ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ ಅಕ್ರಮ ಶೀಘ್ರ ಸಾಬೀತು

Last Updated 2 ಜೂನ್ 2011, 6:55 IST
ಅಕ್ಷರ ಗಾತ್ರ

ರಾಯಚೂರು: ಬಳ್ಳಾರಿ ರೆಡ್ಡಿ ಸಚಿವರು ನಡೆಸಿದ ಅಕ್ರಮ ಗಣಿಗಾರಿಕೆ, ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ರೀತಿ, ಈ ದೇಶಕ್ಕೆ ಆದ ನಷ್ಟ ಹೀಗೆ ಎಲ್ಲ ಅಂಶಗಳನ್ನು ಸುಪ್ರೀಂ ಕೋರ್ಟ್ ಎದುರು ತಮ್ಮ ಸಂಸ್ಥೆಯು ಜನ ಸಮುದಾಯದ ಸಹಕಾರದಿಂದ ಮಂಡಿಸಿದೆ. ಈಗ ಅವರು ಸುಪ್ರೀಂ ಕೋರ್ಟ್‌ನಿಂದ ಬಚಾವಾಗಲು ಸಾಧ್ಯವೇ ಇಲ್ಲ. ಅವರು ನಡೆಸಿದ ಎಲ್ಲ ರೀತಿಯ ಅಕ್ರಮ ಸಾಬೀತಾಗುವ ಕಾಲ ಸನ್ನಿಹಿತವಾಗಿದೆ. ಅವರಿಗೆ ಜೈಲುವಾಸ ಖಚಿತ ಎಂದು ಸಮಾಜ ಪರಿವರ್ತನ ಸಮಿತಿಯ ಅಧ್ಯಕ್ಷ ಹಾಗೂ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ ಸಂಚಾಲಕ ಎಸ್.ಆರ್ ಹಿರೇಮಠ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ಭಾಗದಲ್ಲಿನ 99 ಗಣಿಗಳಲ್ಲಿ ನಡೆಯುತ್ತಿದ್ದ ಚಟುವಟಿಕೆ ಬಂದ್ ಆಗಿದೆ.  ಅಕ್ರಮ ಗಣಿಗಾರಿಕೆ ಸಂಪತ್ತಿನಿಂದ ಅಹಂಕಾರದಿಂದ ವರ್ತಿಸುತ್ತಿದ್ದ ಬಳ್ಳಾರಿ ರೆಡ್ಡಿ ಸಹೋದರರ ಧ್ವನಿ ತಗ್ಗಿದೆ. ಅಕ್ರಮ ಗಣಿಗಾರಿಕೆ ಮೂಲಕ ನಾಲ್ಕು ಸಾವಿರ ಕೋಟಿಯಷ್ಟು ಈ ರಾಜ್ಯದ ನಿಸರ್ಗ ಸಂಪತ್ತು ಲೂಟಿ ಹೊಡೆದವರು ಮರಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಬೇಕು ಎಂದು ತಿಳಿಸಿದರು.

ಈ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಎಸ್.ಎಂ ಕೃಷ್ಣ ಅವರು ಬಾಗಿಲು ತೆರೆದರು. ನಂತರ ಧರ್ಮಸಿಂಗ್, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅಕ್ರಮಗಳು ಮುಂದುವರಿದವು. ಈಗ ರಾಜ್ಯದ ನಿಸರ್ಗ ಸಂಪತ್ತು ಲೂಟಿದ ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಈಗಿನ ಮುಖ್ಯಮಂತ್ರಿ ಅವರ ಪುತ್ರರಿಗೆ ಸಂಬಂಧಿಸಿದ ಟ್ರಸ್ಟ್ ಹಣ ಪಡೆದ ಪ್ರಕರಣ ಬಯಲಾಗಿದೆ. ಈ ಮುಚ್ಚಳಿಕೆ ಪತ್ರದ ವಿಚಾರಣೆಯೂ ಸುಪ್ರೀಂ ಕೋರ್ಟ್‌ನಲ್ಲಿದೆ. ಈಗ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಜುಲೈ ಮೊದಲ ವಾರದಲ್ಲಿ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.

ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಮುಂದೆ ಎದುರಿಸಬೇಕಾದ ಅಪಾಯ ಮನಗಂಡು ಬಳ್ಳಾರಿ ರೆಡ್ಡಿ ಸಚಿವರು ಸಚಿವ ಸಂಪುಟಕ್ಕೆ ಸೇರಿದ ವಿಚಾರಕ್ಕೆ ಸಂಬಂಧವಿಲ್ಲ ಎಂದು ದೂರ ಸರಿಯುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೆಡ್ಡಿ ಸಚಿವರ ಜೊತೆ ಸಚಿವ ಸೋಮಣ್ಣ ಅವರ ಪುತ್ರ ನಡೆಸಿದ ಅಕ್ರಮ ಗಣಿಗಾರಿಕೆಯನ್ನೂ ಸಮರ್ಥಿಸಿಕೊಳ್ಳಲು ಮಹಾ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗಾಗಿ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ  ರಾಘವೇಂದ್ರ ಕುಷ್ಟಗಿ, ಸಂಘಟನೆಯ ವಿರೇನ್ ಲೋಬೋ, ಮನೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT