡ್ ಆರ್ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, `ಐಸಿಎಫ್‌ಆರ್‌ಇ' ಮತ್ತು `ಸಿಇಸಿ' ಸೂಚನೆಯ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಮೀಕ್ಷೆ ನಡೆಸಿ, ಅನುಷ್ಠಾನಕ್ಕೆ ಸಮರ್ಪಕ ಕ್ರಮ ಕೈಗೊಂಡಿರುವುದು ಸಾಬೀತಾದರೆ ಮಾತ್ರ ಅನುಮತಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT