ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆಗೆ ಶಾಸಕರ ಕುಮ್ಮಕ್ಕು: ಟೀಕೆ

Last Updated 3 ಡಿಸೆಂಬರ್ 2012, 8:25 IST
ಅಕ್ಷರ ಗಾತ್ರ

ಪಾಂಡವಪುರ: ಜನ ಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡಬೇಕಾದ ಶಾಸಕರು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ ಎಂದು ಬಹಿರಂಗವಾಗಿಯೇ ಜಿಲ್ಲಾಧಿಕಾರಿಗಳನ್ನು ಕೋರಿದ್ದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಟೀಕಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಅವರ ಅಣ್ಣನ ಮಕ್ಕಳು ಅಕ್ಕಪಕ್ಕ ಗ್ರಾಮದ ಬಡವರಿಗೆ ತಲಾ ಅರ್ಧ ಎಕರೆಯನ್ನು ಗಣಿಗಾರಿಕೆ ನಡೆಸಲು ಬಿಟ್ಟುಕೊಡಲು ಸಿದ್ಧವಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ರೈತರು ಉಪಕಸುಬಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಶಾಸಕರು ಹೇಳುತ್ತಾರೆ. ಆದರೆ, ಆ ಪ್ರದೇಶಗಳಲ್ಲಿ ಹಣವುಳ್ಳವರು ಮಾತ್ರ ಗಣಿಗಾರಿಕೆ ನಡೆಸುತ್ತಿದ್ದಾರೆ. ರೈತರು, ಕೃಷಿ ಕಾರ್ಮಿಕರು ಗಣಿಗಾರಿಕೆ ನಡೆಸುತ್ತಿಲ್ಲ.

ಜನರು ಉದ್ಯೋಗಕ್ಕಾಗಿ ಗಣಿಗಾರಿಕೆ ನಡೆಸುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳಲ್ಲಿ ಶಾಸಕರು ಮನವಿ ಮಾಡಿ ತಮ್ಮ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಬೇಬಿ ಬೆಟ್ಟದ ಸುತ್ತಮುತ್ತ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರ ಕಲ್ಯಾಣ ಹಾಗೂ ಪುನರ್ವಸತಿಗೆ ಪ್ರಯತ್ನಿಸದ ಶಾಸಕರು ರಕ್ಷಣೆಗಾಗಿ ಮಾತ್ರ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು. 

ಜೀವನಕ್ಕಾಗಿ ಉದ್ಯೋಗ ಸೃಷ್ಟಿಸಲು ನಡೆಸುತ್ತಿರುವ ಸಣ್ಣ ಪ್ರಮಾಣದ ಗಣಿಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಕಾನೂನು ಬಾಹಿರವಾಗಿ ಸ್ಫೋಟಕ ಬಳಸಿ `ರಿಗ್‌ಬೋರ್ ಬ್ಲಾಸ್ಟ್' ಮೂಲಕ ನಡೆಸುವ ಗಣಿಗಾರಿಕೆಗೆ ನಮ್ಮ ಆಕ್ಷೇಪವಿದೆ. ನಿತ್ಯ ಲಕ್ಷಾಂತರ ದೋಚುತ್ತಿರುವರ ವಿರುದ್ಧವಷ್ಟೆ ನಮ್ಮ ಹೋರಾಟ ಎಂದರು. 

ಹೊನಗಾನಹಳ್ಳಿ ಗ್ರಾಮ ಪಂಚಾಯಿತಿಗೆ ಸುಮಾರು 22 ಕೋಟಿ ಆದಾಯ, ಚಿನಕುರಳಿ ಪಂಚಾಯಿತಿಗೆ ಆರು ಕೋಟಿ ಆದಾಯ ಬರಬೇಕಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ, ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುವ ಮಾತುಗಳನ್ನು ಹೇಳಿದ್ದಾರೆ. ಸರ್ಕಾರಕ್ಕೆ ಬರಬೇಕಾದ ರಾಜಧನಕ್ಕೆ ಅವರೇ ಕತ್ತರಿ ಹಾಕುವ ಯತ್ನದಲ್ಲಿದ್ದಾರೆ. ತಹಶೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ ಸಹ ಜೆಡಿಎಸ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಂಜುನಾಥ್, ಮುಖಂಡರಾದ ಹಾರೋಹಳ್ಳಿ ಲಕ್ಷ್ಮೇಗೌಡ, ಕ್ಯಾತನಹಳ್ಳಿ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT