ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆಗೆ ಆಸ್ಪದ ಇಲ್ಲ: ಸಚಿವ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಪಶ್ಚಿಮ ಘಟ್ಟದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಇಲ್ಲಿ ಹೇಳಿದರು.

ನಗರದ ಯಲಹಂಕ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ ನಡೆದ ಅರಣ್ಯ ಇಲಾಖೆಯ `ಹುಲಿ ಸಂರಕ್ಷಣಾ ವಿಶೇಷ ಪಡೆ~ ಸಿಬ್ಬಂದಿಯ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಭಾಗ ವಹಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಪಿ.ಕೆ. ಮಿಶ್ರ ನೇತೃತ್ವದ ಸಮಿತಿ ಪಶ್ಚಿಮ ಘಟ್ಟದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಶಿಫಾರಸು ಮಾಡಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಅರಣ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಣಿಗಾರಿಕೆಯಿಂದ ಬಳ್ಳಾರಿ ಸೇರಿದಂತೆ ಹಲವೆಡೆ ಈಗಾಗಲೇ ಅರಣ್ಯಕ್ಕೆ ಧಕ್ಕೆ ಯಾಗಿದೆ.

ಕುದುರೆಮುಖದಲ್ಲಿ ಈಗಾಗಲೇ ಗಣಿಗಾರಿಕೆ ಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಜೀವ ವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ಯಾವುದೇ ಕಾರ ಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದರು.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಲ್ಕೆರೆಯಲ್ಲಿ `ಜಾ ಟ್ರಾಪ್~ ಬಳಸಿ ಹುಲಿ ಹತ್ಯೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಕಲ್ಕೆರೆಯಲ್ಲಿ ಹುಲಿಯೊಂದು ಅನಾರೋಗ್ಯದಿಂದ ಮೃತಪಟ್ಟಿದೆ. `ಜಾ ಟ್ರಾಪ್~ ಬಳಸಿ ಹುಲಿ ಹತ್ಯೆ ಮಾಡಿಲ್ಲ. ಸಿಬ್ಬಂದಿ ಸಹ ಅಲ್ಲಿ ಸಂಪೂರ್ಣ ವಾಗಿ ಶೋಧನೆ ನಡೆಸಿದ್ದಾರೆ. ಆದರೆ ಜಾ ಟ್ರಾಪ್ ಪತ್ತೆಯಾಗಿಲ್ಲ~ ಎಂದು ಸ್ಪಷ್ಟಪಡಿಸಿದರು.

ಹಾಸನ ಬಳಿಯ ಆಲೂರು ಸುತ್ತಮುತ್ತ ಹಾವಳಿ ನಡೆಸುತ್ತಿರುವ ಆನೆಗಳನ್ನು ಸ್ಥಳಾಂತರ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಕೆಲ ಸಂಘಟನೆ ಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ನ್ಯಾಯಾ ಲಯ ಈ ಬಗ್ಗೆ ಮಾಹಿತಿ ಕೇಳಿದೆ. ಎಲ್ಲ ಮಾಹಿತಿಯನ್ನು ಸಲ್ಲಿಸಿ ಆನೆ ಸ್ಥಳಾಂತರದ ಅಗತ್ಯವನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ಒಪ್ಪಿಗೆ ಸಿಕ್ಕ ನಂತರ 25 ಆನೆಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದರು.

ಹುಲಿ ಸಂರಕ್ಷಣಾ ವಿಶೇಷ ಪಡೆ: ಹುಲಿ ಸಂರಕ್ಷಣಾ ವಿಶೇಷ ಪಡೆಯ ಬಗ್ಗೆ ಮಾತನಾಡಿದ ಅವರು, ಹುಲಿ ಹಾಗೂ ಆನೆಗಳ ಸಂರಕ್ಷಣೆಯಲ್ಲಿ ರಾಜ್ಯ ಮುಂಚೂಣಿ ಯಲ್ಲಿದೆ. ರಾಜ್ಯದಲ್ಲಿ ಸುಮಾರು 300 ಹುಲಿ ಮತ್ತು 6,000 ಆನೆಗಳಿವೆ. ಇವುಗಳನ್ನು ಸಂರಕ್ಷಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಹುಲಿಗಳ ಸಂರಕ್ಷಣೆ ಗೆಂದು ದೇಶದಲ್ಲೇ ಪ್ರಥಮ ಬಾರಿಗೆ ಹುಲಿ ಸಂರಕ್ಷಣಾ ವಿಶೇಷ ಪಡೆ ರಚಿಸಲಾಗಿದೆ.
 
ಹದಿನಾಲ್ಕು ಮಂದಿ ವನಪಾಲಕರು ಮತ್ತು ನಲವತ್ತು ಮಂದಿ ವನ ರಕ್ಷಕರಿಗೆ ಪೊಲೀಸ್ ಹಾಗೂ ಕಮಾಂಡೊ ತರಬೇತಿ ನೀಡಲಾಗಿದೆ. ಈ ಸಿಬ್ಬಂದಿಯನ್ನು ಹುಲಿ ಸಂರಕ್ಷಣಾ ಅರಣ್ಯಕ್ಕೆ ನಿಯೋಜಿಸಲಾಗುತ್ತದೆ ಎಂದರು.

ಅರಣ್ಯ ರಕ್ಷಣೆಗೆ ಎಲ್ಲ ರೀತಿಯ ಕ್ರಮ ತೆಗೆದು ಕೊಳ್ಳಲಾಗಿದೆ. ಇದಕ್ಕೆ ಸಿಬ್ಬಂದಿಯ ಸಹಕಾರವೂ ಅಗತ್ಯವಾಗಿದೆ. ಸಿಬ್ಬಂದಿಗೆ ಅಗತ್ಯ ಸೌಲಭ್ಯ ಮತ್ತು ಭತ್ಯೆ ಕೊಡಿಸಲು ಯತ್ನಿಸಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ 325 ಕೋಟಿ ರೂಪಾಯಿ ಮೀಸಲಿರಿಸ ಲಾಗುತ್ತದೆ ಎಂದರು.

ಪೊಲೀಸ್ ತರಬೇತಿ ವಿಭಾಗದ ಐಜಿಪಿ ಡಾ.ಎಸ್. ಪರಶಿವಮೂರ್ತಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಕೆ. ಸಿಂಗ್, ಹೆಚ್ಚು ವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹೊಸಮಠ, ಎನ್‌ಟಿಸಿಎ ಡಿಐಜಿ ಎಚ್.ಎಸ್. ನೇಗಿ ಉಪಸ್ಥಿತರಿದ್ದರು.

ಸಿಬ್ಬಂದಿಗೆ ತರಬೇತಿ
ಹುಲಿ    ಸಂರಕ್ಷಣಾ ವಿಶೇಷ ಪಡೆಯ ಸಿಬ್ಬಂದಿಗೆ ಹದಿಮೂರು ವಾರಗಳ ತರಬೇತಿ ನೀಡಲಾಗಿದೆ. ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದಲ್ಲಿ ಏಳು ವಾರ ಹಾಗೂ ರಾಜ್ಯ ಮೀಸಲು ಪಡೆ ಕೇಂದ್ರದಲ್ಲಿ ಆರು ವಾರಗಳ ತರಬೇತಿ ನೀಡಲಾಗಿದೆ. ತರಬೇತಿಯನ್ನು ಒಳಾಂಗಣ ಮತ್ತು ಹೊರಾಂಗಣ ಎಂದು ವಿಂಗಡಿಸಲಾಗಿತ್ತು.

ಗುಪ್ತವಾರ್ತೆ ಸಂಗ್ರಹ, ಪ್ರಥಮ ಚಿಕಿತ್ಸೆ, ವಿಷ ಪೂರಿತ ಜಂತುಗಳು ಕಚ್ಚಿದಾಗ ನೀಡಬೇಕಾದ ಚಿಕಿತ್ಸೆ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯ ಆರ್. ರಾಜಶೇಖರ್ ಮಾಹಿತಿ ನೀಡಿದರು.

ಶಸ್ತ್ರಾಸ್ತ್ರಗಳ ಬಗ್ಗೆ ಸಂಪೂರ್ಣವಾಗಿ ತರಬೇತುಗೊಳಿಸಲಾಗಿದೆ. ಎಸ್‌ಎಲ್‌ಆರ್, ಲೈಟ್ ಮೆಷಿನ್ ಗನ್, ಪಿಸ್ತೂಲ್, ಗ್ರೆನೇಡ್ ಮತ್ತು ಅಶ್ರು ವಾಯು ಬಳಕೆಯನ್ನು ಹೇಳಿಕೊಡಲಾಗಿದೆ. ಗುರಿ ಇಡುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT