ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ: ಇಂದು ಬಳ್ಳಾರಿಗೆ ಕೇಂದ್ರ ಅಧಿಕಾರಿಗಳ ಭೇಟಿ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮರ ಗಿಡಗಳನ್ನು ಬೆಳೆಸುವ ಮೂಲಕ ಯಾವ ರೀತಿಯಲ್ಲಿ ಪರಿಸರವನ್ನು ಪುನರುಜ್ಜೀವನಗೊಳಿಸಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಯ ಮಹಾನಿರ್ದೇಶಕ ಡಾ.ವಿ.ಕೆ. ಬಹುಗುಣ ನೇತೃತ್ವದಲ್ಲಿ ಕೇಂದ್ರದ ಅಧಿಕಾರಿಗಳ ತಂಡ ಗುರುವಾರ ಹಾಗೂ ಶುಕ್ರವಾರ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಲಿದೆ.

ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಈ ತಂಡ ಬಳ್ಳಾರಿ ಜಿಲ್ಲೆಯಲ್ಲಿ ಅಧ್ಯಯನ ಕೈಗೊಳ್ಳುತ್ತಿದ್ದು, ಗಣಿಗಾರಿಕೆಯಿಂದ ಪರಿಸರ ಹಾಗೂ ಜನರ ಸಾಮಾಜಿಕ ಜೀವನದ ಮೇಲೆ ಬೀರಿರುವ ದುಷ್ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸುವುದರ ಜತೆಗೆ, ಭವಿಷ್ಯದಲ್ಲಿ ಹೇಗೆ ಪರಿಸರವನ್ನು ಕಾಪಾಡಬಹುದು ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲಿದೆ.

 ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ, ಗಣಿ, ಜೀವವೈವಿಧ್ಯ ಹಾಗೂ ಸಾಮಾಜಿಕ ತಜ್ಞರು ಈ ಅಧ್ಯಯನ ತಂಡದಲ್ಲಿರುತ್ತಾರೆ. ಸುಮಾರು 20ರಿಂದ 25 ಮಂದಿ ಅಧಿಕಾರಿಗಳ ತಂಡ ಗಣಿಗಾರಿಕೆಯಿಂದ ತೊಂದರೆಗೊಳಗಾದ ಬಳ್ಳಾರಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಅಂತಿಮವಾಗಿ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿ ಕುರಿತು ಕೇಂದ್ರ ಉನ್ನತ ಮಟ್ಟದ ಸಮಿತಿಯು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ನಂತರ ಈ ಮೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ.

ಪ್ರಮುಖವಾಗಿ ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿ, ಪರಿಸರ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
 
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಪರಿಸರದ ಮೇಲಾಗಿರುವ ಹಾನಿಯನ್ನು ಸರಿಪಡಿಸಲು ಹಾಗೂ ಬಹುಮುಖ್ಯವಾಗಿ ಜೀವವೈವಿಧ್ಯವನ್ನು ಕಾಪಾಡುವುದರ ಜತೆಗೆ ತೊಂದರೆಗೊಳಗಾದ ಜನರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಈ ತಂಡವನ್ನು ಕೋರಿದೆ.

ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಭಾರತೀಯ ಮರ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಗೆ 14 ಕೋಟಿ ರೂಪಾಯಿ ನೀಡಲು ಒಪ್ಪಿಗೆ ಸೂಚಿಸಿದೆ. ಒಟ್ಟಾರೆ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ಈ ತಂಡವು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದರ ಪ್ರಥಮ ಭೇಟಿಯಾಗಿ ತಂಡವು ಗುರುವಾರ ಬಳ್ಳಾರಿಗೆ ಭೇಟಿ ನೀಡುತ್ತಿದೆ.

ಆನಂತರ ಅಧೀನ ಅಧಿಕಾರಿಗಳ ತಂಡವು ಮೂರು ಜಿಲ್ಲೆಗಳಲ್ಲಿ ಅಧ್ಯಯನ ನಡೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪೂರಕವಾದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT