ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಹಗರಣ: ಮಾಜಿ ಸಿ.ಎಂಗಳ ವಿರುದ್ಧ ತನಿಖೆಗೆ ಆಗ್ರಹ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಅವರ ಕಾಲದಲ್ಲಿ ನಡೆದ ಗಣಿ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬುಧವಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಒತ್ತಾಯಿಸಿದರು.

`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಬಿಐ ತನಿಖೆಗೆ ಒಪ್ಪಿಸಿದಂತೆ ಮೂರು ಮಾಜಿ ಮುಖ್ಯಮಂತ್ರಿಗಳನ್ನೂ ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಬಗೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗೆ ಪತ್ರ ಬರೆಯಲಾಗಿದೆ. ಸಿಇಸಿ ಅವರು ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿ ಮೇ 3 ರಂದು ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಸರ್ಕಾರಕ್ಕೆ ಮೇ 30 ರೊಳಗೆ ಏನಾದರೂ ಪ್ರತಿಕ್ರಿಯೆ ನೀಡಬಹುದೆಂದು ನಿರೀಕ್ಷಿಸಲಾಗಿದೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಹೈಕೋರ್ಟ್ ಈ ಮೂವರೂ ಮಾಜಿ ಮುಖ್ಯಮಂತ್ರಿಗಳ ಹಗರಣಗಳ ತನಿಖೆಯಾಗಬೇಕು ಎಂದು ಆದೇಶ ನೀಡಿದೆ. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಲೇಬೇಕು~ ಎಂದು ಆಗ್ರಹಿಸಿದರು.

`ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಒರಿಯೆಂಟ್ ಗೋವಾ ಎಕ್ಸಪೋರ್ಟ್ ಕಂಪೆನಿಯ ಸ್ಥಾಪನೆಯಾಯಿತು. ಅದರಲ್ಲಿ ಅವರ ಅಳಿಯನ ಪಾತ್ರವೇನು ಎಂಬುದು ತಿಳಿಯಬೇಕು. ಅಲ್ಲಿ ನಡೆದ ಹಗರಣಗಳು ಬಯಲಾಗಬೇಕು~ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ` ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಗಣಿಗಾರಿಕೆಗೆ ಅನುಮತಿ ನೀಡಿದ್ದು ಸಂಪುಟದ ನಿರ್ಧಾರವಾಗಿತ್ತು ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಂಪುಟದ ನಿರ್ಧಾರವೆಂದರೆ ಅದಕ್ಕೆ ಇವರು ಜವಾಬ್ದಾರರಲ್ಲವೆ~ ಎಂದು ಪ್ರಶ್ನಿಸಿದರು.

`ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಈ ಗಣಿ ಹಗರಣ ತನ್ನ ಉತ್ಕೃಷ್ಟವಾದ ಸ್ಥಿತಿಯನ್ನು ತಲುಪಿತು. ಸಿಇಸಿಗೆ ಬರೆದಿರುವ ಪತ್ರದಂತೆ ಈ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸಿಬಿಐ ತನಿಖೆಯಾಗಲೇಬೇಕು~ ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ` ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗಿನಿಂದಲೇ ಗಣಿ ಹಗರಣ ಆರಂಭವಾಗಿದ್ದು. ಗ್ರಾನೈಟ್ ಯಥೇಚ್ಛವಾಗಿ ವಿದೇಶಕ್ಕೆ ಸರಬರಾಜಾಗುವ ಮೂಲಕ ಗಣಿ ದಂಧೆ ಆರಂಭವಾಯಿತು~ ಎಂದು ಆರೋಪಿಸಿದರು.

`ಲೋಕಾಯುಕ್ತ ವರದಿಯಲ್ಲಿ ಎಸ್.ಎಂ.ಕೃಷ್ಣರ ಕಾಲದಲ್ಲಿ ನಡೆದ ಗಣಿ  ಹಗರಣಗಳ ಬಗ್ಗೆ ಇದೆ. ಆದರೆ, ಎಸ್.ಎಂ.ಕೃಷ್ಣ ಅವರ ಹೆಸರಿಲ್ಲ. ಗಣಿ ಹಗರಣದಲ್ಲಿ ಯಡಿಯೂರಪ್ಪ ಅವರು ಮಾತ್ರವಲ್ಲದೆ, ಈ ಮೂರೂ ಮಾಜಿ ಮುಖ್ಯಮಂತ್ರಿಗಳ ಕಾಲದಲ್ಲೂ ಗಣಿ ಹಗರಣ ಯಥೇಚ್ಛವಾಗಿ ನಡೆದಿದೆ. ಆದ್ದರಿಂದ ಗಣಿ ಹಗರಣದ ಎಲ್ಲರಿಗೂ ಶಿಕ್ಷೆಯಾಗಲೇಬೇಕು. ಅನೇಕ ಐಎಎಸ್, ಕೆಎಎಸ್, ಅರಣ್ಯಾಧಿಕಾರಿಗಳು ಎಲ್ಲರೂ ಶಾಮೀಲಾಗಿದ್ದಾರೆ.  ತಪ್ಪಿತಸ್ಥರ ವಿರುದ್ಧ ತನಿಖೆಯಾಗಿ ಕ್ರಮ ಕೈಗೊಳ್ಳಲೇಬೇಕು~ ಎಂದು ಹೇಳಿದರು.

`ಮುಖ್ಯಮಂತ್ರಿಗಳು ಲೋಕಾಯುಕ್ತ ನೇಮಕಕ್ಕೆ ಮೀನಮೇಷ ಎಣಿಸುತ್ತಿರುವುದು ನಾನಾ ಅನುಮಾನಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಲೋಕಾಯುಕ್ತರನ್ನು ಆದಷ್ಟು ಬೇಗ ನೇಮಕ ಮಾಡಲಿ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT